ಚಾಮರಾಜನಗರ: ಕಾರ್ಮಿಕ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

7
2000ಕ್ಕೂ ಹೆಚ್ಚು ಜನ ಭಾಗಿ, ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹ, ಕೇಂದ್ರದ ವಿರುದ್ಧ ಆಕ್ರೋಶ

ಚಾಮರಾಜನಗರ: ಕಾರ್ಮಿಕ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಭಾಗವಾಗಿ, ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು.

ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ, ವಿಮಾ ನೌಕರರ ಸಂಘ, ಆಶಾ ಕಾರ್ಯಕರ್ತರ ಸಂಘ, ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಷನ್‌, ಅಖಿಲ ಭಾರತ ವಿದ್ಯುತ್‌ ನೌಕರರ ಒಕ್ಕೂಟ, ಹಾಸ್ಟೆಲ್‌ ಗುತ್ತಿಗೆ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಗಳ ಜಿಲ್ಲಾ ಘಟಕಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ನೌಕರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ವರೆಗೆ ಮೆರವಣಿಗೆ ನಡೆಸಿದರು. ಭವನದ ಮುಂಭಾಗ ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆ ಬಳಿಕ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

‘ಪ್ರಸ್ತುತ ಇರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಕಾರ್ಮಿಕ ವಿರೋಧಿ ನೀತಿಗಳ ತಿದ್ದುಪಡಿಗೆ ಬಲಾಢ್ಯರಿಂದ ಸರ್ಕಾರದ ಮೇಲೆ ಒತ್ತಡವಿದೆ. ಯಾವುದೇ ಕಾರಣಕ್ಕೂ ಕಾರ್ಪೊರೇಟ್‌ ಬಂಡವಾಲ ಪರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘2017ರ ಮೋಟಾರು ವಾಹನ (ತಿದ್ದುಪಡಿ) ಮಸೂದೆಯು ಸಾರಿಗೆ ರಂಗವನ್ನು ಕಾರ್ಪೊರೇಟ್‌ಗೆ ಪರಭಾರೆ ಮಾಡುವಂತಹದ್ದಾಗಿದ್ದು, ಅದನ್ನು ಜಾರಿಗೆ ತರಬಾರದು’ ಎಂದು ಆಗ್ರಹಿಸಿದರು.

‘ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಹಾಗೂ ಸಾಮಾಜಿಕ ರಕ್ಷಣೆ ನೀಡುವುದು, ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಕಾರ್ಮಿಕರ ವೇತನವನ್ನು ಕನಿಷ್ಠ ₹ 18 ಸಾವಿರಕ್ಕೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಕೃಷಿ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ನಿವಾರಣೆಗೆ ಪರಿಹಾರ ಕಂಡುಹಿಡಿಯಬೇಕು. ಡಾ.ಸ್ವಾಮಿನಾಥನ್‌ ವರದಿಯನ್ನು ಯಥಾವತ್‌ ಜಾರಿಗೆ ತರಬೇಕು’ ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಸುರೇಶ್, ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಸುಜಾತ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಶಿವಮ್ಮ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಾ,  ಸಿ.ನಾಗರಾಜು, ಪುಟ್ಟರಾಜು, ಎನ್‌.ಮಲ್ಲಿಕಾರ್ಜುನ, ಕವಿತಾ ಹಾಗೂ ಮತ್ತಿತರರು ಇದ್ದರು.

ಬಿಗಿ ಭದ್ರತೆ: ಪ್ರತಿಭಟನಾ ಮೆರವಣಿಗೆಗೆ ಹಾಗೂ ಜಿಲ್ಲಾಡಳಿತ ಭವನದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

‘ಬಂದ್‌ಗೆ ಕರೆ ಕೊಟ್ಟಿಲ್ಲ’

‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಘಟಕವು ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸುವಂತೆ ವಿವಿಧ ಸಂಘಟನೆಗಳನ್ನು ಕೇಳಿಕೊಂಡಿತ್ತು. ಸಂಪೂರ್ಣ ಬಂದ್‌ಗೆ ಕರೆ ಕೊಟ್ಟಿರಲಿಲ್ಲ. ಶಾಂತಿಯುತ ಸಾರ್ವತ್ರಿಕ ಮುಷ್ಕರಕ್ಕೆ ಮಾತ್ರ ಕರೆ ನೀಡಲಾಗಿತ್ತು’ ಎಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಸುರೇಶ್‌ ಅವರು ಹೇಳಿದರು.

ಅಂಚೆ ನೌಕರರ ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಚಾಮರಾಜನಗರ ಅಂಚೆ ಕಚೇರಿ ಮುಂಭಾಗ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.

‘ಗ್ರಾಮೀಣ ಅಂಚೆ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಿ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನ ಸೌಲಭ್ಯ ಒದಗಿಸಬೇಕು. 7ನೇ ವೇತನ ಆಯೋಗದ ವೇತನ ಪರಿಷ್ಕರಣೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !