ಪಿಯು ಫಲಿತಾಂಶ: 6ರಿಂದ 12ನೇ ಸ್ಥಾನಕ್ಕೆ ಕುಸಿದ ಚಾಮರಾಜನಗರ ಜಿಲ್ಲೆ

ಶುಕ್ರವಾರ, ಏಪ್ರಿಲ್ 26, 2019
24 °C
ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ಭಾರಿ ಕುಸಿತ, ವಾಣಿಜ್ಯ ವಿಭಾಗದಲ್ಲಿ ಹೆಚ್ಚಳ

ಪಿಯು ಫಲಿತಾಂಶ: 6ರಿಂದ 12ನೇ ಸ್ಥಾನಕ್ಕೆ ಕುಸಿದ ಚಾಮರಾಜನಗರ ಜಿಲ್ಲೆ

Published:
Updated:

ಅಂಕಿ ಅಂಶ

5,873 ಪರೀಕ್ಷೆ ಬರೆದ ವಿದ್ಯಾರ್ಥಿಗಳು

4,268 ಉತ್ತೀರ್ಣರಾದ ವಿದ್ಯಾರ್ಥಿಗಳು

ಶೇ 72.67 ವಿದ್ಯಾರ್ಥಿಗಳು ಉತ್ತಿರ್ಣರಾದ ಪ್ರಮಾಣ

ಚಾಮರಾಜನಗರ: ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಡಿ ಜಿಲ್ಲೆ ಚಾಮರಾಜನಗರ ರಾಜ್ಯದಲ್ಲಿ 12ನೇ ಸ್ಥಾನ ಗಳಿಸಿದೆ. ಜಿಲ್ಲೆಯಲ್ಲಿ ಶೇ 72.67ರಷ್ಟು ಫಲಿತಾಂಶ ದಾಖಲಾಗಿದೆ.

ಕಳೆದ ವರ್ಷ ಶೇ 75.3ರಷ್ಟು ಫಲಿತಾಂಶ ದಾಖಲಿಸಿ ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿದ್ದ ಜಿಲ್ಲೆ ಈ ವರ್ಷ ಆರು ಸ್ಥಾನಗಳಷ್ಟು ಕುಸಿತ ಕಂಡಿದೆ. 2016–17ರಲ್ಲಿ ಜಿಲ್ಲೆ 9ನೇ ಸ್ಥಾನದಲ್ಲಿತ್ತು. ಆ ವರ್ಷ ಶೇ 65.34ರಷ್ಟು ಫಲಿತಾಂಶ ದಾಖಲಾಗಿತ್ತು.

ಈ ಬಾರಿ ಜಿಲ್ಲೆಯಾದ್ಯಂತ 5,873 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,268 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿನಿಯರ ಮೇಲುಗೈ: ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 72.71ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ 57.41ರಷ್ಟು ಗಂಡುಮಕ್ಕಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ತೆಗೆದುಕೊಂಡ 3,311 ಗಂಡುಮಕ್ಕಳಲ್ಲಿ 1,901 ಮಂದಿ ಹಾಗೂ 3,613 ಹೆಣ್ಣುಮಕ್ಕಳಲ್ಲಿ 2,627 ‌ಮಂದಿ ಉತ್ತೀರ್ಣರಾಗಿದ್ದಾರೆ.

ಕುಸಿದ ವಿಜ್ಞಾನ ಫಲಿತಾಂಶ: ಮೂರು ವಿಭಾಗಗಳ ಪೈಕಿ ವಿಜ್ಞಾನ ವಿಭಾಗದ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಜಿಲ್ಲೆಯ ಒಟ್ಟಾರೆ ಫಲಿತಾಂಶ ಕಡಿಮೆಯಾಗಲು ಕಾರಣ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ವಿಜ್ಞಾನದಲ್ಲಿ ಶೇ 74.02ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ 59.05ಕ್ಕೆ ಕುಸಿದಿದೆ. ವಿಜ್ಞಾನ ವಿಷಯ ತೆಗೆದುಕೊಂಡಿದ್ದ 1,221 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 721 ಮಂದಿ ತೇರ್ಗಡೆಯಾಗಿದ್ದಾರೆ. 

‘ಜೀವವಿಜ್ಞಾನ ವಿಷಯದ ಪರೀಕ್ಷೆ ಸ್ವಲ್ಪ ಕಷ್ಟ ಇತ್ತು. ನಮ್ಮ ವಿದ್ಯಾರ್ಥಿಗಳು ಚೆನ್ನಾಗಿ ಮಾಡಿಲ್ಲ. ಗ್ರಾಮೀಣ ಭಾಗದ ಮಕ್ಕಳು ಪಠ್ಯದಿಂದಲೇ ನೇರ ಪ್ರಶ್ನೆಗಳನ್ನು ನಿರೀಕ್ಷಿಸುತ್ತಾರೆ. ಪ್ರಶ್ನೆಯನ್ನು ಸ್ವಲ್ಪ ಬೇರೆ ರೀತಿಯಲ್ಲಿ ಕೇಳಿದರೂ ಅವರಿಗೆ ಉತ್ತರಿಸುವುದು ಕಷ್ಟವಾಗುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿ.ಆರ್‌. ಶ್ಯಾಮಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಉತ್ತಮ ಫಲಿತಾಂಶಕ್ಕಾಗಿ ತುಂಬಾ ಶ್ರಮ ಹಾಕಿದ್ದೆವು. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಳ್ಳೆಯ ಫಲಿತಾಂಶ ದಾಖಲಾಗಿದೆ. ವಿಜ್ಞಾನದಲ್ಲಿ ಶೇ 70ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೂ ರಾಜ್ಯಮಟ್ಟದಲ್ಲಿ ಜಿಲ್ಲೆ ಉತ್ತಮ ಸ್ಥಾನ ಗಳಿಸುತ್ತಿತ್ತು. ಈಗಿನ ಫಲಿತಾಂಶದಿಂದ ಸ್ವಲ್ಪ ಬೇಸರವಾಗಿದೆ’ ಎಂದು ಅವರು ಹೇಳಿದರು.

ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ

ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿದ್ದಾರೆ. 

2016–17ನೇ ಸಾಲಿನಲ್ಲಿ ಶೇ 79.75ರಷ್ಟು ಫಲಿತಾಂಶ ಬಂದಿದ್ದರೆ, ಹೋದ ವರ್ಷ ಶೇ 81.38ರಷ್ಟಿತ್ತು. ಈ ಬಾರಿ ಶೇ 83.18ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದಿರುವ 2,348 ವಿದ್ಯಾರ್ಥಿಗಳ ಪೈಕಿ 1,953 ಮಂದಿ ತೇರ್ಗಡೆ ಹೊಂದಿದ್ದಾರೆ.

ಕಲಾ ವಿಭಾಗದಲ್ಲಿ ಕೊಂಚ ಇಳಿಕೆ: ಕಳೆದ ವರ್ಷದ ತೇರ್ಗಡೆ ಪ್ರಮಾಣಕ್ಕೆ ಹೋಲಿಸಿದರೆ, ಕಲಾ ವಿಭಾಗದ ಫಲಿತಾಂಶದಲ್ಲಿ ಈ ಸಲ ಸ್ವಲ್ಪ ಇಳಿಕೆಯಾಗಿದೆ. ಕಳೆದ ವರ್ಷ ಶೇ 69.74ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ಶೇ 69.18ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !