ಗರಿಗೆದರಿದ ರಾಜಕಾರಣ; ಶಾಸಕರ ಪ್ರತಿಷ್ಠೆಯ ಕಣ..!

ಭಾನುವಾರ, ಮೇ 19, 2019
34 °C
ಇಂಡಿ, ಬಸವನಬಾಗೇವಾಡಿ, ತಾಳಿಕೋಟೆ ಪುರಸಭೆಗಳಿಗೆ ಚುನಾವಣೆ ಘೋಷಣೆ

ಗರಿಗೆದರಿದ ರಾಜಕಾರಣ; ಶಾಸಕರ ಪ್ರತಿಷ್ಠೆಯ ಕಣ..!

Published:
Updated:
Prajavani

ವಿಜಯಪುರ: ಇಂಡಿ, ಬಸವನಬಾಗೇವಾಡಿ, ತಾಳಿಕೋಟೆ ಪುರಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ 29ರಂದು ಮತದಾನ ನಡೆಯಲಿದೆ. ಈ ಮೂರು ಪುರಸಭೆ ಪ್ರತಿನಿಧಿಸುವ ಶಾಸಕ, ಸಚಿವರಿಗೆ ಈ ಚುನಾವಣೆ ಇದೀಗ ಪ್ರತಿಷ್ಠೆಯ ಕಣವಾಗಿದೆ.

ಇಂಡಿ, ಬಸವನಬಾಗೇವಾಡಿಯಲ್ಲಿ ಹಾಲಿ ಕಾಂಗ್ರೆಸ್‌ ಆಡಳಿತವಿದ್ದರೆ, ತಾಳಿಕೋಟೆ ಪುರಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯರ ಆಡಳಿತ ನಡೆದಿತ್ತು.

ಬಸವನಬಾಗೇವಾಡಿ ಪ್ರತಿನಿಧಿಸುವ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಇಂಡಿ ಪ್ರತಿನಿಧಿಸುವ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಮುದ್ದೇಬಿಹಾಳದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿ ಶಾಸಕರಾದ ಬಿಜೆಪಿಯ ಎ.ಎಸ್.ಪಾಟೀಲ ನಡಹಳ್ಳಿಗೆ ತಾಳಿಕೋಟೆ ಪುರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ತಮ್ಮ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸಿಕೊಳ್ಳುವ ಜತೆಗೆ, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭೆಯ ಚುನಾಯಿತ ಆಡಳಿತ ಮಂಡಳಿಯಲ್ಲಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಹ ಈ ಸಚಿವ, ಶಾಸಕರದ್ದಾಗಿದೆ. ಇದಕ್ಕಾಗಿಯೇ ಈಗಾಗಲೇ ತಮ್ಮ ಪ್ರಭಾವ ಬಳಸಿಕೊಂಡು, ಆಯಕಟ್ಟಿನ ಸ್ಥಳಗಳಿಗೆ ಅನುಕೂಲವಾಗುವಂತೆ ಮೀಸಲಾತಿ ನಿಗದಿಯಾಗುವಂತೆ ನೋಡಿಕೊಂಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ..?
ವಿಧಾನಸಭಾ ಚುನಾವಣೆಯಲ್ಲಿ ಇಂಡಿ, ಬಸವನಬಾಗೇವಾಡಿಯಲ್ಲಿ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲರಿಗೆ ಜೆಡಿಎಸ್‌ ಪ್ರಬಲ ಪೈಪೋಟಿ ನೀಡಿತ್ತು. ಬಸವನಬಾಗೇವಾಡಿ ಪಟ್ಟಣದಲ್ಲಿ ಜೆಡಿಎಸ್‌ ಹೆಚ್ಚಿನ ಮತ ಗಳಿಸಿತ್ತು. ಆಡಳಿತಾರೂಢ ಕಾಂಗ್ರೆಸ್‌ನ ಸಚಿವ, ಶಾಸಕರಿಗೆ ತಮ್ಮ ಕ್ಷೇತ್ರದ ಚುನಾವಣೆ ಇದೀಗ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈಚೆಗಷ್ಟೇ ಮತದಾನ ಮುಗಿದ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆಯಿಂದ ಕ್ಷೇತ್ರ ‘ಕೈ’ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್‌, ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಗೆ ಮುಂದಾಗುವುದೋ ? ಅಥವಾ ಪ್ರತ್ಯೇಕವಾಗಿ ಅಖಾಡಕ್ಕಿಳಿಯುವುದೋ ? ಎಂಬುದು ಇದೀಗ ಚರ್ಚೆಗೆ ಗ್ರಾಸವೊದಗಿಸಿದೆ.

ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಮೈತ್ರಿಗೆ ಜೈ ಎನ್ನುತ್ತಾರೋ ? ತಮ್ಮೊಟ್ಟಿಗೆ ಜೆಡಿಎಸ್‌ನ ಪರಾಜಿತ ಅಭ್ಯರ್ಥಿಗಳನ್ನು ಒಟ್ಟಿಗೆ ಚುನಾವಣೆಗೆ ಕರೆದೊಯ್ಯುತ್ತಾರೋ ? ಇಲ್ಲವೋ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಘಟನೆಗಾಗಿ, ತಮ್ಮ ಅಸ್ತಿತ್ವ, ಬಲವರ್ಧನೆಗಾಗಿ ಪ್ರತ್ಯೇಕವಾಗಿಯೇ ಪಕ್ಷದ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸುತ್ತಾರೋ ? ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಇಂಡಿಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡಿದ್ದ ಬಿ.ಡಿ.ಪಾಟೀಲ, ಬಸವನಬಾಗೇವಾಡಿಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಅಪ್ಪುಗೌಡ ಪಾಟೀಲ ಇದೀಗ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಈ ಎರಡೂ ಕ್ಷೇತ್ರದಲ್ಲಿನ ಜೆಡಿಎಸ್‌ ಬೆಂಬಲಿಗರಿಗೆ, ಟಿಕೆಟ್‌ ಆಕಾಂಕ್ಷಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ.

ತಾಳಿಕೋಟೆ ಪುರಸಭೆಯಲ್ಲಿ ‘ಮೈತ್ರಿ’ಯ ಗದ್ದಲ ಹೆಚ್ಚಿಲ್ಲ. ಬಿಜೆಪಿ ಸೋಲಿಸಲಿಕ್ಕಾಗಿ ಸ್ಥಳೀಯ ಮುಖಂಡರಾದ ಸಿ.ಎಸ್.ನಾಡಗೌಡ, ಮಂಗಳಾದೇವಿ ಬಿರಾದಾರ ಒಟ್ಟಾಗಬಹುದು. ಈ ಹಿಂದೆ ನಡೆದ ಮುದ್ದೇಬಿಹಾಳ ಪುರಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಏರ್ಪಟ್ಟಿರಲಿಲ್ಲ. ಮೌಖಿಕ ಹೊಂದಾಣಿಕೆ ಮೇರೆಗೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ ಎಂಟು, ಬಿಜೆಪಿ ಎಂಟು, ಜೆಡಿಎಸ್‌ ಎರಡು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಐದು ಕ್ಷೇತ್ರಗಳಲ್ಲಿ ಪಕ್ಷೇತರರು ವಿಜಯಿಯಾಗಿದ್ದರು.

ಹಲವು ದಶಕಗಳಿಂದ ತಾಳಿಕೋಟೆ, ಮುದ್ದೇಬಿಹಾಳ ಪುರಸಭೆಯಲ್ಲಿ ಪಕ್ಷೇತರರದ್ದೇ ಪ್ರಾಬಲ್ಯ. ಎಲ್ಲ ಪಕ್ಷಗಳ ಮುಖಂಡರು ಇದಕ್ಕೆ ಬೆನ್ನೆಲುಬಾಗಿದ್ದರು. ಆದರೆ 2018ರ ಆ.31ರಂದು ನಡೆದ ಮುದ್ದೇಬಿಹಾಳ ಪುರಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷಗಳ ಪ್ರತಿನಿಧಿಗಳು ಆಯ್ಕೆಯಾಗಿದ್ದು ವಿಶೇಷ. 18 ಸದಸ್ಯರು ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪ್ರತಿನಿಧಿಸಿದ್ದಾರೆ.

ಎ.ಎಸ್.ಪಾಟೀಲ ನಡಹಳ್ಳಿ ಮುದ್ದೇಬಿಹಾಳ ಶಾಸಕರಾಗಿ ಆಯ್ಕೆಯಾದ ಬಳಿಕ ಈ ವಿದ್ಯಮಾನ ಘಟಿಸಿತ್ತು. ಪಕ್ಷೇತರರ ಪ್ರಾಬಲ್ಯದ ತಾಳಿಕೋಟೆ ಪುರಸಭಾ ಚುನಾವಣೆಯಲ್ಲೂ ಈ ಬಾರಿ ಪಕ್ಷೇತರರ ಆಡಳಿತಕ್ಕೆ ಇತಿಶ್ರೀ ಬೀಳುವುದೇ ಎಂಬದು ಎಲ್ಲೆಡೆ ಚರ್ಚೆಗೀಡಾಗುತ್ತಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !