ಶಿಕ್ಷಕರ ನೇಮಕಾತಿ: ನಿಯಮ ತಿದ್ದುಪಡಿಗೆ ಒತ್ತಾಯ

ಬುಧವಾರ, ಮಾರ್ಚ್ 27, 2019
26 °C

ಶಿಕ್ಷಕರ ನೇಮಕಾತಿ: ನಿಯಮ ತಿದ್ದುಪಡಿಗೆ ಒತ್ತಾಯ

Published:
Updated:
Prajavani

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸೇರಿಸಿರುವ ಅವೈಜ್ಞಾನಿಕ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿ ಬಂಧುತ್ವ ವೇದಿಕೆ–ಕರ್ನಾಟಕದ ನೇತೃತ್ವದಲ್ಲಿ ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ಅಭ್ಯರ್ಥಿಗಳು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.

‘ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕ ಹುದ್ದೆಗೆ, ಗಣಿತ–ವಿಜ್ಞಾನ ಶಿಕ್ಷಕ ಎಂಬ ಒಂದೇ ಹುದ್ದೆ ಸೃಷ್ಟಿಸಿ ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಲಾಗಿದೆ. ಎಲ್ಲಾ ವಿಷಯದಲ್ಲೂ ಈ ರೀತಿ ಗೊಂದಲ ಉಂಟುಮಾಡುವ ಅಂಶಗಳನ್ನು ಸೇರಿಸಿದ್ದಾರೆ. ಇದು ಪ್ರಾಥಮಿಕ ಶಾಲೆಗಳನ್ನು ಮುಚ್ಚಿಸಲು ನಡೆಸುತ್ತಿರುವ ಹುನ್ನಾರ’ ಎಂದು ಅಭ್ಯರ್ಥಿ ಪಿ.ಪರಶುರಾಮ ಆರೋಪಿಸಿದರು.

‘ಈ ಹುದ್ದೆಗೆ ಅರ್ಜಿ ಸಲ್ಲಿಸಲು ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಪದವೀಧರರನ್ನು ಹೊರತುಪಡಿಸಿ ಸಿಬಿಝಡ್‌, ಪಿಎಂಸಿಎಸ್‌, ಪಿಎಂಇ, ಪಿಎಂಜಿ, ಕಾಮರ್ಸ್‌, ಸಂಖ್ಯಾಶಾಸ್ತ್ರ, ಇಂಗ್ಲಿಷ್‌...ಯಾವುದೇ ಪದವಿಯಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಸಿಇಟಿಗೆ ಅವಕಾಶ ನೀಡಿಲ್ಲ. ಈ ಕಾರಣ ಟಿಇಟಿ ಬರೆದ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಿಸಿಎಂ ಅಲ್ಲದೆ ಬೇರೆ ವಿಷಯಗಳಲ್ಲಿ ಪದವಿ ಮುಗಿಸಿ‌, ಬಿ.ಇಡಿ ಅಧ್ಯಯನ ಮಾಡಿರುವವರೂ ಇದ್ದಾರೆ. ಟಿಇಟಿಯಲ್ಲೂ ಪಾಸಾಗಿದ್ದಾರೆ. ಈ ಎಲ್ಲರನ್ನು ಸಿಇಟಿಗೆ ಪರಿಗಣಿಸಬೇಕು’ ಎಂದು ಮತ್ತೊಬ್ಬ ಅಭ್ಯರ್ಥಿ ರಾಧಿಕಾ ಒತ್ತಾಯಿಸಿದರು.

ಕಲಬುರ್ಗಿಯ ಶಿವಪುತ್ರ, ‘ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಯಸುವವರು ಶೇ 50 ಅಂಕ ಪಡೆಯಬೇಕು ಎಂಬ ಕಡ್ಡಾಯ ಅಂಶ ಖಂಡನೀಯವಾದದ್ದು’ ಎಂದರು.

ವೇದಿಕೆ ಸಂಚಾಲಕ ಈಶ್ವರ ಅವರು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್‌.ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಎಸ್‌.ಜಯಕುಮಾರ್‌, ‘ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದರು.

ಸರ್ಕಾರ ತಿದ್ದುಪಡಿ ತಂದಿರುವುದು ಏನು?

ಗಣಿತ ಮತ್ತು ವಿಜ್ಞಾನ ವಿಷಯಗಳ ‘ಗಣಿತ–ವಿಜ್ಞಾನ ಶಿಕ್ಷಕ’ ಎಂಬ ಒಂದೇ ಹುದ್ದೆ ಸೃಷ್ಟಿಸಿರುವುದು ಅಭ್ಯರ್ಥಿಗಳ ಭೀತಿಗೆ ಕಾರಣವಾಗಿದೆ. ಶಿಕ್ಷಣ ಇಲಾಖೆ 10,116 ಪದವಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಸಿಎಂನವರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ವಿಜ್ಞಾನದ ಬೇರೆ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. ಈ ಸಮಸ್ಯೆಗೆ ಸರ್ಕಾರ 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿತ್ತು. ಹೊಸ ನೇಮಕಾತಿ ಸಂಬಂಧ ಇಲಾಖೆ ಇದೇ 6ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸೋಮವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !