ಕಿಕ್ಕಿರಿದ ಎಸ್‌.ಆರ್‌.ಕಂಠಿ ಸಭಾಂಗಣ; ಸ್ಪರ್ಧಿಗಳಲ್ಲಿ ಅಮಿತೋತ್ಸಾಹ..!

7

ಕಿಕ್ಕಿರಿದ ಎಸ್‌.ಆರ್‌.ಕಂಠಿ ಸಭಾಂಗಣ; ಸ್ಪರ್ಧಿಗಳಲ್ಲಿ ಅಮಿತೋತ್ಸಾಹ..!

Published:
Updated:

ವಿಜಯಪುರ: ನಗರದಲ್ಲಿ ಎರಡನೇ ಬಾರಿಗೆ ನಡೆದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತು.

ನಸುಕಿನ 8ಕ್ಕೆ ಸ್ಪರ್ಧೆಗಾಗಿ ಆರಂಭಗೊಂಡ ನೋಂದಣಿ, ಬೆಳಿಗ್ಗೆ 10 ದಾಟಿದರೂ ನಡೆದಿತ್ತು. ದೂರದ ಊರುಗಳಿಂದ ಬಂದ ಸ್ಪರ್ಧಿಗಳಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗದೆ, ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಿಂತುಕೊಂಡೇ ಕಾರ್ಯಕ್ರಮ ಕಣ್ತುಂಬಿಕೊಂಡರು.

ರಸಪ್ರಶ್ನೆ ಸ್ಪರ್ಧೆ ಆರಂಭಕ್ಕೂ ಮುನ್ನವೇ 800ಕ್ಕೂ ಹೆಚ್ಚು ಆಸನ ಸಾಮರ್ಥ್ಯದ ಸೈನಿಕ ಶಾಲೆಯ ಎಸ್‌.ಆರ್‌.ಕಂಠಿ ಸಭಾಂಗಣ ಭರ್ತಿಯಾಗಿತ್ತು. ಸ್ಪರ್ಧೆ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಚರ್ಚೆ ನಡೆಸಿದರು. ಅತೀವ ಕುತೂಹಲ ವ್ಯಕ್ತಪಡಿಸಿ, ಶಿಕ್ಷಕರಿಂದ ಮಾರ್ಗದರ್ಶನ ಪಡೆದರು.

ಬಿಡುವಿನ ವೇಳೆ ಸಂಘಟಕರು ನೀಡಿದ ಬಾದಾಮಿ ಹಾಲು, ಬಿಸ್ಕೆಟ್‌ ತಿಂದು ಹಸಿವು ತಣಿಸಿಕೊಂಡರು. ಇದೇ ಸಂದರ್ಭ ತಮ್ಮ ಶಿಕ್ಷಕರು, ತಮ್ಮದೇ ಶಾಲೆಯ ಸಹಪಾಠಿ ತಂಡದೊಂದಿಗೆ ಪ್ರಶ್ನೋತ್ತರ ಕುರಿತಂತೆ ಚರ್ಚಿಸಿದರು.

ಆಲೋಚನಾ ಲೋಕ...

ಮೊದಲ ಸುತ್ತಿನ ಲಿಖಿತ ಪರೀಕ್ಷೆ ಆರಂಭಗೊಳ್ಳುತ್ತಿದ್ದಂತೆ, ಆಲೋಚನಾ ಲೋಕದಲ್ಲಿ ಮಿಂದೆದ್ದು, ಪಕ್ಕದಲ್ಲೇ ಕುಳಿತಿದ್ದ ತಂಡಕ್ಕೆ ಉತ್ತರ ತಿಳಿಯದಂತೆ ಬರೆದರು. ತಂಡದ ಇಬ್ಬರು ಸದಸ್ಯರು ಸುದೀರ್ಘ ಆಲೋಚನೆ ನಡೆಸಿ, ಉತ್ತರ ಬರೆದರು. ಫಲಿತಾಂಶ ಪ್ರಕಟಗೊಂಡಾಗ ಪ್ರಶ್ನೆಗೆ ಸರಿಯಾದ ಉತ್ತರ ತುಂಬಿದವರು ಹಿಗ್ಗಿದರೆ, ತಪ್ಪಿನ ಉತ್ತರ ತುಂಬಿದವರು ಅಯ್ಯೋ..! ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ಣಾಯಕ ಹಂತಕ್ಕೆ ಆರು ತಂಡಗಳು ಆಯ್ಕೆಯಾದ ಬಳಿಕ, ಇಡೀ ವಿದ್ಯಾರ್ಥಿ ಸಮೂಹ ಅಂತಿಮ ಹಂತದ ಸ್ಪರ್ಧೆಗಳನ್ನು ತದೇಕಚಿತ್ತದಿಂದ ವೀಕ್ಷಿಸಿತು. ಬಜರ್‌ ರೌಂಡ್‌ನಲ್ಲಿ ಋಣಾತ್ಮಕ ಅಂಕಗಳಿದ್ದುದರಿಂದ ಸ್ಪರ್ಧಿಗಳು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳದ ಸಂದರ್ಭ, ಉತ್ತರ ಹೇಳಲು ಮೇಡಂ... ಮೇಡಂ... ನಾ ಹೇಳುವೆ ಎಂದು ಎದ್ದು ನಿಂತು ಮನವಿ ಸಲ್ಲಿಸಿತು.

ಕೆಲ ಪ್ರಶ್ನೆಗಳನ್ನು ವೀಕ್ಷಕರಿಗೂ ಕೇಳಿ, ಸರಿ ಉತ್ತರ ಹೇಳಿದವರಿಗೆ ಕಾಣಿಕೆ ನೀಡಲಾಯಿತು. ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಾಲ್ಗೊಂಡಿದ್ದ ಎಲ್ಲರೂ ಸಮಾರಂಭಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಚ್ಚುಕಟ್ಟಿನ ನಿರ್ವಹಣೆಗೆ ಪ್ರಶಂಸಿಸಿದರು.

ಸಮಾರಂಭದ ಆರಂಭದಿಂದ ಅಂತ್ಯದವರೆಗೆ ಪೋಷಕರು, ಶಿಕ್ಷಕರು ತಮ್ಮ ಮಕ್ಕಳ ಭಾಗವಹಿಸುವಿಕೆಯನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದರು. ಬಿಡುವಿನ ವೇಳೆ, ಸಮಾರಂಭ ಮುಗಿದ ಬಳಿಕ ವೇದಿಕೆಯ ಮುಂಭಾಗ ನಿಂತು ಫೋಟೊ ತೆಗೆಸಿಕೊಳ್ಳಲು ಪೈಪೋಟಿ ನಡೆಸಿದರು. ಸೆಲ್ಫಿ ಸಂಭ್ರಮವೂ ಮುಗಿಲು ಮುಟ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !