ಕಬ್ಬಿಗೆ ₹ 2,612 ಎಫ್‌ಆರ್‌ಪಿ ನಿಗದಿ

7
ಕಬ್ಬಿನ ಬಾಕಿ: ಆಡಳಿತ ಮಂಡಳಿ, ಬೆಳೆಗಾರರ ದ್ವಂದ್ವ ಹೇಳಿಕೆ

ಕಬ್ಬಿಗೆ ₹ 2,612 ಎಫ್‌ಆರ್‌ಪಿ ನಿಗದಿ

Published:
Updated:
Deccan Herald

ವಿಜಯಪುರ: ರಾಜ್ಯದ ಸಕ್ಕರೆ ಕಾರ್ಖಾನೆಗಳು, 2018–19ನೇ ಸಾಲಿನಲ್ಲಿ ರೈತರಿಂದ ಖರೀದಿಸುವ ಪ್ರತಿ ಟನ್ ಕಬ್ಬಿಗೆ ₹ 2,612 ಎಫ್‌ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶಿಸಿದ್ದಾರೆ.

ಶೇ 10ರಷ್ಟು ಸಕ್ಕರೆ ಇಳುವರಿ ಇರುವ ಪ್ರತಿ ಟನ್‌ ಕಬ್ಬಿಗೆ ₹2,750 ನಿಗದಿಪಡಿಸಲಾಗಿದೆ. ಶೇ 10ಕ್ಕಿಂತ ಹೆಚ್ಚಿನ ಪ್ರತಿ ಶೇಕಡಾ ಒಂದಕ್ಕೆ ಟನ್‌ಗೆ ₹ 275 ಹೆಚ್ಚುವರಿಯಾಗಿ ನೀಡಬೇಕು. ಶೇ 9.5ಕ್ಕಿಂತ ಕಡಿಮೆ ಇಳುವರಿ ಇರುವ ಪ್ರತಿ ಟನ್‌ ಕಬ್ಬಿಗೂ ₹ 2,612 ದರ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ರಾಜ್ಯದಲ್ಲಿರುವ ಎಲ್ಲ ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳು 2017–18ನೇ ಸಾಲಿನಲ್ಲಿ ನುರಿಸಿದ ಕಬ್ಬಿನ ಪ್ರಮಾಣ, ಸಕ್ಕರೆ ಇಳುವರಿಯನ್ನು ಪರಿಗಣಿಸಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ಎರಡು ಸಹಕಾರಿ ಹಾಗೂ ಏಳು ಖಾಸಗಿ ಸೇರಿದಂತೆ ಒಟ್ಟು ಒಂಬತ್ತು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಕಾರ್ಖಾನೆಯಲ್ಲಿ ದೊರಕುವ ಸಕ್ಕರೆ ಇಳುವರಿ ಪರಿಗಣಿಸಿ, ಒಂದೊಂದು ಕಾರ್ಖಾನೆಗೂ ಪ್ರತ್ಯೇಕ ಎಫ್‌ಆರ್‌ಪಿ ದರವನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ ನಿಗದಿಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ರೈತರಿಗೆ ಪಾವತಿಸುವಂತೆ ಸೂಚಿಸಿದೆ.

‘ಕಾರ್ಖಾನೆಗೆ ಕಬ್ಬು ಪೂರೈಸಿದ ರೈತನಿಗೆ, ಆಡಳಿತ ಮಂಡಳಿಗಳು ಮೊದಲ ಕಂತಿನಲ್ಲಿ ಪಾವತಿಸಬೇಕಿರುವ ಎಫ್‌ಆರ್‌ಪಿ ದರ ಇದಾಗಿದ್ದು; ನಂತರದಲ್ಲಿ ಉಪ ಉತ್ಪನ್ನಗಳಿಂದ ದೊರಕುವ ಮೊತ್ತದಲ್ಲೂ ಟನ್‌ಗೆ ಇಂತಿಷ್ಟು ಧಾರಣೆಯನ್ನು ರೈತರಿಗೆ ನೀಡಬೇಕಿದೆ. ಇದು ರೈತರು, ಕಾರ್ಖಾನೆಯ ಆಡಳಿತ ಮಂಡಳಿಯ ಜತೆಗಿನ ಮಾತುಕತೆಯಲ್ಲಿ ನಿರ್ಧಾರವಾಗಲಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ದರ ಘೋಷಿಸದೆ ಕಬ್ಬು ನುರಿಸುವಿಕೆ ಆರಂಭ

‘ಸಕ್ಕರೆ ಕಾರ್ಖಾನೆಗಳು ದರ ಘೋಷಿಸದೇ ಕಬ್ಬು ನುರಿಸಲು ಆರಂಭಿಸಿವೆ. 2017–18ನೇ ಸಾಲಿನಲ್ಲಿ ಪ್ರತಿ ಟನ್‌ಗೆ ₹ 2,200 ಕೊಡಲಾಗಿದೆ. ಉಳಿಕೆ ಮೊತ್ತಕ್ಕಾಗಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಆಲಮೇಲದ ಕಬ್ಬು ಬೆಳೆಗಾರ ಗೊಲ್ಲಾಳ ಉಪ್ಪಿನ.

‘ಈ ವರ್ಷ ಮಳೆಯೂ ಇಲ್ಲವಾಗಿದೆ. ಸಕ್ಕರೆ ಇಳುವರಿಯೂ ಕುಸಿತಗೊಂಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಗದಿಪಡಿಸುವ ಎಫ್‌ಆರ್‌ಪಿ ಸಿಗುವುದು ಅನುಮಾನವಾಗಿದೆ. ರಾಜ್ಯ ಸರ್ಕಾರ ಈ ಹಿಂದಿನ ವರ್ಷಗಳಂತೆ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಪ್ರೋತ್ಸಾಹ ಧನ ಘೋಷಿಸಬೇಕು’ ಎಂಬುದು ಅವರ ಆಗ್ರಹ.

‘ನಮ್ಮ ನೆರೆಯ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದೆ. ನಮ್ಮಲ್ಲಿ ಇದುವರೆಗೂ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆಯೇ ನಡೆದಿಲ್ಲ. ಹೋರಾಟವೂ ಛಾಪು ಕಳೆದುಕೊಂಡಿದೆ. ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರನ ಪಾಲಿಗೆ ಸರ್ಕಾರವೇ ಧಾವಿಸಬೇಕಿದೆ. ವೈಜ್ಞಾನಿಕ ಬೆಲೆ ನೀಡಲು ಮುಂದಾಗಬೇಕಿದೆ’ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ದುದ್ದಗಿ.

‘ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಸಲ್ಲಿಸಿರುವ ಮಾಹಿತಿಯಲ್ಲಿ, ಬೆಳೆಗಾರರ ಎಲ್ಲ ಬಾಕಿ ನೀಡಲಾಗಿದೆ ಎಂದು ತಿಳಿಸಿದ್ದಾರೆ’ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !