ಅಹೋರಾತ್ರಿ ಪ್ರತಿಭಟನೆ; ಉಪವಾಸ ಸತ್ಯಾಗ್ರಹ

7
ಅಧ್ಯಕ್ಷ ಸ್ಥಾನಕ್ಕೆ ಸ್ವಾಮೀಜಿ ರಾಜೀನಾಮೆ; ಹಿಂಪಡೆಯಲು ವಿದ್ಯಾರ್ಥಿಗಳ ಮನವಿ

ಅಹೋರಾತ್ರಿ ಪ್ರತಿಭಟನೆ; ಉಪವಾಸ ಸತ್ಯಾಗ್ರಹ

Published:
Updated:
Deccan Herald

ತಾಂಬಾ: ಗ್ರಾಮದ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಂಥನಾಳದ ವೃಷಭಲಿಂಗೇಶ್ವರ ಸ್ವಾಮೀಜಿ ರಾಜೀನಾಮೆ ನೀಡಿದ್ದು, ವಾಪಸ್‌ ಪಡೆಯುವಂತೆ ವಿದ್ಯಾರ್ಥಿಗಳು ಗುರುವಾರ ಸಾಮೂಹಿಕವಾಗಿ ಒತ್ತಾಯಿಸಿದರು.

ಸ್ವಾಮೀಜಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ತಿಳಿಯುತ್ತಿದ್ದಂತೆ, ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಗನಬಸವೇಶ್ವರ ಪದವಿ ಪೂರ್ವ ಕಾಲೇಜು, ಪೌಢಶಾಲೆಯ ಆವರಣದಲ್ಲಿ ಜಮಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

‘ವೃಷಭಲಿಂಗೇಶ್ವರ ಸ್ವಾಮೀಜಿ ರಾಜೀನಾಮೆಯನ್ನು ವಾಪಸ್ ಪಡೆಯಬೇಕು. ಯಾವ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಈಗಿನ ಆಡಳಿತ ಮಂಡಳಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ, ಬದಲಾಯಿಸಲಿ.

ತಕ್ಷಣದಿಂದಲೇ ಸ್ವಾಮೀಜಿ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕು. ಗ್ರಾಮಸ್ಥರ ಸಮ್ಮುಖ ಸಭೆ ನಡೆಯಬೇಕು. ಲೆಕ್ಕಪತ್ರವನ್ನು ಹಿಂದಿನ ಸಮಿತಿ ಸಲ್ಲಿಸಬೇಕು. ಈ ಪ್ರಕ್ರಿಯೆಗಳು ನಡೆಯುವ ತನಕವೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಉಪವಾಸ ನಿರತರು ಪಟ್ಟುಹಿಡಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಕೆಲವರು ಇದೇ ಸಂದರ್ಭ ಆಗ್ರಹಿಸಿದರು. ಬಿಇಒ ಕಚೇರಿ ಸಿಬ್ಬಂದಿ ಗ್ರಾಮಸ್ಥರ ಅಸಮಾಧಾನ ತಣಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ರಾತ್ರಿಯೂ ಪ್ರತಿಭಟನೆ ಮುಂದುವರೆದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಕಾಶ ಮುಂಜಿ, ಮುಖಂಡರಾದ ರಾಯಗೊಂಡ ಪೂಜಾರಿ, ರೇವಪ್ಪ ಹೊರ್ತಿ, ರಾಯಗೊಂಡ ನಾಟೀಕಾರ, ರಾಜು ಗಂಗನಹಳ್ಳಿ, ಪುಟ್ಟುಗೌಡ ಪಾಟೀಲ, ರಾಘು ಬಿರಾದರ, ಶಂಕರ ಪ್ಯಾಟಿ, ಸಿದ್ದಗೊಂಡಪ್ಪ ಸೋಮಲಿಂಗ, ಬಾಬುಗೌರ, ಪ್ರಕಾಶ ಪಾಟೀಲ, ಸುರೇಶ ನಡುಗಡ್ಡಿ, ನಾಗು ಜೋರಾಪುರ, ಸಿದ್ಥಪ್ಪ ಚಟ್ಟರಕಿ, ಬಸು ಬಾಗಲಕೋಟ, ಶ್ರೀನಾಥ ಚಟ್ಟರಕಿ, ಭೀಮಾಶಂಕರ ಬ್ಯಾಗಳ್ಳಿ, ಸುರೇಶ ಬೆಲ್ಲದ, ಮಲಕಪ್ಪ ನಡಗಡ್ಡಿ, ರವಿ ನಡಗಡ್ಡಿ, ಗುರುರಾಜ ಚಿಂಚೋಳಿ, ಮಾಸಿಮ ವಾಲಿಕಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ವಿದ್ಯಾವರ್ಧಕ ಸಂಘದಡಿ ನಡೆಯುತ್ತಿರುವ ವಿವಿಧ ಶಾಲಾ–ಕಾಲೇಜುಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ತಾಂಬಾ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !