ಶೇ 7.5 ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

7

ಶೇ 7.5 ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಶುಕ್ರವಾರ  ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಯಿತು.

ಜಿಲ್ಲೆಯ ಯಳಂದೂರಿನ ನಾಡಮೇಗಲಮ್ಮ ದೇವಸ್ಥಾನದಿಂದ ಚಾಮರಾಜನಗರದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡ 1958ರಲ್ಲಿ ಹೊಂದಿದ್ದ ಶೇ 18ರಷ್ಟು ಮೀಸಲಾತಿಯನ್ನು ವಿಂಗಡಿಸಿ ಪರಿಶಿಷ್ಟ ಪಂಗಡಕ್ಕೆ ಶೇ 3ರಷ್ಟು ಮೀಸಲಾತಿ ನೀಡಲಾಯಿತು. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಶೇಖಡವಾರು ಹಂಚಿಕೆಯಾಗಿದ್ದ ಮೀಸಲಾತಿ ಇಂದಿಗೂ ಮುದುವರಿದಿದೆ. ಪ್ರಸ್ತುತ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಹೆಚ್ಚು ಉಪಜಾತಿಗಳು ಸೇರ್ಪಡೆಗೊಂಡಿವೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಶೇ 3ರಷ್ಟಿರುವ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘2011ರ ಜನಗಣತಿ ಅನ್ವಯ, ರಾಜ್ಯದ ಜನಸಂಖ್ಯೆ 6 ಕೋಟಿ. ಇದರಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಸುಮಾರು 48 ಲಕ್ಷ ಹೊಂದಿದೆ. ಈ ಎಲ್ಲ ಅಂಕಿ ಅಂಶಗಳ ಅನ್ವಯ, ಸುಪ್ರೀಂ ಕೋರ್ಟ್‌ ಆದೇಶದಂತೆ ಶೇ 7.5ರಷ್ಟು ಮೀಸಲಾತಿ ಹೆಚ್ಚಿಸುವುದು ಸೂಕ್ತ ಎಂದು ಐಎಎಸ್‌ ಅಧಿಕಾರಿ ಅರವಿಂದ ಜಾಧವ್‌ ಅವರು ಹಿಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರಿಗೆ ವರದಿ ಸಲ್ಲಿಸಿದ್ದರು. ಆದರೂ, ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ’ ಎಂದು ದೂರಿದರು.

‘ಸಮುದಾಯವು ಶೈಕ್ಷಣಿಕ ಹಾಗೂ ಔದ್ಯೋಗಿವಾಗಿ ಸಮತೋಲನ ಕಾಣಬೇಕಿದೆ. ಆರ್ಥಿಕವಾಗಿ ಸದೃಢರಾಗಬೇಕಿದೆ. ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಿದೆ ಹೀಗಾಗಿ, ಶೇ 7.5ರಷ್ಟು ಮೀಸಲಾತಿ ಅತ್ಯಗತ್ಯ’ ಎಂದು ಆಗ್ರಹಿಸಿದರು.

ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಎಂ.ಎನ್.ರಾಜು, ಬಿ.ಸೋಮಣ್ಣ, ಡಿ.ಮಾದೇಶ, ಬಸವರಾಜು, ವೆಂಕಟಾಚಲ, ಮಂಜು, ಜಿ.ರವಿನಾಯಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !