ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

7
ಕರ್ನಾಟಕ ದಕ್ಷಿಣ ಪ್ರಾಂತ್ಯ ಭಾರತೀಯ ಕಿಸಾನ್‌ ಸಂಘ ಜಿಲ್ಲಾ ಘಟಕ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಚಾಮರಾಜನಗರ: ‘ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರದ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇಲಾಖೆಗಳ ಪ್ರತಿ ಹಂತದಲ್ಲಿಯೂ ಹಣ ನೀಡಿದರೆ ಮಾತ್ರ ಅಧಿಕಾರಿಗಳು ಕೆಲಸ ಮಾಡುತ್ತಾರೆ. ರೈತರು ಇಂತಹ ವ್ಯವಸ್ಥೆಯಿಂದ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಫಸಲ್‌ ಬಿಮಾ ಯೋಜನೆಗೆ ಅಗತ್ಯ ತಿದ್ದುಪಡಿ ತರಬೇಕು. ಇದರಿಂದ ಮುಂದಿನ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ. ಈ ಯೋಜನೆಗೆ ರೈತರಿಗೆ ತಿಳಿಯುವಂತೆ ಅಗತ್ಯ ಪ್ರಚಾರ ನೀಡಬೇಕು. ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು’ ಎಂದರು.

‘ಸಿರಿಧಾನ್ಯ, ದ್ವಿದಳ ಧಾನ್ಯಗಳಿಗೆ ಕೇದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಹೋಬಳಿ ಕೇಂದ್ರಗಳಲ್ಲಿ ಕೃಷಿ ಮಾರುಕಟ್ಟೆ ತೆರೆಯಬೇಕು. ಹಾಲು ಒಕ್ಕೂಟಗಳು ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಎನ್‌ಆರ್‌ಐಜಿ ಯೋಜನೆ ಸೌಲಭ್ಯ ರೈತರಿಗೆ ತಲುಪುತ್ತಿಲ್ಲ. ಅಧಿಕಾರಿಗಗಳು, ಗುತ್ತಿಗೆದಾರರಿಗೆ ಇದರ ಕಾಮಗಾರಿಗಳ ಮೂಲಕ ಹೆಚ್ಚು ಆರ್ಥಿಕ ಅನುಕೂಲವಾಗುತ್ತಿದೆ’ ಎಂದು ದೂರಿದರು.

ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ ರಾಮಾಪುರ, ಜಿಲ್ಲಾ ಘಟಕದ ಅಧ್ಯಕ್ಷ  ಎನ್‌. ನಟರಾಜು, ಕಾರ್ಯದರ್ಶಿ ಬೋಸ್ಕೊ, ತಾಲ್ಲೂಕು ಅಧ್ಯಕ್ಷ ಹರೀಶ್ ಕುಮಾರ್, ಸದಸ್ಯರಾದ ಚಂದ್ರಶೇಖರ್‌, ರಾಜಣ್ಣ, ಕೃಷ್ಣೇಗೌಡ ಭಾಗವಹಿಸಿದ್ದರು.

ಸಾಲಮನ್ನಾ ಮಾಡಲು ಆಗ್ರಹ
ನೀಡಿರುವ ಭರವಸೆಯಂತೆ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ರೇಷ್ಮೆಗೂಡಿಗೆ ಲಾಭದಾಯಕ ಬೆಲೆ ನಿಗದಿಗೊಳಿಸಬೇಕು. ಒಂದು ಟನ್‌ ಕಬ್ಬಿಗೆ ಕನಿಷ್ಠ ₹4,000 ನಿಗದಿಗೊಳಿಸಬೇಕು. ಈ ಹಣವನ್ನು ತಿಂಗಳ ಒಳಗಾಗಿ ಕಾರ್ಖಾನೆಗಳೇ ಪಾವತಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಶಿಕ್ಷಣ ನೀತಿ ಬದಲಾಗಬೇಕು. ಪಶುಸಂಗೋಪನಾ ಇಲಾಖೆಯ ನಾಟಿ ತಳಿಯ ಗೋವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ರೈತರ ಜಮೀನುಗಳಿಗೆ ದಾಳಿ ನಡೆಸುವ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು. ಅಕ್ರಮ ಸಕ್ರಮ ಯೋಜನೆಯಡಿ ಸಕ್ರಮಗೊಳಿಸಿರುವ ರೈತರ ಜಮೀನುಗಳಿಗೆ ಶೀಘ್ರ ವಿದ್ಯುತ್‌ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !