ಅಖಾಡದಲ್ಲಿ ಪಕ್ಷೇತರರದ್ದೇ ಪಾರಮ್ಯ..!

ಸೋಮವಾರ, ಜೂನ್ 17, 2019
28 °C
ಮೂರು ಪುರಸಭೆಯ ಕೆಲ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್

ಅಖಾಡದಲ್ಲಿ ಪಕ್ಷೇತರರದ್ದೇ ಪಾರಮ್ಯ..!

Published:
Updated:

ವಿಜಯಪುರ: ಬಸವನಬಾಗೇವಾಡಿ, ಇಂಡಿ ಪುರಸಭೆಯ ತಲಾ 23 ವಾರ್ಡ್‌, ತಾಳಿಕೋಟೆ ಪುರಸಭೆಯ 21 ವಾರ್ಡ್‌ಗಳ ಸದಸ್ಯ ಸ್ಥಾನಕ್ಕೆ ಮೇ 29ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳು ಕೆಲ ವಾರ್ಡ್‌ಗಳಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಮೂರು ಪುರಸಭೆಯ 69 ಸ್ಥಾನಗಳ ಪೈಕಿ, 55 ವಾರ್ಡ್‌ಗಳಿಗಷ್ಟೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಂಡಿ ಪುರಸಭೆಯ ಎಲ್ಲ 23 ವಾರ್ಡ್‌ಗಳಿಂದ ಕಾಂಗ್ರೆಸ್‌ ಕಲಿಗಳು ಸ್ಪರ್ಧಿಸಿದ್ದು, ಆರೋಗ್ಯ ಸಚಿವ ಶಿವಾನಂದ ಪಾಟೀಲ ಪ್ರತಿನಿಧಿಸುವ ಬಸವನಬಾಗೇವಾಡಿ ಪುರಸಭೆಯ 22 ವಾರ್ಡ್‌ ಹಾಗೂ ಮಾಜಿ ಸಚಿವ ಸಿ.ಎಸ್.ನಾಡಗೌಡ ಹಿಡಿತ ಹೊಂದಿರುವ ತಾಳಿಕೋಟೆ ಪುರಸಭೆಯಿಂದ 10 ಸ್ಪರ್ಧಾಳುಗಳು ಮಾತ್ರ ಹಸ್ತದ ಚಿಹ್ನೆಯಡಿ ಅಖಾಡಕ್ಕಿಳಿದಿದ್ದಾರೆ.

ಬಿಜೆಪಿ 50 ವಾರ್ಡ್‌ಗಳಿಗಷ್ಟೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಉಳಿದ 19 ವಾರ್ಡ್‌ಗಳಲ್ಲಿ ಪಕ್ಷೇತರರನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿದೆ. ಇಂಡಿ ಪುರಸಭೆಯ ಎಲ್ಲ 23 ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಸವನಬಾಗೇವಾಡಿ ಪುರಸಭೆಯ 18 ವಾರ್ಡ್‌ಗಳಿಗೆ, ತಾಳಿಕೋಟೆ ಪುರಸಭೆಯ 9 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಮ್ಮ ವ್ಯಾಪ್ತಿಯಲ್ಲಿ ಬರುವ ತಾಳಿಕೋಟೆ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿಕ್ಕಾಗಿ, ಈ ಬಾರಿ ಹೆಚ್ಚಿನ ಕಸರತ್ತಿಗೆ ‘ಕೈ’ ಹಾಕಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 2018ರ ಆಗಸ್ಟ್‌ನಲ್ಲಿ ನಡೆದಿದ್ದ ಮುದ್ದೇಬಿಹಾಳ ಪುರಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ನಡಹಳ್ಳಿ ತಂತ್ರಗಾರಿಕೆ ರೂಪಿಸಿದ್ದರಿಂದಲೇ; ಪ್ರಪ್ರಥಮ ಬಾರಿಗೆ ಹಲವು ವರ್ಷಗಳ ಬಳಿಕ ಪಕ್ಷೇತರರ ಪ್ರಾಬಲ್ಯ ಹುದುಗಿ ಹೋಗಿ, ಪಕ್ಷಗಳು ಪಾರಮ್ಯ ಮೆರೆದಿದ್ದವು.

ಇದೇ ಫಲಿತಾಂಶ ತಾಳಿಕೋಟೆ ಪುರಸಭೆಯಲ್ಲೂ ಈ ಬಾರಿ ಮರುಕಳಿಸಲಿದೆ ಎಂಬ ನಿರೀಕ್ಷೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ಬೆನ್ನಿಗೆ ಹುಸಿಯಾಗಿದೆ. ಇದು ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರ ಮನದಲ್ಲಿ ಬೇಸರ ಮೂಡಿಸಿದೆ. ಬಸವನಬಾಗೇವಾಡಿಯಲ್ಲೂ ಎಲ್ಲ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದಕ್ಕೆ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನ ವ್ಯಕ್ತವಾಗಿದೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಸವನಬಾಗೇವಾಡಿ ಪಟ್ಟಣದಲ್ಲಿ ಉಳಿದ ಪಕ್ಷಗಳಿಗಿಂತ ಹೆಚ್ಚಿಗೆ ಮತ ಪಡೆದಿದ್ದ ಜೆಡಿಎಸ್‌, ಪುರಸಭೆ ಚುನಾವಣೆಯಲ್ಲಿ ಕೇವಲ ಎಂಟು ವಾರ್ಡ್‌ಗಳಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಲ್ಲಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಲೋಕಸಭಾ ಚುನಾವಣೆ ಸಂದರ್ಭ ಮಾತೃ ಪಕ್ಷ ಕಮಲ ಪಾಳೆಯಕ್ಕೆ ಹಿಂತಿರುಗಿದ್ದು, ಜೆಡಿಎಸ್‌ಗೆ ಇಲ್ಲಿ ಅಭ್ಯರ್ಥಿ ಕಣಕ್ಕಿಳಿಸುವಲ್ಲಿಯೇ ತೀವ್ರ ಹಿನ್ನಡೆಯಾದಂತಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರರೂಢ ಹಾಲಿ ಶಾಸಕರಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಇಂಡಿ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್‌, ಪುರಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ವಿಫಲವಾಗಿದೆ. 16 ವಾರ್ಡ್‌ಗಳಲ್ಲಷ್ಟೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ತಾಳಿಕೋಟೆ ಪುರಸಭೆಯಲ್ಲಿ ಮೂರು ಕ್ಷೇತ್ರಗಳಿಗಷ್ಟೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈಚೆಗಷ್ಟೇ ನಡೆದ ಲೋಕಸಭಾ ಚುನಾವಣಾ ಅಖಾಡದ ಸೆಣೆಸಾಟ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಆಡಳಿತಾರೂಢ ಪಕ್ಷ ಎಲ್ಲ ವಾರ್ಡ್‌ಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದಕ್ಕೆ ಕಾರ್ಯಕರ್ತರ ವಲಯದಲ್ಲೇ ಅಪಸ್ವರ ಕೇಳಿ ಬರುತ್ತಿದೆ.

136 ಪಕ್ಷೇತರರು ಕಣದಲ್ಲಿ..!

ಮೂರು ಪುರಸಭೆಗಳ 67 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 136 ಮಂದಿ ಅಪೇಕ್ಷಿತರು ಸ್ಪರ್ಧೆ ಬಯಸಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ತಾಳಿಕೋಟೆ ಪುರಸಭೆ ವ್ಯಾಪ್ತಿಯಲ್ಲಿ 62 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು, ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. 21 ವಾರ್ಡ್‌ಗಳಿಂದ ಗೆಲುವಿಗಾಗಿ ಒಟ್ಟು 84 ಮಂದಿ ಅಖಾಡದಲ್ಲಿದ್ದಾರೆ.

ಇಂಡಿ ಪುರಸಭೆಯಲ್ಲೂ ಪಕ್ಷೇತರರ ಸ್ಪರ್ಧೆ ಹುರುಪಿನಿಂದ ಕೂಡಿದ್ದು, 42 ಮಂದಿ ಅಖಾಡದಲ್ಲಿದ್ದಾರೆ. ಒಟ್ಟು 106 ಅಭ್ಯರ್ಥಿಗಳು ಸ್ಪರ್ಧಾ ಕಲಿಗಳಾಗಿದ್ದಾರೆ. ಇಲ್ಲಿ ಬಿಎಸ್‌ಪಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಸವನಬಾಗೇವಾಡಿ ಪುರಸಭೆಯ ವಾರ್ಡ್‌ಗಳಿಗೆ 32 ಮಂದಿ ಪಕ್ಷೇತರರು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 80 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಒಟ್ಟು ಮೂರು ಪುರಸಭೆಯ 67 ವಾರ್ಡ್‌ಗಳ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಬಯಸಿ 270 ಮಂದಿ ನಾಮಪತ್ರ ಸಲ್ಲಿಸಿದ್ದು, ಈ ಎಲ್ಲವೂ ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !