ಚಾಮರಾಜೇಶ್ವರ ರಥ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

7
ಕಾಮಗಾರಿ ಆರಂಭವಾಗದಿದ್ದರೆ ದೇವಾಲಯದ ಮುಂದೆ ದಸರಾ ಆಚರಣೆಗೆ ಬಿಡುವುದಿಲ್ಲ: ಎಚ್ಚರಿಕೆ

ಚಾಮರಾಜೇಶ್ವರ ರಥ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಚಾಮರಾಜನಗರ: ಇಲ್ಲಿ‌ನ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಾಲಯದ ಬ್ರಹ್ಮರಥದ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿ ಚಾಮರಾಜೇಶ್ವರ ಸ್ವಾಮಿ ಸೇವಾ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಭಕ್ತರು ಶನಿವಾರ ಪ್ರತಿಭಟನೆ ನಡೆಸಿದರು.

ದೇವಾಲಯದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿವರು, ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಮುಜುರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಥ ನಿರ್ಮಾಣ ಕಾಮಗಾರಿ ಆರಂಭವಾಗದಿದ್ದರೆ, ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ದೇವಾಲಯದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಐತಿಹಾಸಿಕ ಮಹತ್ವ ಇದೆ. ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಹೆಗ್ಗಳಿಕೆ ಇದಕ್ಕಿದೆ. ಎರಡು ವರ್ಷಗಳ ಹಿಂದೆ ಕಿಡಿಗೇಡಿಯೊಬ್ಬ ದೊಡ್ಡ ರಥಕ್ಕೆ ಬೆಂಕಿ ಹಚ್ಚಿದ್ದ. ಇದರಿಂದಾಗಿ ಎರಡು ವರ್ಷಗಳಿಂದ ರಥೋತ್ಸವ ನಡೆಯುತ್ತಿಲ್ಲ.

ರಥ ನಿರ್ಮಾಣಕ್ಕಾಗಿ ₹1.20 ಕೋಟಿ ಹಣ ಬಂದರೂ, ಕೆಲಸ ಆರಂಭವಾಗಿಲ್ಲ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿವರು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ವರ್ಷವೂ ರಥೋತ್ಸವ ನಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅವಕಾಶ ನೀಡುವುದಿಲ್ಲ: ‘ತಕ್ಷಣ ಕೆಲಸ ಆರಂಭಿಸದಿದ್ದರೆ, ಜಿಲ್ಲಾಡಳಿತವು ದೇವಾಲಯದ ಮುಂಭಾಗದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಇಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ರಾಮಚಂದ್ರ. ನಗರಸಭಾ ಸದಸ್ಯರಾದ ಸುದರ್ಶನ ಗೌಡ, ಪ್ರಕಾಶ್‌, ಮಂಜುನಾಥ್‌, ರಾಘವೇಂದ್ರ, ಬಸವಣ್ಣ, ಮಹದೇವಯ್ಯ, ಮುಖಂಡರಾದ ಸುರೇಶ್‌ ನಾಯ್ಕ, ಮಹದೇವನಾಯ್ಕ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ನವೆಂಬರ್‌ ಮೊದಲ ವಾರದಲ್ಲಿ ರಥ ನಿರ್ಮಾಣ ಭರವಸೆ

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ವಾಸುದೇವ, ‘ನೂತನ ರಥ ನಿರ್ಮಾಣಕ್ಕೆ ನಕ್ಷೆ ತಯಾರಾಗಿದ್ದು, ಮುಜರಾಯಿ ಇಲಾಖೆಗೆ ಕಳುಹಿಸಲಾಗಿದೆ. ಅನುಮತಿ ದೊರೆತ ಕೂಡಲೇ ಟೆಂಡರ್‌ ಕರೆಯಲಾಗುವುದು’ ಎಂದರು.

ಇವರ ಮಾತಿಗೆ ಮನ್ನಣೆ ನೀಡದ ಪ್ರ‌ತಿಭಟನಾಕಾರರು ಜಿಲ್ಲಾಧಿಕಾರಿ ಅವರೇ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. ನಂತರ, ಸ್ಥಳಕ್ಕೆ ಬಂದ ಶಿರಸ್ತೇದಾರ ಶಂಕರ್‌ರಾವ್‌, ‘ಜಿಲ್ಲಾಧಿಕಾರಿ ಅವರು ಸಭೆಯಲ್ಲಿ ಪಾಲ್ಗೊಂಡಿರುವುದರಿಂದ ಬರಲು ಆಗುತ್ತಿಲ್ಲ. ಆದಷ್ಟು ಬೇಗ ರಥ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು. ಪ್ರತಿಭಟನಾಕಾರರು ಅವರ ಮಾತನ್ನೂ ಒಪ್ಪಲಿಲ್ಲ.

ನಂತರ, ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ‘ಹೊಸ ರಥ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್‌ ಮೊದಲ ವಾರದಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಟ್ಟರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !