ಶುಕ್ರವಾರ, ನವೆಂಬರ್ 22, 2019
22 °C

ಅವಧಿಗೂ ಮುನ್ನ ತೆರೆದ ಮದ್ಯದಂಗಡಿ: ಇಬ್ಬರ ಬಂಧನ

Published:
Updated:

ಕೊಳ್ಳೇಗಾಲ: ನಿಯಮಬಾಹಿರವಾಗಿ ಬೆಳಿಗ್ಗೆ 10 ಗಂಟೆಗೂ ಮುನ್ನ ಮದ್ಯ ಮಾರಾಟ ಆರಂಭಿಸಿದ ಬಾರೊಂದರ ಮೇಲೆ ಮಂಗಳವಾರ ನಗರ ಪೊಲೀಸರು ದಾಳಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. 

ನಗರದ ಬಸ್ ನಿಲ್ದಾಣದ ಬಳಿ ಇರುವ ಸುರೇಶ್ ವೈನ್ಸ್‌ ಬೆಳಿಗ್ಗೆ 9.05ಕ್ಕೆ ತೆರೆದು ವ್ಯವಹಾರ ಆರಂಭಿಸಿತ್ತು. ಮದ್ಯ ಮಾರಾಟ ಮಾಡುತ್ತಿದ್ದ ಮಾರುತಿ ಮತ್ತು ಮನೋಜ್‌ ಎಂಬುವವರನ್ನು ಪೊಲೀಸರು ಬಂಧಿಸಿದರು. ಅಂಗಡಿಯಿಂದ  ₹ 2,360 ನಗದು ಹಾಗೂ ಅಷ್ಟೇ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿರುವ ಕೆಲವು ಮದ್ಯದ ಅಂಗಡಿಗಳು ಅವಧಿಗೂ ಮುನ್ನ ಕದ್ದು ಮುಚ್ಚಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಹಾಗೂ ಮದ್ಯಪಾನಿಗಳಿಂದಾಗಿ ಜನರು ತೊಂದರೆ ಎದುರಿಸುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ಕುಡುಕರ ಹಾವಳಿಗೆ ಜನರು ಹೈರಾಣ’ ಎಂ‌ಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದರು.

ಎಚ್ಚರಿಕೆ: ನಗರದಲ್ಲಿರುವ 12 ಮದ್ಯದ ಅಂಗಡಿಗಳ ಮಾಲೀಕರನ್ನು ಠಾಣೆಗೆ ಕರೆಸಿಕೊಂಡಿರುವ ಸಬ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರು, ‘ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವೆ’ ಎಂದು ಎಚ್ಚರಿಕೆ ನೀಡಿದ್ದಾರೆ. 

ನಾಲ್ಕು ತಂಡ ರಚನೆ: ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯಿಸಿರುವ ನಗರ ಅಬಕಾರಿ ಇನ್‌ಸ್ಪೆಕ್ಟರ್‌ ಮೀನಾ ಅವರು, ‘ಬಾರ್‌ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲು ನಾಲ್ಕು ತಂಡ ರಚಿಸಲಾಗಿದೆ. ಸಿಬ್ಬಂದಿ ಪ್ರತಿ ದಿನ ಬೆಳಿಗ್ಗೆ ಮದ್ಯದಂಗಡಿಗಳ ಬಳಿ ತೆರೆಳಿ ಅವಧಿಗೆ ಮುನ್ನ ತೆರೆಯಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)