ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

6

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ‘ರಾಮಸಮುದ್ರ ಪೂರ್ವ ಪೊಲೀಸ್‌ ಠಾಣೆಯ ಬಳಿ ಇರುವ ಯಜಮಾನ್‌ ವೈನ್‌ಸ್ಟೋರ್‌ (ಮದ್ಯದಂಗಡಿ) ತೆರವುಗೊಳಿಸಬೇಕು’ ಎಂದು ಆಗ್ರಹಿಸಿ ರಾಮಸಮುದ್ರದ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

‘ರಾಮಸಮುದ್ರ ಪೂರ್ವ ಪೊಲೀಸ್‌ ಠಾಣೆಯ ಬಳಿಯೇ ಯಜಮಾನ್‌ ವೈನ್‌ಸ್ಟೋರ್‌ ಇದೆ. ಇಲ್ಲಿ ಪ್ರತಿನಿತ್ಯ ರಾತ್ರಿ 7ರ ನಂತರ ಕುಡುಕರ ಹಾವಳಿ ಹೆಚ್ಚುತ್ತಿದೆ. ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಮದ್ಯದಂಗಡಿ ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘15 ವರ್ಷಗಳಿಂದಲೂ ಹಲವು ಬಾರಿ ತೆರವಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕ್ಷುಲ್ಲಕ ಕಾರಣಗಳಿಗೆ ಗಲಾಟೆಗಳು ನಡೆಯುತ್ತಿವೆ. ಜಾತಿ ವೈಷಮ್ಯದ ನಡುವೆ ಮಾರಾಮಾರಿ ನಡೆಯುತ್ತಿದೆ. ಗುರುವಾರ ರಾತ್ರಿ ಎರಡು ಬಡಾವಣೆಗಳ ಹುಡುಗರ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರಿಗೆ ಹೊಡೆದಾಟವೇ ನಡೆದಿದೆ’ ಎಂದರು.

‘ಅಕ್ಕಪಕ್ಕದ ಮನೆಗಳಿಗೆ ಕಲ್ಲು ತೂರಿದ್ದಾರೆ. ಬಾಟಲಿಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಅಲ್ಲದೆ, ಸಮೀಪದ ಮನೆಗಳ ಹೆಂಚು, ಕಿಟಕಿಗಳು ಒಡೆದಿವೆ. ಸಮುದಾಯಗಳ ನಡುವೆ ಗಲಭೆ ಆರಂಭವಾಗಿದೆ. ಇದಕ್ಕೆಲ್ಲ ಗ್ರಾಮದಲ್ಲಿರುವ ಯಜಮಾನ್‌ ಮದ್ಯದಂಗಡಿ ಕಾರಣ. ಅಂಗಡಿ ತೆರವಾದರೆ ಸಾರ್ವಜನಿಕರು ನೆಮ್ಮದಿಯಿಂದ ಇರಬಹುದು. ಆದ್ದರಿಂದ ಶೀಘ್ರವೇ ಅಂಗಡಿ ತೆರವಿಗೆ ಅಬಕಾರಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನಂಜಯ್ಯ, ಮಹದೇವಸ್ವಾಮಿ, ಚೆನ್ನಂಜಯ್ಯ, ನಾಗರಾಜು, ಪಾಪಣ್ಣ, ಚಂದ್ರಶೇಖರ್, ನಿಂಗಣ್ಣ, ಕೃಷ್ಣಸ್ವಾಮಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !