ಶುಕ್ರವಾರ, ನವೆಂಬರ್ 15, 2019
20 °C
ಚಾಮರಾಜನಗರ: ಚಾಮುಲ್‌ನಿಂದ ಬೃಹತ್‌ ಪ್ರತಿಭಟನೆ, ನೂರಾರು ಮಂದಿ ಭಾಗಿ

ವಿದೇಶಿ ಹಾಲಿನ ಉತ್ಪನ್ನಗಳ ಮುಕ್ತ ಮಾರಾಟ ಬೇಡ

Published:
Updated:
Prajavani

ಚಾಮರಾಜನಗರ: ಭಾರತದಲ್ಲಿ ವಿದೇಶಿ ಹಾಲು ಹಾಗೂ ಅದರ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಾಮುಲ್‌) ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು. 

ಚಾಮರಾಜೇಶ್ವರ ದೇವಸ್ಥಾನದಲ್ಲಿ ಸಮಾವೇಶಗೊಂಡ ಚಾಮುಲ್‌ ಆಡಳಿತ ಮಂಡಳಿಯ ಸದಸ್ಯರು ಹಾಗೂ ರೈತರು, ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಭವನದ ಮುಂಭಾಗ ಧರಣಿ ಕುಳಿತರು.

 ‘ಹೈನುಗಾರಿಕೆ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ರದ್ದುಪಡಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸುಂಕ ರದ್ದುಮಾಡಿ ಹೊರದೇಶಗಳ ಹೈನು ಉತ್ಪನ್ನಗಳನ್ನು ದೇಶದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದರೆ ರೈತ ಕುಟುಂಬಗಳಿಗೆ ತೀವ್ರ ತೊಂದರೆಯಾಗಲಿದೆ’ ಎಂದು ಪ್ರತಿಭಟನಕಾರರು ಕಳವಳ ವ್ಯಕ್ತಪಡಿಸಿದರು. 

‘ಜಿಲ್ಲೆಯಲ್ಲಿ 465 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 41 ಸಾವಿರ ರೈತ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಜಿಲ್ಲೆಯಲ್ಲಿ ಹಸು ಸಾಕಣೆ ಮುಖ್ಯ ಕಸುಬಾಗಿದ್ದು,  ಪ್ರತಿನಿತ್ಯ 3 ಲಕ್ಷ ಲೀಟರ್‌ ಉತ್ಪಾದಿಸಲಾಗುತ್ತಿದೆ. ಪ್ರತಿ ದಿನ ₹ 77 ಲಕ್ಷ ಆದಾಯ ಬರುತ್ತಿದೆ’ ಎಂದು ಪ್ರತಿಭಟನಕಾರರು ಹೇಳಿದರು. 

‘ಅಂತರರಾಷ್ಟ್ರೀಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ರಫ್ತು ಮಾಡಿದಲ್ಲಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹೈನುಗಾರಿಕೆ ಮೇಲೆ ತುಂಬಾ ಪರಿಣಾಮ ಬೀರಲಿದೆ’ ಎಂದರು. 

‘ವಿದೇಶದಲ್ಲಿ ಹಸುಗಳು ಹೆಚ್ಚು ಹಾಲು ನೀಡುತ್ತವೆ. ನಮ್ಮ ಹಸುಗಳು ಕಡಿಮೆ ಹಾಲನ್ನು ನೀಡುತ್ತವೆ. ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಿದಲ್ಲಿ ವಿದೇಶಿ ಹಾಲಿನ ಉತ್ಪನ್ನಗಳೊಂದಿಗೆ ನಮ್ಮ ಉತ್ಪನ್ನಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮ ಉದ್ಯಮ ನಷ್ಟಕ್ಕೆ ಗುರಿಯಾಗಲಿದೆ’ ಎಂದು ಪ್ರತಿಭಟನಕಾರರು ಹೇಳಿದರು.

‘ರೈತ ಕುಟುಂಬಗಳಲ್ಲದೇ, ಹೈನು ಉದ್ಯಮದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 1 ಲಕ್ಷಕ್ಕೂ ಹೆಚ್ಚು ಮಂದಿ ಅವಲಂಬಿತರಾಗಿದ್ದು, ಅವರು ಕೂಡ ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬರಬಹುದು’ ಎಂದು ಕಳವಳ ವ್ಯಕ್ತಪಡಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. 

ಚಾಮುಲ್‌ ಅಧ್ಯಕ್ಷ ಸಿ.ಎಸ್‌.ಗುರುಮಲ್ಲಪ್ಪ, ನಿರ್ದೇಶಕರಾದ ಎಂ.ನಂಜುಂಡಸ್ವಾಮಿ, ಕೆ.ಆರ್‌.ಬಸವರಾಜು, ಎಂ.ಎಸ್‌.ರವಿಶಂಕರ್‌, ಎಚ್‌.ಎಸ್‌.ನಂಜುಂಡ ಪ್ರಸಾದ್‌, ಡಿ.ಮಾದಪ್ಪ, ಕೆ.ಎಂ.ಮಾದಪ್ಪ, ಪ್ರಮೋದ ಹಾಗೂ ನೂರಾರು ಮಂದಿ ರೈತರು ಪ್ರತಿಭಟನೆಯನ್ನು ಭಾಗವಹಿಸಿದ್ದರು. 

ನೆರೆ ಪರಿಹಾರ: ₹ 5 ಲಕ್ಷ ದೇಣಿಗೆ 

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರಕ್ಕಾಗಿ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಚಾಮುಲ್‌ ವತಿಯಿಂದ ₹ 5 ಲಕ್ಷ ದೇಣಿಗೆ ನೀಡಲಾಯಿತು. 

ಒಕ್ಕೂಟದ ಅಧ್ಯಕ್ಷ ಸಿ.ಎಸ್‌.ಗುರುಮಲ್ಲಪ್ಪ ಹಾಗೂ ನಿರ್ದೇಶಕರು ಪರಿಹಾರದ ಚೆಕ್‌ ಅನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ನೀಡಿದರು.

ಪ್ರತಿಕ್ರಿಯಿಸಿ (+)