ಶನಿವಾರ, ಆಗಸ್ಟ್ 24, 2019
23 °C
ಕಿರಿಯ ಅಧಿಕಾರಿಗಳಿಗೆ ಪದೋನ್ನತಿ: ಎಸಿಎಸ್‌ಗೆ ಮನವಿ

ಪಿಡಬ್ಲ್ಯುಡಿ: 100 ಎಂಜಿನಿಯರ್‌ ಬಡ್ತಿ ವಂಚಿತ

Published:
Updated:

ಬೆಂಗಳೂರು: ಸೇವಾ ಜ್ಯೇಷ್ಠತೆ ಕಡೆಗಣಿಸಿ ಲೋಕೋಪಯೋಗಿ ಇಲಾಖೆಯ 213 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಪ್ರಕ್ರಿಯೆ ವೇಳೆ ಸೇವಾ ಜ್ಯೇಷ್ಠತೆ ಹೊಂದಿರುವ 100 ಎಂಜಿನಿಯರ್‌ಗಳ ಹೆಸರನ್ನು ಕೈಬಿಟ್ಟು, ವಿಚಾರಣೆ ಎದುರಿಸುತ್ತಿರುವ 8 ಎಂಜಿನಿಯರ್‌ಗಳಿಗೆ ಬಡ್ತಿ ನೀಡಲಾಗಿದೆ. ಬಡ್ತಿ ಪ್ರ‌ಕ್ರಿಯೆ ಮೂರೇ ದಿನಗಳಲ್ಲೇ ಪೂರ್ಣಗೊಂಡಿದೆ. ಇಲಾಖೆಯ ಧೋರಣೆಯಿಂದ ಆರು ಎಂಜಿನಿಯರ್‌ಗಳು ಬಡ್ತಿ ಸಿಗದೆ ನಿವೃತ್ತರಾಗಿದ್ದಾರೆ. ಈ ‍ಪ್ರಕ್ರಿಯೆಯನ್ನು ತಡೆ ಹಿಡಿದು ಎಂಜಿನಿಯರ್‌ಗಳ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಕೋರಿ ಕರ್ನಾಟಕ ಎಂಜಿನಿಯರ್‌ಗಳ ಸಂಘವು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಜುಲೈ 31ರಂದು ಮನವಿ ಸಲ್ಲಿಸಿದೆ.

ಈ ಎಲ್ಲ ಲೋಪಗಳಿಗೆ ಕಾರಣವಾಗಿರುವ ಇಲಾಖೆಯ ಉಪ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಜನೀಶ್‌ ಗೋಯಲ್‌ ನಿರ್ದೇಶನ ನೀಡಿದ್ದಾರೆ. ಬಡ್ತಿ ವಂಚಿತ ಎಂಜಿನಿಯರ್‌ಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಎಂಜಿನಿಯರ್‌ಗಳಿಗೆ ಬಡ್ತಿ ನೀಡುವ ಸಂಬಂಧ ಜುಲೈ 8ರಂದು ಇಲಾಖಾ ಪದೋನ್ನತಿ ನಡೆಯಲಿದೆ ಎಂದು ಜುಲೈ 5ರಂದು ಪ್ರಕಟಿಸಲಾಯಿತು. ಎಂಜಿನಿಯರ್‌ಗಳ ಸೇವಾ ಹಿನ್ನೆಲೆ, ವಿಚಾರಣೆ ಎದುರಿಸುತ್ತಿದ್ದಾರೆ ವಿವರಗಳನ್ನೂ ನೀಡುವಂತೆಯೂ ಕೋರಲಾಯಿತು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ಹೊತ್ತಿನಲ್ಲೇ 8ರಂದು ಗುಪ್ತ ಸ್ಥಳದಲ್ಲಿ ಪದೋನ್ನತಿ ಸಭೆ ನಡೆಸಿ 213 ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.  

ಸಚಿವರು ಸೂಚಿಸಿದರೂ ಕ್ರಮ ಇಲ್ಲ: ‘1987ರಲ್ಲಿ ನೇಮಕಗೊಂಡ ಎಂಜಿನಿಯರ್‌ಗಳಿಗೆ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಬೇಕು. ಅದರಲ್ಲಿ ನಿವೃತ್ತಿ ಹೊಂದುವವರನ್ನೂ ಪರಿಗಣಿಸಬೇಕು ಎಂದು ವಿನಂತಿಸಿ ಜೂನ್‌ ತಿಂಗಳಲ್ಲಿ ಮನವಿ ಸಲ್ಲಿಸಲಾಗಿತ್ತು. 45 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಮಾಹಿತಿಯನ್ನು ಒದಗಿಸಲಾಗಿತ್ತು. ಆದರೆ, ಸೇವಾ ಹಿರಿತನ ಹೊಂದಿರುವ 100 ಎಂಜಿನಿಯರ್‌ಗಳನ್ನು ಕೈಬಿಟ್ಟು ಪದೋನ್ನತಿ ನೀಡಲಾಗಿದೆ. ಈ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಅನ್ಯಾಯವಾಗಿರುವುದನ್ನು ಒಪ್ಪಿಕೊಂಡರು. ಒಂದೆರಡು ದಿನಗಳಲ್ಲಿ ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವ ಎಚ್‌.ಡಿ.ರೇವಣ್ಣ ಸಹ ಸೂಚಿಸಿದ್ದರು. ಆದರೆ, 20 ದಿನಗಳು ಕಳೆದರೂ ಕ್ರಮ ಕೈಗೊಂಡಿಲ್ಲ’ ಎಂದು ಕರ್ನಾಟಕ ಎಂಜಿನಿಯರ್‌ಗಳ ಸಂಘ ಮನವಿಯಲ್ಲಿ ತಿಳಿಸಿದೆ.

ಪುನರ್‌ಪರಿಶೀಲನೆಗೆ ಆಗ್ರಹ

‘ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಯಲ್ಲಿ ನನ್ನ ಜ್ಯೇಷ್ಠತಾ ಕ್ರಮಸಂಖ್ಯೆ 5202 ಇದೆ. ಆದರೆ, ಜ್ಯೇಷ್ಠತಾ ಕ್ರಮಸಂಖ್ಯೆ 5203 ಹೊಂದಿರುವ ಫಜೀರ್‌ ಉಲ್ಲಾ ಪಿ.ಎಚ್‌. ಅವರಿಗೆ ಪದೋನ್ನತಿ ನೀಡಲಾಗಿದೆ. ಇದೇ ರೀತಿ, ಹಲವು ಕಿರಿಯರಿಗೆ ಪದೋನ್ನತಿ ನೀಡಲಾಗಿದೆ. ಹೀಗಾಗಿ, ನನಗೂ ಬಡ್ತಿ ನೀಡಬೇಕು. ಜತೆಗೆ, ಕಿರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿರುವುದನ್ನು ಪುನರ್‌ ಪರಿಶೀಲಿಸಬೇಕು’ ಎಂದು ಎ.ಪ್ರಕಾಶ್‌ ರಾವ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ರೀತಿ, 20ಕ್ಕೂ ಅಧಿಕ ಎಂಜಿನಿಯರ್‌ಗಳು ಮನವಿ ಸಲ್ಲಿಸಿ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಾಂಶಗಳು 

ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ವೇಳೆ ಪದೋನ್ನತಿ ಸಭೆ

ವಿಚಾರಣೆ ಎದುರಿಸುತ್ತಿರುವ 8 ಎಂಜಿನಿಯರ್‌ಗಳಿಗೆ ಬಡ್ತಿ

ಬಡ್ತಿ ಸಿಗದೆ ನಿವೃತ್ತರಾದ 6 ಎಂಜಿನಿಯರ್‌ಗಳು

Post Comments (+)