ಸಾರ್ವಜನಿಕರಿಗೆ ತೊಂದರೆ; ಸಿಬ್ಬಂದಿಗೆ ಹೊರೆ

7
ವಿಜಯಪುರ ಮಹಾನಗರ ಪಾಲಿಕೆಯಲ್ಲಿ 847 ಹುದ್ದೆಗಳು ಖಾಲಿ

ಸಾರ್ವಜನಿಕರಿಗೆ ತೊಂದರೆ; ಸಿಬ್ಬಂದಿಗೆ ಹೊರೆ

Published:
Updated:
Prajavani

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಕಚೇರಿಯಲ್ಲಿ 847 ವಿವಿಧ ಹುದ್ದೆಗಳು ಖಾಲಿಯಿವೆ. ಇದು ಒಂದೆಡೆ ಸಾರ್ವಜನಿಕರಿಗೆ ತೊಂದರೆ ಸೃಷ್ಟಿಸಿದ್ದರೆ, ಇನ್ನೊಂದೆಡೆ ನೌಕರರಿಗೂ ಹೊರೆಯಾಗಿ ಪರಿಣಮಿಸಿದೆ.

ನಗರಸಭೆಯಿಂದ ಮೇಲ್ದರ್ಜೆಗೇರಿದ ನಂತರ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಕೆಲಸಗಳು ನಿಗದಿತ ಅವಧಿಯೊಳಗೆ ಸುಗಮವಾಗಿ ನಡೆಯಲು, ರಾಜ್ಯ ಸರ್ಕಾರ ಅವಶ್ಯವಿರುವ 1725 ಹುದ್ದೆಗಳ ಮಂಜೂರಾತಿ ನೀಡಿದೆ. ಆದರೆ ಐದು ವರ್ಷ ಗತಿಸಿದರೂ, ನೇಮಕಾತಿ ಮಾಡಿಕೊಳ್ಳದ ಹಿನ್ನೆಲೆ ಅರ್ಧದಷ್ಟು ಹುದ್ದೆಗಳು ಖಾಲಿ ಉಳಿದಿವೆ ಎನ್ನಲಾಗಿದೆ.

‘ಸಿಬ್ಬಂದಿ ಕೊರತೆಯಿಂದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ, ಮೂರ್ನಾಲ್ಕು ಜನರ ಕೆಲಸವನ್ನು ನಾನೊಬ್ಬನೇ ಮಾಡುತ್ತಿದ್ದೇನೆ. ಇದರಿಂದ ಕೆಲಸದ ಒತ್ತಡ ಹೆಚ್ಚಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಯದಿದ್ದರೂ ಬೈಸಿಕೊಳ್ಳಬೇಕು. ಸಾರ್ವಜನಿಕರಿಂದಲೂ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದೇನೆ. ಒಮ್ಮೊಮ್ಮೆ ಯಾಕಾದ್ರೂ ಈ ನೌಕರಿಗೆ ಬಂದಿದ್ದೇನೆ ಅನಿಸುತ್ತದೆ. ಬದುಕಿಗಾಗಿ ಕಿರಿಕಿರಿಯಲ್ಲೂ ಕೆಲಸ ಮಾಡುತ್ತಿರುವುದಾಗಿ’ ಹೆಸರು ಹೇಳಲಿಚ್ಚಿಸದ ಪಾಲಿಕೆಯ ನೌಕರರೊಬ್ಬರು ‘ಪ್ರಜಾವಾಣಿ’ ಬಳಿ ತಮ್ಮ ಅಳಲು ತೋಡಿಕೊಂಡರು.

‘ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರ ಕೆಲಸಗಳು ನಿಗದಿತ ಅವಧಿಯಲ್ಲಿ ಮುಗಿಯಲು ಕಷ್ಟವಾಗುತ್ತಿದೆ. ಜತೆಗೆ ನೌಕರರು ಸಹ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಸಾರ್ವಜನಿಕರ ಮತ್ತು ನೌಕರರ ಹಿತದೃಷ್ಟಿಯಿಂದ ಸರ್ಕಾರ ಆದಷ್ಟು ಶೀಘ್ರದಲ್ಲಿ ಖಾಲಿಯಿರುವ ಹುದ್ದೆಗಳ ನೇಮಕ ಮಾಡಬೇಕು’ ಎನ್ನುತ್ತಾರೆ ಸಿದ್ದನಗೌಡ ಬಿರಾದಾರ.

‘ಪಾಲಿಕೆಯಲ್ಲಿ ಸದ್ಯ 315 ಕಾಯಂ ನೌಕರರು, 563 ಗುತ್ತಿಗೆ ನೌಕರರು ಸೇರಿ 878 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಬಾಕಿಯಿರುವ 847 ಸಿಬ್ಬಂದಿಯ ಕೆಲಸವನ್ನು ಇರುವ ಸಿಬ್ಬಂದಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಹೆಚ್ಚಿನ ಜವಾಬ್ದಾರಿ ವಹಿಸಿದರೂ ನೌಕರರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಷ್ಟು ಶೀಘ್ರ ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡರೆ ಅನುಕೂಲವಾಗುತ್ತದೆ’ ಎಂದು ಮಹಾನಗರ ಪಾಲಿಕೆ ಕಚೇರಿ ವ್ಯವಸ್ಥಾಪಕಿ ಗೀತಾ ನಿಂಬಾಳಕರ ತಿಳಿಸಿದರು.

‘ಉಪ ಆಯುಕ್ತರು 2, ಮುಖ್ಯ ಲೆಕ್ಕಾಧಿಕಾರಿ 1, ಮುಖ್ಯ ಲೆಕ್ಕ ಪರಿಶೋಧಕರು 1, ನಗರ ಯೋಜನಾ ಅಧಿಕಾರಿ 1, ಕಾರ್ಯ ನಿರ್ವಹಣಾಧಿಕಾರಿ 2, ಕಾನೂನು ಅಧಿಕಾರಿ 1, ವಲಯ ಅಧಿಕಾರಿಗಳು 3, ಅಭಿವೃದ್ಧಿ ಅಧಿಕಾರಿಗಳು 3, ಸಹಾಯಕ ಎಂಜಿನಿಯರ್‌ 11, ಕಚೇರಿ ವ್ಯವಸ್ಥಾಪಕರು 14, ಸಹಾಯಕ ಕಂದಾಯ ಅಧಿಕಾರಿ 3, ಸಮಿತಿ ಕಾರ್ಯದರ್ಶಿ 4, ಸರ್ವೇ ಸೂಪರ್‌ವೈಸರ್‌ 2, ಕಿರಿಯ ಎಂಜಿನಿಯರ್‌ 18, ಹಿರಿಯ ಆರೋಗ್ಯ ನಿರೀಕ್ಷಕ 7, ಸ್ಟೆನೋಗ್ರಾಫರ್‌ 24, ಎಫ್‌ಡಿಎ 13, ಎಸ್‌ಡಿಎ 51, ಎಫ್‌ಜಿಆರ್‌ಐ 8, ವರ್ಕ್‌ ಇನ್ಸ್‌ಪೆಕ್ಟರ್‌ 30, ಕಮ್ಯುನಿಟಿ ಆರ್ಗನೈಸರ್‌ 10, ಡಾಟಾ ಎಂಟ್ರಿ ಆಪರೇಟರ್ 48, ಬಿಲ್ ಕಲೆಕ್ಟರ್‌ 28, ಯುಜಿಡಿ ಆಪರೇಟರ್ 15, ವಾಟರ್ ಅಪ್ಲೈ ಹೆಲ್ಪರ್ 48, ವಾಲ್ವ್‌ ಮ್ಯಾನ್‌ 64, ಯುಜಿಡಿ ಹೆಲ್ಪರ್‌ 88, ಪೌರ ಕಾರ್ಮಿಕರು 100, ಲೋಡರ್‌ 33 ಸೇರಿದಂತೆ ಒಟ್ಟು 847 ಹುದ್ದೆಗಳು ಖಾಲಿಯಿವೆ’ ಎಂದು ಅವರು ಮಾಹಿತಿ ನೀಡಿದರು.

ಆಯುಕ್ತರಿಗೂ ಹೆಚ್ಚುವರಿ ಜವಾಬ್ದಾರಿ
ವಿಜಯಪುರ ಮಹಾನಗರ ಪಾಲಿಕೆ ಆಡಳಿತವೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಇಂಥಹ ಸನ್ನಿವೇಶದಲ್ಲೂ ರಾಜ್ಯ ಸರ್ಕಾರ ಪಾಲಿಕೆ ಆಯುಕ್ತ ಡಾ.ಔದ್ರಾಮ್‌ ಅವರಿಗೆ ವಿಜಯಪುರ ಉಪ ವಿಭಾಗಾಧಿಕಾರಿ ಹುದ್ದೆ ನೀಡಿದೆ. ಎರಡು ಮಹತ್ವದ ಜವಾಬ್ದಾರಿ ನಿಭಾಯಿಸುವಲ್ಲಿ ಆಯುಕ್ತರು ಹೈರಾಣಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !