ಹಿಂದುಳಿದ ವರ್ಗಗಳ ಕಲ್ಯಾಣವೇ ಆದ್ಯತೆ: ಪುಟ್ಟರಂಗಶೆಟ್ಟಿ

7

ಹಿಂದುಳಿದ ವರ್ಗಗಳ ಕಲ್ಯಾಣವೇ ಆದ್ಯತೆ: ಪುಟ್ಟರಂಗಶೆಟ್ಟಿ

Published:
Updated:
Deccan Herald

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಸಿ.ಪುಟ್ಟರಂಗಶೆಟ್ಟಿ ಅವರು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ. ಈಗ ನಿರೀಕ್ಷೆ‌ಯಂತೆ ರಾಜ್ಯ ಸರ್ಕಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದೆ. ಮೂರನೇ ಸಲ ಶಾಸಕನಾಗಿ ಆಯ್ಕೆಯಾಗುವ ಮೂಲಕ ಜನರ ಸೇವೆ ಮಾಡಲು ಮತ್ತೊಂದು ಅವಕಾಶ ಪಡೆದಿರುವ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ಕ್ಷೇತ್ರ ಅಭಿವೃದ್ಧಿ, ತಮ್ಮ ಗೆಲುವು ಮತ್ತು ಮತದಾರರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ...

* ಈಗ ನೀವು ಹ್ಯಾಟ್ರಿಕ್‌ ವೀರ. ಕ್ಷೇತ್ರದ ಜನರಿಗೆ, ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ?

ಮೂರನೇ ಬಾರಿ ಗೆದ್ದು ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆಗಿದ್ದೇನೆ. ‌ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರ ಅಭಿವೃದ್ಧಿಗೆ ಶ್ರಮಿಸುವ ಗುರಿಯನ್ನು ಹಾಕಿಕೊಂಡಿದ್ದೇನೆ. ಈ ಸಮುದಾಯಗಳ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕೆ ಅಗತ್ಯವಿರುವ ಕೆಲಸವನ್ನು ಮಾಡುತ್ತೇನೆ. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸಂವಿಧಾನ ಬದ್ಧ ಸೌಲಭ್ಯಗಳು ಇವೆ. ಆದರೆ ಹಿಂದುಳಿದ ವರ್ಗಗಳಿಗೆ ಅಂತಹ ಅವಕಾಶ ಇಲ್ಲ. ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಮನೆಗಳ ಮನೆಗಳ ಅಗತ್ಯವಿದೆ. ಈಗ ಅದೇ ಇಲಾಖೆಗೆ ಸಚಿವನಾಗಿದ್ದೇನೆ. ಹಾಗಾಗಿ ಅವರ ಏಳಿಗೆಗೆ ಶ್ರಮಿಸುತ್ತೇನೆ.

* ಎರಡು ಬಾರಿ ಶಾಸಕರಾಗಿ ನಿಮ್ಮ ಸಾಧನೆ ಏನು?

ಗ್ರಾಮೀಣ ಪ್ರದೇಶ‌ಗಳಲ್ಲಿ ಬಹು ಗ್ರಾಮ ಕುಡಿಯುವ ಯೋಜನೆಯ ಅಡಿಯಲ್ಲಿ ₹523 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ವಾಜಪೇಯಿ ಆವಾಸ್‌ ಯೋಜನೆಯ ಅಡಿಯಲ್ಲಿ ಮನೆಗಳ ನಿರ್ಮಾಣವಾಗಿದೆ. ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ 1000 ನಿವೇಶನಗಳನ್ನು ಹಂಚಿಕೆ ಮಾಡಿದ್ದೇನೆ. ಅಲ್ಪಸಂಖ್ಯಾತರಿಗಾಗಿ 500 ಮನೆಗಳು ನೀಢಬೇಕು ಎಂದು ಕೇಳಿದ್ದೇನೆ. ಸರ್ಕಾರ ಮಂಜೂರು ಮಾಡುವ ವಿಶ್ವಾಸವಿದೆ.

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಇದೆಯಲ್ಲಾ?

ಪೈಪ್‌ಲೈನ್‌ ಕಾಮಗಾರಿ ಕಳಪೆಯಾಗಿಲ್ಲ. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಪೈಪ್‌ಲೈನ್‌ಗಳನ್ನು ಪುನಶ್ಚೇತನಗೊಳಿಸಬೇಕಿದೆ.

* ಜಿಲ್ಲಾ ಕೇಂದ್ರ ಚಾಮರಾಜನಗರದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದೀರಿ?

ಉ: ನಿಮ್ಮ ಕಣ್ಣ ಮುಂದೆಯೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಹಿಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಪಟ್ಟಣದ ಅಭಿವೃದ್ಧಿಗೆ ₹50 ಕೋಟಿ ನೀಡಿದ್ದರು. ಅದರ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಮೂರನೇ ಹಂತದ ನಗರೋತ್ಥಾನ ಯೋಜನೆ ಅಡಿಯಲ್ಲಿ, ಇದುವರೆಗೆ ₹105 ಕೋಟಿ ಅನುದಾನ ತಂದಿದ್ದೇನೆ. ಅದರ ಕೆಲಸಗಳೂ ಪ್ರಗತಿಯಲ್ಲಿದೆ.

* ಕಾಮಗಾರಿ ನಿಧಾನವಾಗುತ್ತಿದೆ ಎಂದು ಅನಿಸುವುದಿಲ್ಲವೇ?

ಉ: ಎಲ್ಲಿ ನಿಧಾನ? ದೊಡ್ಡ ದೊಡ್ಡ ಕಾಮಗಾರಿಗಳಿಗೆ ಸಮಯ ಹಿಡಿದೇ ಹಿಡಿಯುತ್ತದೆ. ಕಾಂಕ್ರೀಟ್‌ ರಸ್ತೆಗಳಾಗಿರುವುದರಿಂದ ಅವುಗಳು ಕ್ಯೂರಿಂಗ್‌ ಆಗಬೇಕಾದರೆ ಒಂದೂವರೆ ತಿಂಗಳು ಬೇಕು. ನಮಗೆ ಅದು ನಿಧಾನ ಅನಿಸುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದೇ ಹೋಯಿತು. ಜೋಡಿ ರಸ್ತೆ ಪ್ರಗತಿಯಲ್ಲಿದೆ. 

* ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆಯಲ್ಲಾ?

ಸಮಸ್ಯೆ ಇರುವುದು ಹೌದು. ಟಿ.ನರಸೀಪುರದಿಂದ ಚಾಮರಾಜನಗರಕ್ಕೆ ನೀರು ಪೂರೈಸುವ ಮೊದಲ ಹಂತದ ಕುಡಿಯುವ ನೀರಿನ ಯೋಜನೆಯ ಅವಧಿ 2020ರವರೆಗೆ ಇದೆ. ಈಗಿರುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಮಾರ್ಗ ಮಧ್ಯೆ 36 ಗ್ರಾಮಗಳಿಗೂ ನೀರು ಪೂರೈಸಲಾಗುತ್ತಿದೆ. ಮಾಲಂಗಿಯಿಂದ ನೇರವಾಗಿ ಚಾಮರಾಜನಗರಕ್ಕೆ ನೀರು ಪೂರೈಸುವ ಎರಡನೇ ಹಂತದ ₹190 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ನಗರಾಭಿವೃದ್ಧಿ ಇಲಾಖೆಯ ಮುಂದೆ ಇದೆ. ಶೀಘ್ರದಲ್ಲಿ ಇದಕ್ಕೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತೇನೆ.

ಇದಲ್ಲದೇ, ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಿ ತೊಂಬೆಗಳ ಮೂಲಕ ನೀರು ಪೂರೈಸಲಾಗುತ್ತಿದೆ.

 * ಪಟ್ಟಣದ ಬಡಾವಣೆಗಳ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೀರಾ?

 ಕೆಲವು ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಇನ್ನು ಕೆಲವು ಕಡೆ ಟೆಂಡರ್‌ ಆಗಿದೆ. ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.

* ಉಪ್ಪಾರ ಸಮುದಾಯದ ನಾಯಕರು ನೀವು. ಮೋಳೆಗಳ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದೀರಾ?

ನೋಡಿ, ನಾನು ಮೊದಲೇ ಹೇಳಿದಂತೆ ಎಸ್‌ಸಿ, ಎಸ್‌ಟಿ ಸಮುದಾಯವರಿಗೆ ಸಂವಿಧಾನ ಬದ್ಧ ಅನುದಾನ ಲಭ್ಯವಿದೆ. ಉಪ್ಪಾರರು ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಶೇ 7ರಷ್ಟು ಅನುದಾನ ಮಾತ್ರ ಸಿಗುತ್ತದೆ. ರಾಜ್ಯದಲ್ಲಿ ಶೇ 57ರಷ್ಟು ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದವರು. 

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗಾಗಿಯೇ  ₹75.5 ಕೋಟಿ ನೀಡಿದ್ದರು. ಉಪ್ಪಾರರಿಗೆ ಪ್ರತ್ಯೇಕ ಪ್ಯಾಕೇಜ್‌ ಮಾಡಿಕೊಡಿ ಎಂದು ಕೇಳಿದ್ದೆ.  ಉಪ್ಪಾರರ ನಿಗಮ ಸ್ಥಾಪನೆ ಮಾಡಿದ್ದರು. ಆರಂಭದಲ್ಲಿ ₹5 ಕೋಟಿ ಅನುದಾನ ಸಿಕ್ಕಿತ್ತು. ಈಗ ‌₹2 ಕೋಟಿ ಬಿಡುಗಡೆಯಾಗಿದೆ. ಮೋಳೆಗಳ ಅಭಿವೃದ್ಧಿಗೆ ನಾನು ಬದ್ಧ

 * ಕೃಷಿ ಕಾಲೇಜು ಈ ವರ್ಷವೇ ಸ್ಥಾಪನೆಯಾಗುತ್ತದೆಯೇ?

ಉ: ಖಂಡಿತ. ಕಾಲೇಜಿಗೆ ಅನುಮತಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕಡತ ಹಣಕಾಸು ಇಲಾಖೆಯ ಮುಂದಿದೆ.

* ಕಾನೂನು ಕಾಲೇಜು...

 ಅದು ಕೂಡ ಮಂಜೂರು ಆಗಿದೆ. ಈಗಿನ ಕೇಂದ್ರೀಯ ವಿದ್ಯಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಅಲ್ಲಿ ಕಾನೂನು ಕಾಲೇಜು ಆರಂಭವಾಗಲಿದೆ. 

* ಜಿಲ್ಲೆಗೆ ಉದ್ದಿಮೆಗಳನ್ನು ಯಾವಾಗ ಕರೆ ತರುತ್ತೀರಿ?

ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಅವರು ಇತ್ತೀಚೆಗೆ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆದಷ್ಟು ಬೇಗ ಉದ್ದಿಮೆಗಳು ಇಲ್ಲಿಗೆ ಬರಬೇಕು. ನೀರು ಮತ್ತು ವಿದ್ಯುತ್‌ನ ವ್ಯವಸ್ಥೆ ಆಗಬೇಕು. ವಿದ್ಯುತ್‌ ಉಪಕೇಂದ್ರ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ಜವಳಿ ಉದ್ದಿಮೆ, ಕರಿ ಕಲ್ಲು ಕ್ವಾರಿ ಉದ್ದಿಮೆಗಳು ಬರಲು ಆಸಕ್ತಿ ತೋರಿವೆ. ದೊಡ್ಡ ಕೈಗಾರಿಕೆಗಳು ಶೇ 50ರಷ್ಟು ರಿಯಾಯಿತಿ ಕೇಳುತ್ತಿವೆ. ಎಸ್‌ಟಿ ಎಸ್‌ಸಿಯವರಿಗೆ ಮಾತ್ರ ಶೇ 50ರಷ್ಟು ರಿಯಾಯಿತಿ ನೀಡಲು ಅವಕಾಶ ಇದೆ.

* ನಿಮ್ಮ ಗೆಲುವಿನ ಗುಟ್ಟೇನು?

ನಾನು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವನಲ್ಲ. 1976–77ದಿಂದಲೇ ರಾಜಕೀಯದಲ್ಲಿದ್ದೇನೆ. ಜನರೊಂದಿಗೆ ನನ್ನ ಒಡನಾಟ ಚೆನ್ನಾಗಿತ್ತು. 2004ರಲ್ಲಿ ಟಿಕೆಟ್‌ ಕೇಳಿದ್ದೆ, 2008ರಲ್ಲಿ ಸಿಕ್ಕಿತ್ತು. 24 ಗಂಟೆಗಳ ಕಾಲವೂ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡದೇ ಜನರ ಸೇವೆ ಮಾಡಿದ್ದರ ಫಲವಾಗಿ ಮೂರು ಬಾರಿ ಗೆದ್ದು ಈಗ ಸಚಿವನಾಗಿದ್ದೇನೆ. ಆದರೆ, ಸಚಿವನಾಗಿರುವುದರಿಂದ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಕೊಡಲು ಆಗುತ್ತಿಲ್ಲ. ವಾರಕ್ಕೆ ಮೂರು ದಿನ ಬರುತ್ತೇನೆ. 

* ಈ ಬಾರಿ ನಿಮ್ಮ ಗೆಲುವಿನ ಅಂತರ ಕಡಿಮೆಯಾಗಿದೆ. ಸೋಲುವ ಭೀತಿ ಇತ್ತಾ?

ಇಲ್ಲವೇ ಇಲ್ಲ. ಕೆಲವು ರಾಜಕೀಯ ವಿದ್ಯಮಾನಗಳಿಂದ ಸ್ವಲ್ಪ ಹಿನ್ನಡೆ ಆಯಿತು. ನನ್ನ ಜೊತೆಗೆ ಇದ್ದವರೇ ತಟಸ್ಥರಾದರು. ಇದರಿಂದ ಕಡಿಮೆ ಮತಗಳು ಬಂದವು. 

* ಮೈತ್ರಿ ಸರ್ಕಾರ ಐದು ವರ್ಷ ಇರುತ್ತದೆಯೇ? ಸರ್ಕಾರ ಇರುವವರೆಗೂ ನಿಮ್ಮ ಸ್ಥಾನ ಮುಂದುವರಿಯುತ್ತದೆಯೇ?

ಸರ್ಕಾರಕ್ಕೆ ಏನೂ ಆಗುವುದಿಲ್ಲ. ಐದು ವರ್ಷ ಇರುತ್ತದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಇದೆ. ಸಚಿವ ಸ್ಥಾನದ ವಿಚಾರದಲ್ಲಿ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೆಲವು ವಿಚಾರದ ಬಗ್ಗೆ ಮಾತುಕತೆ ಆಗಿದೆ. ಪಕ್ಷದ ನಾಯಕರು ಹೇಳಿದ ತಕ್ಷಣ ಸಚಿವ ಸ್ಥಾನದಿಂದ ಇಳಿಯುತ್ತೇನೆ.

* ಮುಖ್ಯಮಂತ್ರಿ ಸೇರಿ ಇತರ ಸಚಿವರನ್ನು ಚಾಮರಾಜನಗರಕ್ಕೆ ಕರೆ ತರುತ್ತೀರಾ?

 ನಾನು ಮೂರನೇ ಬಾರಿ ಗೆದ್ದು, ಸಚಿವನಾಗುವ ಮೂಲಕ ಚಾಮರಾಜನಗರಕ್ಕೆ ಸಂಬಂಧಿಸಿದ ಮೂಢನಂಬಿಕೆಗಳೆಲ್ಲ ಹೋಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಎಲ್ಲರೂ ಬರುತ್ತಾರೆ. ಅವಶ್ಯಕತೆ ಇದ್ದಾಗ ಎಲ್ಲರನ್ನೂ ಕರೆದುಕೊಂಡು ಬರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !