ಶನಿವಾರ, ಅಕ್ಟೋಬರ್ 19, 2019
28 °C
ಗುರುವಾರ ರಾತ್ರಿ ನಡೆದ ಘಟನೆ, ಬೈಕ್‌ ಡಿಕ್ಕಿಯಾಗಿ ಪಾದಚಾರಿ ಸಾವು

ಪರಿಹಾರಕ್ಕೆ ಆಗ್ರಹ: ಶವ ಇಟ್ಟು ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಬೈಕ್‌ ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಮೃತನ ಸಂಬಂಧಿಕರು ಹಾಗೂ ಚೆನ್ನೀಪುರಮೋಳೆಯ ಗ್ರಾಮಸ್ಥರು ನಗರದ ಜಿಲ್ಲಾಸ್ಪತ್ರೆ ಮುಂದೆ ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು. 

ನಗರದ ಜೋಡಿ ರಸ್ತೆಯಲ್ಲಿ (ಜೆಎಸ್‌ಎಸ್‌ ಕಾಲೇಜು ಬಳಿ) ಗುರುವಾರ ರಾತ್ರಿ ಬೈಕ್‌ ಡಿಕ್ಕಿ ಹೊಡೆದು ಚೆನ್ನೀಪುರದಮೋಳೆ ನಿವಾಸಿ ಗೋವಿಂದ (40) ಅವರು ತೀವ್ರವಾಗಿ ಗಾಯಗೊಂಡಿದ್ದರು. ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗೋವಿಂದ ಅವರು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಘಟನೆ ಸಂಬಂಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಾಯಾಳು ಮೃತಪ‍ಟ್ಟಿದ್ದರೂ ಬೈಕ್‌ ಸವಾರ ರಾಮಸಮುದ್ರದ ನಿವಾಸಿ ಶ್ರೀನಿವಾಸ್‌ ಅವರು ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಿಲ್ಲ. ಸ್ಥಳಕ್ಕೆ ಬಂದು ದುಃಖದಲ್ಲಿ ಭಾಗಿಯಾಗಲಿಲ್ಲ ಎಂದು ಆರೋಪಿಸಿ ಶವವನ್ನು ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಇಟ್ಟುಕೊಂಡು ದಿಢೀರ್‌ ಆಗಿ ಪ್ರತಿಭಟನೆ ನಡೆಸಿದರು. ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಕೂಡ ಜಮಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. 

ಮಾನವೀಯ ನೆಲೆಯಲ್ಲಿ ಬೈಕ್‌ ಸವಾರನಿಂದ ಪರಿಹಾರ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ವಾಪಸ್‌ ಪಡೆದರು.

ನಗರಸಭಾ ಸದಸ್ಯರಾದ ಭಾಗ್ಯಮ್ಮ, ಚಿಕ್ಕರಾಜು, ಮುಖಂಡರಾದ ಮಹದೇವು, ಸಿದ್ದಪ್ಪ, ಮಲ್ಲು ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Post Comments (+)