ದ್ವಿತೀಯ ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ನಿರ್ಧಾರ

ಭಾನುವಾರ, ಮಾರ್ಚ್ 24, 2019
28 °C
ಇದೇ 21 ರಿಂದ ಪಿಯು ಉಪನ್ಯಾಸಕರ ಅನಿರ್ದಿಷ್ಟ ಧರಣಿ

ದ್ವಿತೀಯ ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ನಿರ್ಧಾರ

Published:
Updated:

ಬೆಂಗಳೂರು: ಬೇಸಿಗೆ ರಜೆ ಕಡಿತ ಕೈ ಬಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಇದೇ 21 ರಿಂದ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದು, ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನೂ ಬಹಿಷ್ಕರಿಸಲಿದ್ದಾರೆ.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳ ಸಭೆಯ ಬಳಿಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಇದೇ 20 ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಪದವಿ ಪೂರ್ವ ಶಿಕ್ಷಕರನ್ನು ಪ್ರತಿನಿಧಿಸುವ ವಿಧಾನಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮತ್ತು ಭೋಜೇಗೌಡ ಅವರು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯವರ ಜತೆ ಮಾತುಕತೆ ನಡೆಸಲಿ. ನಾವ್ಯಾರೂ ಭೇಟಿಗೆ ಹೋಗುವುದಿಲ್ಲ’ ಎಂದು ಹೇಳಿದರು.

ಇದಕ್ಕೆ ಮುನ್ನ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗುವುದು. ಈ ಹೋರಾಟಕ್ಕೆ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳೂ ಬರಬೇಕು. ಅಧಿಕಾರಿಗಳು ಸಂಘವನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಸಂಘದ ಅಸ್ತಿತ್ವದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಎದ್ದು ನಿಲ್ಲಬೇಕು. ಜೈಲಿಗೆ ಹೋಗಲೂ ಸಿದ್ಧರಾಗಬೇಕಾಗಿದೆ’ ಎಂದು ಹೇಳಿದರು.

‘ಮೌಲ್ಯಮಾಪನಕ್ಕೆ ಹಾಜರಾಗದೇ ಇರುವುದರಿಂದ ಉಪನ್ಯಾಸಕರಿಗೆ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ರಜೆಯ ದಿನಗಳಲ್ಲಿ ಮೌಲ್ಯಮಾಪನ ನಡೆಯುವುದರಿಂದ, ಹಾಜರಾಗುವುದು ಅಥವಾ ಬಿಡುವುದು ಉಪನ್ಯಾಸಕರ ವಿವೇಚನೆಗೆ ಬಿಟ್ಟಿದ್ದು. ಒತ್ತಡ ಹೇರಿ ಅಥವಾ ಹೆದರಿಸಿ ಮೌಲ್ಯಮಾಪನ ಮಾಡಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಒಮ್ಮೆ ದೂರವಾಣಿ ಮೂಲಕ ಮಾತನಾಡುವಾಗ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದರು. ಯಾವುದೋ ರಾಜ್ಯದಿಂದ ಬಂದ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಮಗೂ ತಾಕತ್ತು ಇದೆ. ಅವರಂತೆ ನಾವೂ ಕೂಡಾ ಸರ್ಕಾರದ ಸೇವಕರೇ ಹೊರತು, ಗುಲಾಮರಲ್ಲ’ ಎಂದು ತಿಮ್ಮಯ್ಯ ಹೇಳಿದರು.

 

ಬೆಂಬಲ ಸೂಚಿಸಿದ ಮೇಲ್ಮನೆ ಸದಸ್ಯರು

ಉಪನ್ಯಾಸಕರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ವಿಧಾನಪರಿಷತ್‌ನ ಜೆಡಿಎಸ್‌ನ ಸದಸ್ಯರು ಬೆಂಬಲ ಸೂಚಿಸಿದ್ದಾರೆ.

‘ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಮತ್ತು ಮುಖ್ಯಮಂತ್ರಿ ಜತೆ ಗುರುವಾರ ಮಾತುಕತೆ ನಡೆಸುತ್ತೇವೆ’ ಎಂದು ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.

ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್‌ ಸದಸ್ಯ ಭೋಜೇಗೌಡ ಅವರೂ ಉಪನ್ಯಾಸಕರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ಸಮಸ್ಯೆ ಇತ್ಯರ್ಥಪಡಿಸಲು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುವ ಭರವಸೆ ನೀಡಿದರು.

 

ಸಕಾಲದಲ್ಲಿ ಫಲಿತಾಂಶ: ಜಾಫರ್‌

ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಕಾಲದಲ್ಲಿ ನಡೆಸಿ, ಫಲಿತಾಂಶ ಪ್ರಕಟಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫರ್‌ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಭರವಸೆ ನೀಡಿದ್ದಾರೆ.

‘ಸರ್ಕಾರಿ ಪದವಿ ಪೂರ್ವ ಶಿಕ್ಷಕರು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಆದ ಕಾರಣ, ಅವರು ಮೌಲ್ಯ ಮಾಪನಕ್ಕೆ ಹಾಜರಾಗುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ಉಪನ್ಯಾಸಕರು ಅಷ್ಟು ಕಠಿಣ ಹೃದಯಿಗಳಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

 ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸರ್ಕಾರಿ ಉಪನ್ಯಾಸಕರ ಕರ್ತವ್ಯದ ಭಾಗವಾಗಿದೆ. ಕರ್ತವ್ಯಕ್ಕೆ ಚ್ಯುತಿ ತಂದರೆ, ಕ್ರಮ ಕೈಗೊಳ್ಳುವುದಕ್ಕೂ ಕಾನೂನಿನಲ್ಲಿ ಅವಕಾಶಗಳಿವೆ. ಹೀಗಾಗಿ ರಜೆ ಎಂದುಕೊಂಡು ಸಾಮೂಹಿಕವಾಗಿ ಗೈರಾಗಲೂ ಸಾಧ್ಯವಿಲ್ಲ. ಒಂದು ವೇಳೆ ಉಪನ್ಯಾಸಕರು ಗೈರಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಗೈರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

 

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !