ಮೋದಿ ಅಲೆಯಲ್ಲಿ ಕಮಲ ಪಡೆಯ ಹುರುಪು..!

ಸೋಮವಾರ, ಜೂನ್ 17, 2019
27 °C
ಆಡಳಿತಾರೂಢ ಸಚಿವ–ಶಾಸಕರಿಗೆ ಪ್ರತಿಷ್ಠೆ; ಬಹಿರಂಗ ಪ್ರಚಾರಕ್ಕೆ ತೆರೆ ಇಂದು

ಮೋದಿ ಅಲೆಯಲ್ಲಿ ಕಮಲ ಪಡೆಯ ಹುರುಪು..!

Published:
Updated:
Prajavani

ವಿಜಯಪುರ: ಇಂಡಿ, ತಾಳಿಕೋಟೆ, ಬಸವನಬಾಗೇವಾಡಿ ಪುರಸಭೆಯ 64 ವಾರ್ಡ್‌ಗಳಿಗೆ ಮೇ 29ರಂದು ಮತದಾನ ನಡೆಯಲಿದ್ದು, ಸೋಮವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಲೋಕಸಭಾ ಚುನಾವಣಾ ಫಲಿತಾಂಶದ ಹುರುಪಿನಲ್ಲಿ ಬಿಜೆಪಿ ಬಿರುಸಿನ ಪ್ರಚಾರ ಕೈಗೊಂಡಿದೆ. ರಾಜ್ಯದಲ್ಲೂ ಬದಲಾವಣೆಯಾಗಲಿದ್ದು, ಅಭಿವೃದ್ಧಿಗಾಗಿ ಬೆಂಬಲಿಸುವಂತೆ ಮತದಾರರ ಮನೆ ಮನೆ ಬಾಗಿಲಿಗೂ ಎಡತಾಕಿ ಮನವಿ ಮಾಡುತ್ತಿದೆ.

ಬಸವನಬಾಗೇವಾಡಿ ಪುರಸಭೆಯನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ಪ್ರತಿನಿಧಿಸುತ್ತಿದ್ದು, ಇಂಡಿ ಪುರಸಭೆಯನ್ನು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಪ್ರತಿನಿಧಿಸುತ್ತಿದ್ದು, ತಮ್ಮ ಪಾರಮ್ಯ ಉಳಿಸಿಕೊಳ್ಳಲಿಕ್ಕಾಗಿ ತಂತ್ರಗಾರಿಕೆ ರೂಪಿಸಿದ್ದಾರೆ.

ಇಂಡಿಯಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ

ತಲಾ 23 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ, ಕಾಂಗ್ರೆಸ್‌ ಗೆಲುವಿಗಾಗಿ ಜಿದ್ದಾಜಿದ್ದಿಯ ಪೈಪೋಟಿ ನಡೆಸಿವೆ. ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ನೇರ ಹಣಾಹಣಿಗಿಳಿದಿವೆ. 15 ವಾರ್ಡ್‌ಗಳಿಂದ ಅಖಾಡಕ್ಕಿಳಿದಿರುವ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವ ಇರಾದೆಯಿಂದ ಗೆಲುವಿನ ತಂತ್ರಗಾರಿಕೆ ರೂಪಿಸುತ್ತಿದೆ. ಪಕ್ಷೇತರರು ಸಹ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದು, ಬಿರುಸಿನ ಪ್ರಚಾರ ನಡೆಸಿದ್ದಾರೆ.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿಜೆಪಿಯ ಗೆಲುವಿನ ಹೊಣೆಗಾರಿಕೆ ಹೊತ್ತಿದ್ದು, ಚುನಾವಣಾ ತಂತ್ರಗಾರಿಕೆ ರೂಪಿಸಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ದಯಾಸಾಗರ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಒಟ್ಟಾಗಿ ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಬಿ.ಡಿ.ಪಾಟೀಲ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಇನ್ನಿತರ ಮುಖಂಡರು ಸಾಥ್‌ ನೀಡಿದ್ದು, ನಿರ್ಣಾಯಕ ಸ್ಥಾನಕ್ಕಾಗಿ ನಿಗದಿತ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತಿದ್ದಾರೆ.

ಶಾಸಕ ಯಶವಂತರಾಯಗೌಡ ಪಾಟೀಲಗೆ ಪುರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಪಾರಮ್ಯ ಮುಂದುವರೆಸಬೇಕಿದೆ. ಇದಕ್ಕಾಗಿಯೇ ಇಂಡಿಯಲ್ಲೇ ಠಿಕಾಣಿ ಹೂಡಿದ್ದು, ತಂತ್ರಗಾರಿಕೆ ರೂಪಿಸಿದ್ದಾರೆ. ಮೇ 31ರಂದು ಯಾರ ಕೈ ಮೇಲುಗೈ ಆಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಚುನಾವಣಾ ಅಖಾಡ ಬಿರುಸುಗೊಂಡಿದೆ. ನೆತ್ತಿ ಸುಡುವ ಬಿಸಿಲು ಲೆಕ್ಕಕ್ಕಿಲ್ಲವಾಗಿದೆ. ಇಂಡಿ ಪಟ್ಟಣದಲ್ಲಿರುವ 50ರಿಂದ 60 ಆಟೊಗಳು ಯಾವೊಂದು ಜನರ ಸಂಚಾರಕ್ಕೆ ಲಭ್ಯವಿಲ್ಲವಾಗಿವೆ. ಎಲ್ಲವೂ ಚುನಾವಣಾ ಪ್ರಚಾರಕ್ಕೆ ಮೀಸಲಾಗಿವೆ.

ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯಾವೊಂದು ವಿಷಯವೂ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ. ಪಕ್ಷೇತರರು ಸೇರಿದಂತೆ ಪಕ್ಷಗಳ ಅಭ್ಯರ್ಥಿಗಳು ಒಬ್ಬರಾದ ಮೇಲೆ ಒಬ್ಬರು, ಮನೆ ಬಾಗಿಲಿಗೆ ಮತ ಯಾಚನೆಗಾಗಿ ಎಡ ತಾಕುವುದು ಬೇಸರ ಮೂಡಿಸುತ್ತಿದೆ ಎಂಬ ಅನಿಸಿಕೆ ಬಹುತೇಕ ಮತದಾರರದ್ದು.

ತಾಳಿಕೋಟೆಯಲ್ಲಿ ಆಮಿಷಗಳ ಸುರಿಮಳೆ..!
ಪಕ್ಷೇತರರ ಅಖಾಡವಾದ ತಾಳಿಕೋಟೆ ಪುರಸಭೆಗೆ ಮತದಾನ ಸಮೀಪಿಸುತ್ತಿದ್ದಂತೆ, ಆಮಿಷಗಳ ಸುರಿಮಳೆ ಆರಂಭವಾಗಿದೆ. ಪಕ್ಷಗಳು ಸಹ ತಮ್ಮ ಅಸ್ತಿತ್ವಕ್ಕಾಗಿ ಅಖಾಡದಲ್ಲಿದ್ದು, ತುರುಸಿನ ಸ್ಪರ್ಧೆ ನಡೆದಿದೆ.

ಮುಂಜಾನೆ–ಮುಸ್ಸಂಜೆ ಪ್ರಚಾರ ಎಡೆಬಿಡದೆ ಜರುಗಿದೆ. ಹಲವರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರ ಜತೆಯಲ್ಲೂ ಪ್ರಚಾರದಲ್ಲಿ ತಲ್ಲೀನರಾಗಿದ್ದು, ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಲು ಮುಂದಾಗುತ್ತಿದ್ದಂತೆ, ತೆರೆಯ ಮರೆಗೆ ಸರಿಯುವ ಚಿತ್ರಣ ಹಾಸ್ಯ ಸನ್ನಿವೇಶ ಸೃಷ್ಟಿಸಿದೆ. ಗೋಪ್ಯ ಮತ ಯಾಚನೆ ಬಿರುಸಿನಿಂದ ನಡೆದಿದೆ.

ಸಾಮಾಜಿಕ ಜಾಲತಾಣವೂ ಸಕ್ರಿಯವಾಗಿದೆ. ಸಂದೇಶ, ಮನವಿಗಳ ಮಹಾಪೂರವೇ ಹರಿದಿದೆ. ಸಂಬಂಧಿಕರು, ಒಡನಾಡಿಗಳ ಮೂಲಕ ಮತ ಯಾಚನೆ ಎಗ್ಗಿಲ್ಲದೆ ನಡೆದಿದೆ. ಮತದಾನ ದಿನ ಸಮೀಪಿಸಿದಂತೆ ಒತ್ತಡವೂ ಹೆಚ್ಚಲಾರಂಭಿಸಿದೆ.

23 ವಾರ್ಡ್‌ಗಳಲ್ಲಿ ಈಗಾಗಲೇ ನಾಲ್ಕು ವಾರ್ಡ್‌ಗೆ ಅವಿರೋಧ ಆಯ್ಕೆಯಾಗಿದೆ. 19 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದ್ದು, ನಾಲ್ಕೈದು ವಾರ್ಡ್‌ ತುರುಸಿನ ಕಣವಾಗಿವೆ. ಇದರಲ್ಲಿ ಮೂರನೇ ವಾರ್ಡ್‌ ಸಹ ಒಂದಾಗಿದ್ದು, ನಡಹಳ್ಳಿ–ನಾಡಗೌಡ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿದೆ.

ತಾಳಿಕೋಟೆ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಈಗಾಗಲೇ 19ನೇ ವಾರ್ಡ್‌ನಿಂದ ಕಾಂಗ್ರೆಸ್‌ ಸದಸ್ಯೆಯಾಗಿ ಅವಿರೋಧ ಆಯ್ಕೆಯಾಗಿರುವ ಅಕ್ಕಮಹಾದೇವಿ ಸೈದಪ್ಪ ಕಟ್ಟಿಮನಿ ಮತ್ತೊಮ್ಮೆ ಅಧ್ಯಕ್ಷೆಯಾಗುವ ಕನಸಿನೊಂದಿಗೆ ತಂತ್ರಗಾರಿಕೆ ಹೆಣೆದಿದ್ದಾರೆ. ಮಾಜಿ ಸಚಿವ ಸಿ.ಎಸ್.ನಾಡಗೌಡರ ಆಶೀರ್ವಾದದ ಬಲವೂ ಇವರಿಗೆ ಸಿಕ್ಕಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಬಾಗೇವಾಡಿಯಲ್ಲಿ ಅಂತಿಮ ಕಸರತ್ತು..!
ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿಯ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಅಂತಿಮ ಕಸರತ್ತು ನಡೆಸಿದ್ದಾರೆ. ಮುಂಜಾನೆಯಿಂದ–ಮುಸ್ಸಂಜೆಯವರೆಗೂ ಪಟ್ಟಣದ 21 ವಾರ್ಡ್‌ಗಳಲ್ಲೂ ಆಟೊಗಳ ಅಬ್ಬರ ಬಿರುಸಾಗಿದೆ. ಧ್ವನಿವರ್ಧಕದ ಮೂಲಕ ಮತ ಯಾಚನೆ ಎಗ್ಗಿಲ್ಲದೆ ನಡೆದಿದೆ.

ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತದಾರರ ಮನೆಗಳಿಗೆ ಈಗಾಗಲೇ ಹಲವು ಬಾರಿ ತೆರಳಿ ಮತ ಯಾಚಿಸಿದ್ದರೂ; ಮತ್ತೊಮ್ಮೆ ಹೋಗುತ್ತಿದ್ದಾರೆ. ತಮ್ಮ ಆಪ್ತರು, ಒಡನಾಡಿಗಳನ್ನು ಕಳುಹಿಸಿ ಮತ ಯಾಚಿಸುತ್ತಿರುವುದು ವಿಶೇಷವಾಗಿದೆ.

ಪುರಸಭೆ ಆಡಳಿತದಲ್ಲಿ ತಂದೆಯ ಬಲ ಹೆಚ್ಚಿಸಲಿಕ್ಕಾಗಿಯೇ ಆರೋಗ್ಯ ಸಚಿವ ಶಿವಾನಂದ ಪಾಟೀಲ ಪುತ್ರಿ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಓಣಿ ಓಣಿ ಸುತ್ತುತ್ತಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಪ್ರತಿ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಪರ ಬೆಂಬಲಿಗರೊಟ್ಟಿಗೆ ಮತ ಯಾಚಿಸಿದ್ದಾರೆ.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ ಸೇರಿದಂತೆ ಇತರರು ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದು, ಮೋದಿ ಅಲೆಯಲ್ಲಿ ಹಿಂದಿನ ಮುಖಭಂಗ ತಪ್ಪಿಸಿಕೊಳ್ಳಲು ತಂತ್ರಗಾರಿಕೆ ನಡೆಸಿದ್ದಾರೆ.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಸ್.ಪಾಟೀಲ ಒಂಬತ್ತನೇ ವಾರ್ಡ್‌ನಿಂದ ಸ್ಪರ್ಧೆಗಿಳಿದಿದ್ದು, ತಮ್ಮ ವಾರ್ಡ್ ಸೇರಿದಂತೆ ಇನ್ನುಳಿದ ವಾರ್ಡ್‌ಗಳ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮೂರು ಪಕ್ಷದವರು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಸಹ ಪರ ಸ್ಥಳದಲ್ಲಿರುವ ಮತದಾರರನ್ನು ಗುರುತಿಸಿ, ಮತದಾನದ ದಿನ ಮತ ಚಲಾಯಿಸಲು ಬರುವಂತೆ ದೂರವಾಣಿ ಮೂಲಕ ಮನವಿ ಮಾಡುವ ಜತೆಯಲ್ಲೇ ಅಗತ್ಯ ವ್ಯವಸ್ಥೆ ಮಾಡಿರುವುದು ಗೊತ್ತಾಗಿದೆ. ಕೆಲ ವಾರ್ಡ್‌ಗಳಲ್ಲಿ ಪಕ್ಷಗಳ ಗೆಲುವಿಗೆ ಪಕ್ಷೇತರರು ತೊಡರುಗಾಲಾಗಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !