‘ಕೃಷಿಯಲ್ಲಿ ಲಕ್ಷ ಎಣಿಸುವುದು ಕಷ್ಟವಲ್ಲ’

7
ಬೇಸಾಯ ನಂಬಿ ಬದುಕು ಕಟ್ಟಿಕೊಂಡ ನಿವೃತ್ತ ಸೈನಿಕ ಪುಟ್ಟಸ್ವಾಮಿ ಮಾತು

‘ಕೃಷಿಯಲ್ಲಿ ಲಕ್ಷ ಎಣಿಸುವುದು ಕಷ್ಟವಲ್ಲ’

Published:
Updated:
Deccan Herald

ಯಳಂದೂರು: ಕೃಷಿಯನ್ನೇ ನಂಬಿದರೆ ಜೀವನ ನಡೆಸುವುದು ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಯೋಜನಾಬದ್ಧ ಸಮಗ್ರ ಬೇಸಾಯದಿಂದ ಲಕ್ಷ ಲಕ್ಷ ಹಣ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ನಿವೃತ್ತ ಯೋಧ ಪುಟ್ಟಸ್ವಾಮಿ.

ಚಾಮರಾಜನಗರ ತಾಲ್ಲೂಕಿನ ಮೂಕಹಳ್ಳಿ ಗ್ರಾಮದ ಪುಟ್ಟಸ್ವಾಮಿ ಅವರು ದೇಶ ಸೇವೆ ಮಾಡಿ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡರು. ಕೃಷಿಯಿಂದ ಆರ್ಥಿಕಾಭಿವೃಧ್ಧಿ ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ.

2 ಎಕರೆಯಲ್ಲಿ ನೇಂದ್ರ, 4 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಮಿಶ್ರ ಬೆಳೆಯಾಗಿ ನೀಡುವ ಬುಲೆಟ್, ಸಿತಾರ ತಳಿಯ ಮೆಣಸಿನಕಾಯಿ ಬೆಳೆದಿದ್ದಾರೆ. ವಾರ್ಷಿಕ ₹8 ಲಕ್ಷದಿಂದ ₹10 ಲಕ್ಷ ಖರ್ಚು ಬರುತ್ತದೆ. ಎಲ್ಲ ಬೆಳೆಗಳಿಂದ ವರ್ಷಕ್ಕೆ ಖರ್ಚು ಕಳೆದು ₹15 ಲಕ್ಷ ಲಾಭ ಪಡೆಯುತ್ತಿದ್ದಾರೆ. ಈ ವರ್ಷ ₹25 ಲಕ್ಷ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಬಾಳೆದಿಂಡಿನ ಮಾರಾಟದಿಂದ ₹5 ಸಾವಿರ, ಸಾವಯವ ಮಣ್ಣಿನಲ್ಲಿ ಬೆಳೆದ ಬಾಳೆ ಬಿತ್ತನೆ ಗೆಡ್ಡೆಯಿಂದ ₹18 ಸಾವಿರ, ಮೆಣಸಿನಕಾಯಿನಿಂದ ₹80 ಸಾವಿರ ಆದಾಯ ಗಳಿಸಿದ್ದಾರೆ.

ಬರೋಯಿಂಗ್‌ ಸಸ್ಯಜಂತು ರೋಗ ನಿರೋಧಕ ಗುಣ ಹೊಂದಿರುವ ರುಚಿಯಾದ ಏಲಕ್ಕಿ ಬಾಳೆಗೆ ಒತ್ತು ನೀಡಿದ್ದಾರೆ. 13 ತಿಂಗಳಿಗೆ ಕಟಾವಿಗೆ ಬರುವ ಬಾಳೆಕಾಯಿ ಗೊನೆ 10ರಿಂದ 14 ಕೆ.ಜಿ. ತೂಗುತ್ತದೆ.

ಎಲ್ಲ ಜಮೀನಿಗೆ ಪಂಪ್‌ಸೆಟ್‌ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಂಡಿದ್ದಾರೆ. ಕಪ್ಪು ಮಣ್ಣಿನಲ್ಲಿ ಬಾಳೆ ಬೆಳೆದಿದ್ದು, ಪ್ರತಿ ಬಾಳೆಗೆ ನಿತ್ಯ 150 ಮಿ.ಲೀ ನೀರು ಸಿಗುವಂತೆ ನೋಡಿಕೊಳ್ಳುತ್ತಾರೆ.

ಋತುಮಾನ ಬೆಳೆ: ಅನ್ನದಾತರು ಯಾವುದೇ ಹಿಡುವಳಿ ಕೈಗೊಳ್ಳುವ ಮುನ್ನ ಬೆಳೆಯ ಗರಿಷ್ಠ ಉಪಯೋಗ ಪಡೆಯುವತ್ತ ಚಿಂತಿಸಬೇಕು. ಕಾಲಕಾಲಕ್ಕೆ ಬೇಡಿಕೆ ಬರುವ ಬೆಳೆಯನ್ನು ಬೆಳೆಯಬೇಕು. ಮಣ್ಣಿನ ಆರೋಗ್ಯಕ್ಕೆ ಒತ್ತು ನೀಡಬೇಕು. ಬಾಳೆ ಫಸಲಿನ ನಡುವೆ ಮೊಳೆಯುವ ಬಾಳೆದಿಂಡು ಸಂಗ್ರಹಿಸಿ ಮಾರಾಟ ಮಾಡಬಹುದು. ಮದುವೆ ಇಲ್ಲವೇ ಹೊಸ ಮನೆ ಕಾರ್ಯಗಳಿಗೆ ಬಾಳೆ ಎಲೆಗೆ ಬೇಡಿಕೆ ಇದೆ. ಹಬ್ಬಗಳಲ್ಲಿ ಬಾಳೆಕಂದು ಆದಾಯ ತರುತ್ತದೆ ಎಂದು ಪುಟ್ಟಸ್ವಾಮಿ ಹೇಳಿದರು.

‘ಮನೆ ಬಳಕೆಗೆ ಬೇಕಾದ ತರಕಾರಿ ಮತ್ತು ಭತ್ತವನ್ನು ಜಮೀನಿನಲ್ಲೇ ಬೆಳೆಯುತ್ತಾರೆ. 2 ಎಕರೆಯಲ್ಲಿ ಮಿನಿಲಾಂಗ್ ಹಾಗೂ ಡಿಟಿಪಿ ತಳಿ ಭತ್ತ ಮತ್ತು ಕಬ್ಬಿನ ಸಮೃದ್ಧ ಫಸಲು ಬಂದಿದೆ. ಮಗ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಮಗಳು ಕೆಲಸದಲ್ಲಿ ಇದ್ದಾಳೆ. ನಮಗೆ ಸರ್ಕಾರದ ಸೌಲಭ್ಯ ಬೇಕಿಲ್ಲ. ಇಷ್ಟೆಲ್ಲ ಸಾಧನೆ ಕೃಷಿಯಿಂದಲೇ ಸಾಧ್ಯವಾಗಿದೆ’ ಎಂದು ಹೆಮ್ಮೆಯಿಂದ ಬೀಗಿದರು.

‘ಋತುಮಾನ ಬೇಸಾಯ ಕೈಗೊಂಡರೆ ರೈತರ ಬದುಕಿನಲ್ಲಿ ಬೆಳಕು ಮೂಡುತ್ತದೆ. ನೀರಿನ ಮಿತ ಬಳಕೆ, ಕೃಷಿ ತ್ಯಾಜ್ಯಗಳ ಮಾರಾಟ, ಹಬ್ಬ ಮತ್ತು ಜಾತ್ರೆಗಳ ಸಮಯದಲ್ಲಿ ಬೇಡಿಕೆ ತರುವ ಸಮಗ್ರ ವ್ಯವಸಾಯ ಕೈಗೊಂಡಲ್ಲಿ ಅನ್ನದಾತ ಲಾಭದ ಮುಖ ನೋಡಬಹುದು’ ಎಂದು ಹೇಳಿದರು.

ಪುಟ್ಟಸ್ವಾಮಿ ಸೇನೆಗೆ ಸೇರಿದ ಕಥೆ: ಮೂಕಹಳ್ಳಿ ಪುಟ್ಟಸ್ವಾಮಿ 1979ರಲ್ಲಿ ಭಾರತೀಯ ಸೇನೆ ಸೇರಿದರು. ತರಬೇತಿ ನಂತರ ಶ್ವಾನದಳಕ್ಕೆ (ಡಾಗ್ ಕ್ಯಾಚರ್) ಸೇರ್ಪಡೆಯಾದರು. ಪ್ರಾರಂಭಿಕ ಸಂಬಳ ₹175. 1984ರ ಬ್ಲೂಸ್ಟಾರ್ ಕಾರ್ಯಾಚರಣೆ, ಕಾರ್ಗಿಲ್ ಕದನ, 1986ರಲ್ಲಿ ಶ್ರೀಲಂಕಾದಲ್ಲಿ ಎಲ್‌ಟಿಟಿಇಗಳ ವಿರುದ್ಧ ಸೆಣಸಾಡಿದ್ದಾರೆ. 1999ರಲ್ಲಿ ಗ್ರಾಮಕ್ಕೆ ವಾಪಸ್‌ ಬಂದರು. ಅಂದು ಸಾಲ ಮಾಡಿ 2 ಎಕರೆ ಭೂಮಿ ಖರೀದಿಸಿದ್ದರು. ಈಗ 8 ಎಕರೆ ಹೊಂದಿದ್ದಾರೆ. ಆಳುಗಳ ಕೊರತೆ ನೀಗಿಸಲು ಕುಟುಂಬದ ಸದಸ್ಯರನ್ನೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಂಪರ್ಕ ಸಂಖ್ಯೆ 9916722452.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !