ಮದ್ಯ ನಿಷೇಧಕ್ಕೆ ಮಹಿಳೆಯರ ಆಗ್ರಹ

ಮಂಗಳವಾರ, ಮಾರ್ಚ್ 26, 2019
26 °C
ಚಾಮರಾಜನಗರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಮತ್ತು ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

ಮದ್ಯ ನಿಷೇಧಕ್ಕೆ ಮಹಿಳೆಯರ ಆಗ್ರಹ

Published:
Updated:
Prajavani

ಚಾಮರಾಜನಗರ: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳೊಂದಿಗೆ ನೂರಾರು ಮಹಿಳೆಯರು ಜಿಲ್ಲಾ ಕೇಂದ್ರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಮಹಿಳಾ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಎದುರು ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಅಧಿಕಾರಿ ಅನುಷ್‌ ಅವರ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ, ಕೇರಳ, ಬಿಹಾರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರಿಂದ ಅಲ್ಲಿನ ಜನರ ಬದುಕು ಸುಧಾರಿಸಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕೆಂದು ಮಹಿಳಾ ಪ್ರತಿಭಟನಾಕರರು ಒತ್ತಾಯಿಸಿದರು.

ಶೇ 50ರಷ್ಟು ಮತದಾರರಾದ ನಮ್ಮ ಕೋರಿಕೆ ಎಂದರೆ ನಮಗೆ ನಿಮ್ಮ ಉಚಿತ ಸೌಲಭ್ಯಗಳು ಬೇಕಾಗಿಲ್ಲ. ಅಕ್ಕಿ, ಗೋಧಿ ಉಚಿತವಾಗಿ ಮಾರಾಟ ಮಾಡುವ ಅಗತ್ಯವಿಲ್ಲ. ಕುಟುಂಬದ ಆದಾಯವನ್ನು ಕುಡಿತಕ್ಕಾಗಿ ಹಾಳು ಮಾಡದೇ ಕುಟುಂಬ ನಿರ್ವಹಣೆಗೆ ಬಳಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ನಮಗೆ ಸರ್ಕಾರದ ಉಚಿತ ಕೊಡುಗೆಗಳು ಬೇಕಾಗಿಲ್ಲ. ಮದ್ಯ ಮಾರಾಟದಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಹಾಗೂ ಮಹಿಳೆಯರು ಅತಂತ್ರರಾಗಿದ್ದಾರೆ. ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸಬೇಕು. 

ಅಲ್ಲದೆ, ಮದ್ಯ ಸೇವನೆ ಮಾಡುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರ ಮೇಲೆ ಶೇ 70ರಷ್ಟು ಹಿಂಸೆ ಈ ಕುಡಿತಕ್ಕೆ ದಾಸರಾಗಿರವವರಿಂದ ನಡೆಯುತ್ತಿದೆ. ಬಡತನಕ್ಕೆ ಮುಖ್ಯ ಕಾರಣ ಮದ್ಯಪಾನ. ಆದ್ದರಿಂದ ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಬೇಕು ಎಂದು ಒತ್ತಾಯಿಸಿದರು.

ಮಕ್ಕಳು ಶಾಲೆ ಬಿಡುವುದು, ಅಪರಾಧ ಕೃತ್ಯಗಳಲ್ಲಿ ತೊಡಗಲು ಈ ಕುಡಿತವೇ ಕಾರಣವಾಗಿದೆ. ಮದ್ಯ ವ್ಯಸನಿಗಳ ಮರಣದಿಂದ ಮಹಿಳೆಯರು ವಿಧವೆಯರಾಗುತ್ತಿದ್ದಾರೆ. ಕುಟುಂಬ ಹಾಗೂ ಗ್ರಾಮದ ಸಾಮರಸ್ಯ ಹದಗೆಡುತ್ತಿದೆ. ಪುರುಷರ ದುಡಿಮೆ ಇಳಿಮುಖವಾಗಿ ಸಾಲದ ಹೊರೆ ಕುಟುಂಬದ ಮೇಲೆ ಬೀಳುತ್ತಿದೆ. 

ಮದ್ಯ ಮಾರಾಟ ನಿಷೇಧ ಮಾಡಿರುವ ರಾಜ್ಯಗಳಲ್ಲಿ ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಂಡಿದೆ. ಅದರಂತೆ ನಮ್ಮ ರಾಜ್ಯ ಸರ್ಕಾರ ಕೂಡ ಅವಲೋಕಿಸಿ ಮದ್ಯ ನಿಷೇಧ ಕಾನೂನು ರಚಿಸಿ ಸಂಪೂರ್ಣ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆ್ಯಡಿಸ್ ಅರ್ನಾಲ್ಡ್‌, ಒಕ್ಕೂಟದ ಸಂಚಾಲಕಿ ಲೀನಾ ಕುಮಾರಿ, ದೀನಬಂಧು ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌. ಜಯದೇವ, ಮಹಿಳೆಯರಾದ ಗೀತಾ, ಭಾಗ್ಯ, ಮಂಜುಳ, ಜಯಮ್ಮ, ಚಿಕ್ಕತಾಯಮ್ಮ ಭಾಗವಹಿಸಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ
ಯುವಪೀಳಿಗೆ ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯ ನಿಷೇಧ ಮಾಡುವುದು ರಾಜ್ಯ ಸರ್ಕಾರದ ಹಕ್ಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದರ ಆಧಾರದಡಿ ಗುಜರಾತ್‌, ಬಿಹಾರ, ಮಣಿಪುರ ಮತ್ತು ನಾಗಲ್ಯಾಂಡ್‌ನಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಿದೆ.

ಅಪರಾಧ ಕೃತ್ಯ ಕಡಿಮೆ: ಈ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಿದ ನಂತರ ಅಪರಾಧ ಕೃತ್ಯ ಕಡಿಮೆಯಾಗಿರುವ ಬಗ್ಗೆ ವರದಿ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !