ಸೋಮವಾರ, ನವೆಂಬರ್ 18, 2019
23 °C

ತಂಗುದಾಣ ನಿರ್ಮಿಸಲು ಕಾವಲುಪಡೆ ಆಗ್ರಹ

Published:
Updated:
Prajavani

ಚಾಮರಾಜನಗರ: ನಗರ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾವಲುಪಡೆ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಭುವನೇಶ್ವರಿ ವೃತ್ತ, ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಅಧಿಕಾರಿ ಅನುಷ್‌ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲಾ ಕೇಂದ್ರಕ್ಕೆ ಪ್ರತಿನಿತ್ಯ ವಿವಿಧ ಗ್ರಾಮಗಳಿಂದ ವ್ಯಾಪಾರಸ್ಥರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಜನರು ಬರುತ್ತಾರೆ. ಗ್ರಾಮೀಣ ಭಾಗಗಳಿಗೆ ಬಸ್‌ಗಳ ಸಂಖ್ಯೆ ವಿರಳ. ಈ ವೇಳೆ ಬಸ್‌ಗಾಗಿ ಕಾದುಕುಳಿತುಕೊಳ್ಳಲು ತಂಗುದಾಣಗಳೇ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲಾಡಳಿತ, ನಗರಸಭೆ ಆಡಳಿತ ಗಮನಹರಿಸದಿರುವುದು ವಿಪರ್ಯಾಸ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸಂತೇಮರಹಳ್ಳಿ ವೃತ್ತ, ಎಂಡಿಸಿಸಿ ಬ್ಯಾಂಕ್‌ ಸಮೀಪ, ಹಳೆ ಆರ್‌ಟಿಒ ಕಚೇರಿ ಮುಂಭಾಗ, ಎಲ್‌ಐಸಿ ಕಚೇರಿ ಮುಂಭಾಗ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಂಭಾಗ ರಸ್ತೆ ಅಕ್ಕಪಕ್ಕದಲ್ಲೇ ಬಸ್‌ಗಳ ನಿರೀಕ್ಷೆಯಲ್ಲಿ ನಿಂತುಕೊಳ್ಳುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲಿನಿಂದ ಬಸವಳಿಯುತ್ತಾರೆ. ರಕ್ಷಣೆ ಕೂಡ ಇಲ್ಲವಾಗಿದೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಎಲ್ಲ ಪ್ರಮುಖ ಜಾಗಗಳಲ್ಲಿ ಬಸ್‌ ತಂಗುದಾಣಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಕಾವಲುಪಡೆ ಜಿಲ್ಲ‌ ಘಟಕದ ಅಧ್ಯಕ್ಷ ಕೆ. ಪರಶಿವಮೂರ್ತಿ, ಉಪಾಧ್ಯಕ್ಷ ಅಮೀರ್, ಪ್ರಧಾನ ಕಾರ್ಯದರ್ಶಿ ಸಿ. ಲಕ್ಷ್ಮಣ್, ಎ. ಅಬ್ದುಲ್‌, ಸಾದಿಕ್‌ ಪಾಷಾ, ರಾಜು, ಟೈಲರ್ ಶಕೀರ್, ಚಿಕ್ಕಮಾದಶೆಟ್ಟಿ, ಮಹದೇವ, ಮಂಜು, ಗೋಪಾಲ, ಇಲಿಯಾಸ್ ಇದ್ದರು.

ಪ್ರತಿಕ್ರಿಯಿಸಿ (+)