ರಾಯಣ್ಣ ರೈಲು ನಿಲ್ದಾಣ ಈಗ ರಿಲ್ಯಾಕ್ಸ್ ತಾಣ

ಸೋಮವಾರ, ಮೇ 20, 2019
30 °C
ಸ್ವಚ್ಛತೆಯಿಂದ ಮಸಾಜ್‌ವರೆಗೆ...

ರಾಯಣ್ಣ ರೈಲು ನಿಲ್ದಾಣ ಈಗ ರಿಲ್ಯಾಕ್ಸ್ ತಾಣ

Published:
Updated:
Prajavani

ಸದಾ ಗಿಜಿಗುಡುವ ಜನಸಂದಣಿ, ಕೊಳಕು ನೆಲ, ಗಬ್ಬು ವಾಸನೆ – ಇಷ್ಟು ಹೇಳಿದರೆ ಇದೊಂದು ರೈಲು ನಿಲ್ದಾಣದ ಎಂದು ಥಟ್ಟನೆ ಹೇಳಬಹುದು. ಆದರೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಇದಕ್ಕೆ ಅಪವಾದ. ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮವು (ಐಆರ್‌ಎಸ್‌ಡಿಸಿ) ನೈಟ್‌ಫ್ರಾಂಕ್ ಕಂಪನಿ ಜತೆಗೂಡಿ ನಿಲ್ದಾಣವನ್ನು ಪ್ರಯಾಣಿಕಸ್ನೇಹಿಯಾಗಿಸಲು ಮುಂದಾಗಿದೆ. ಇದರ ಫಲವೇ ಸುಸಜ್ಜಿತ ಹಾಗೂ ಶುಭ್ರ ನಿಲ್ದಾಣ.

ಪ್ರಯಾಣಿಕರು ಬರಲು ಹಾಗೂ ಹೋಗಲು ಪ್ರತ್ಯೇಕ ದಾರಿಗಳನ್ನು ಮಾಡಲಾಗಿದೆ. ಇದು ಜನಜಂಗುಳಿ ಆಗುವುದನ್ನು ತಪ್ಪಿಸುತ್ತದೆ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಸ್ತವ್ಯಸ್ತವಾ
ಗಿದ್ದ ಪಾರ್ಕಿಂಗ್ ವ್ಯವಸ್ಥೆಯನ್ನು ಸುಸಜ್ಜಿತಗಳಿಸಲಾಗಿದೆ. ಕೆಟ್ಟುನಿಂತಿರುವ ಲಿಫ್ಟನ್ನು ಮೂರು ದಿನಗಳಲ್ಲಿ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ.

ಅಚ್ಚುಕಟ್ಟಾದ ವಾತಾವರಣ

ಸ್ವಚ್ಛತೆಯೇ ರೈಲು ನಿಲ್ದಾಣಗಳ ಅತಿದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಹಲವು ಯತ್ನಗಳು ನಡೆದಿದ್ದವಾದರೂ ಯಶಸ್ಸು ಕಂಡಿರಲಿಲ್ಲ. ಇದೀಗ ನೈಟ್‌ಫ್ರಾಂಕ್ ಸಂಸ್ಥೆ ಸಿಬ್ಬಂದಿಯ ಯತ್ನದಿಂದಾಗಿ ನಿಲ್ದಾಣದ ಸ್ವರೂಪದಲ್ಲಿ ಬದಲಾವಣೆ ಕಾಣುವಂತಾಗಿದೆ. ಹೌಸ್ ಕೀಪಿಂಗ್ ಸಿಬ್ಬಂದಿಯು ಕಾರ್ಪೊರೇಟ್ ಕಚೇರಿಗಳ ರೀತಿಯಲ್ಲೇ ನಿರಂತರವಾಗಿ ಕಸ ಗುಡಿಸುವ, ನೆಲ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ ಸ್ವಯಂಚಾಲಿತ ಸ್ವಚ್ಚತಾ ಯಂತ್ರಗಳನ್ನೂ ಬಳಸಲಾಗುತ್ತಿದೆ. ಇದರಿಂದಾಗಿ ಇಲ್ಲಿರುವ 10 ಪ್ಲಾಟ್‌ಫಾರಂಗಳಲ್ಲಿ ಅಚ್ಚುಕಟ್ಟಾದ ವಾತಾವರಣವನ್ನು ಕಾಣಬಹುದು.

ಪ್ರತಿ ರೈಲು ಬಂದು ಹೋಗುವ ನಡುವಿನ ಸಮಯದಲ್ಲಿ ರೈಲ್ವೆ ಹಳಿ ಪ್ರದೇಶ ಸ್ವಚ್ಛಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈಲು ಹೋಗುತ್ತಿದ್ದಂತೆಯೇ ಸಿಬ್ಬಂದಿಯು ಸ್ವಚ್ಛತಾ ಕಾರ್ಯಕ್ಕೆ ಇಳಿಯುತ್ತಾರೆ. ಇವರಿಗೆ ಶೂ, ಕೈಗವಸು ಪೂರೈಸಲಾಗಿದೆ. ಬಹುತೇಕ ಎಲ್ಲ ಕಡೆಯೂ ಕಸದ ಡಬ್ಬಿಗಳು ಕಾಣಸಿಗುತ್ತವೆ. ತ್ಯಾಜ್ಯವನ್ನು ಬೇರ್ಪಡಿಸುವ ಕೆಲಸವೂ ನಡೆಯುತ್ತಿದೆ.

ಈಗಾಗಲೇ ಇದ್ದ ಕುಡಿಯುವ ನೀರಿನ ತಾಣಗಳನ್ನು ದುರಸ್ತಿ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ವೃದ್ಧರಿಗೂ ನೀರು ಕೈಗೆಟುಕುವಂತೆ ಮರುವಿನ್ಯಾಸ ಮಾಡಲಾಗಿದೆ.

ಫುಡ್‌ಕೋರ್ಟ್

ದೂರದೂರಿನಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೋಟೆಲ್‌ಗಳನ್ನು ಸಜ್ಜುಗೊಳಿಸಲಾಗಿದೆ. ಸ್ಥಳೀಯ ಆಹಾರ ಒದಗಿಸುವ ‘ಹಳ್ಳಿಮನೆ’ಯಿಂದ ಹಿಡಿದು ‘ಡಾಮಿನೊಸ್’ ತರಹದ ಮಳಿಗೆಗಳು ಇಲ್ಲಿವೆ. ಅಂತರರಾಷ್ಟ್ರೀಯ ಫುಡ್‌ಕೋರ್ಟ್‌ಗಳನ್ನು ಮುಂದಿನ ದಿನಗಳಲ್ಲಿ ರೂಪಿಸುವ ಉದ್ದೇಶ ಇದೆ ಎನ್ನುತ್ತಾರೆ ನೈಟ್‌ಫ್ರಾಂಕ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಮಿತ್ ಸಿನ್ಹಾ. ದಿನದ 24 ಗಂಟೆಯೂ ಊಟ ಲಭ್ಯವಾಗುವಂತೆ ಮಾಡುವುದು ನಿಗಮದ ಗುರಿ.

ಪ್ರಯಾಣಿಕರು ಏನಂತಾರೆ?

‘ಕಳೆದ ಫೆಬ್ರುವರಿ ತಿಂಗಳಿನಿಂದ ಅಭಿವೃದ್ಧಿ ಕೆಲಸಗಳು ಆಗಿದ್ದು, ನಿಲ್ದಾಣವು ಪ್ರಯಾಣಿಕಸ್ನೇಹಿಯಾಗಿದೆ ಎನ್ನುತ್ತಾರೆ ರೈಲ್ವೆ ಪ್ರಯಾಣಿಕ ಧನಂಜಯ್. ಮಧ್ಯಪ್ರದೇಶದಿಂದ ಬಂದಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಮಾತಿಗೆ ಸಿಕ್ಕರು. ‘ಪ್ಲಾಟ್‌ಫಾರಂಗಳಲ್ಲಿ ಎಲೆಕ್ಟ್ರಿಕ್ ವಾಹನ ಸೌಲಭ್ಯ ಇದೆ. ಆದರೆ ನಿಲ್ದಾಣದ ಪ್ರವೇಶದ್ವಾರದಲ್ಲೇ ವ್ಹೀಲ್‌ಚೇರ್ ಸೌಲಭ್ಯ ಇದ್ದರೆ, ನಮ್ಮಂತವರು ಹಾಗೂ ವಯಸ್ಸಾದವರಿಗೆ ಅನುಕೂಲವಾಗುತ್ತದೆ’ ಎನ್ನುವುದು ಅವರ ಬೇಡಿಕೆಯಾಗಿತ್ತು. 

ಬರಲಿವೆ ‘ಸ್ಲೀಪಿಂಗ್ ಪಾಡ್’

ರೈಲು ಪ್ರಯಾಣಿಕರಿಗೆ ತಾತ್ಕಾಲಿಕ ವಿಶ್ರಾಂತಿಗಾಗಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ ಮುಂದಾಗಿದೆ. ವಿಮಾನ ನಿಲ್ದಾಣಗಳಲ್ಲಿ ಬಳಕೆಯಾಗುತ್ತಿರುವ ‘ಸ್ಲೀಪ್‌ಪಾಡ್‌’ಗಳನ್ನು ಶೀಘ್ರದಲ್ಲೇ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲೂ ಅಳವಡಿಸಲು ನಿರ್ಧರಿಸಿದೆ. 

ಇವುಗಳನ್ನು ‘ಪಾಡ್ ಹೋಟೆಲ್’ ಎಂದೂ ಕರೆಯು ತ್ತಾರೆ. ಚಿಕ್ಕ ಕೋಣೆಯಷ್ಟಿರುವ ಜಾಗದಲ್ಲಿ ಮಂಚ, ಹಾಸಿಗೆ, ಸಂಗೀತ ಕೇಳುವ ಸಾಧನ, ಮೊಬೈಲ್ ಚಾರ್ಜಿಂಗ್‌, ಕಾಫಿ–ಟೀ ಪೂರೈಸುವ ವ್ಯವಸ್ಥೆ ಇಲ್ಲಿ ಇರಲಿದೆ. ವಿಮಾನ ನಿಲ್ದಾಣಗಳ ಈ ಪರಿಕಲ್ಪನೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಪರಿಚಯವಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ 50 ಪಾಡ್‌ಗಳನ್ನು ನಿರ್ಮಿಸುವ ಉದ್ದೇಶವಿದೆ ಎನ್ನುತ್ತಾರೆ ನಿಗಮದ ಎಂಜಿನಿಯರ್ ಶ್ರವಣ್. 

ಫಳಫಳ ಹೊಳೆಯುವ ಸೂಪರ್ ಸಬ್‌ವೇ

ನಿಲ್ದಾಣದ ಹಿಂಭಾಗದ ಪ್ಲಾಟ್‌ಫಾರಂನಿಂದ ಪ್ರವೇಶದ್ವಾರಕ್ಕೆ ಸಂಪರ್ಕ ಕಲ್ಪಿಸುವ ಸಬ್‌ವೇನಲ್ಲಿ ನಡೆದಾಡುವುದೇ ಚೆಂದ. ಎರಡೂ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಿ ಚಿತ್ತಾರಗೊಸಲಾಗಿದೆ. ಗಾಂಧೀಜಿ ಅವರು ರೈಲಿನಲ್ಲಿ ಪ್ರಯಾಣಿಸುವ ಚಿತ್ರಗಳು ಹಾಗೂ ಕಲಾಕೃತಿಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ದಾರಿಹೋಕರಿಗೆ ಇದು ವಿಶೇಷ ಅನುಭೂತಿ ನೀಡುತ್ತಿದೆ. ನೆಲವನ್ನು ನಿರಂತರವಾಗಿ ಸ್ವಚ್ಛಗೊಳಿಸುವ ಸಿಬ್ಬಂದಿ ಸಬ್‌ವೇನಲ್ಲಿ ಕಾಣಸಿಗುತ್ತಾರೆ. ‘ನೆಲ ಜಾರುತ್ತಿದೆ, ಜಾಗರೂಕತೆಯಿಂದ ನಡೆಯಿರಿ’ ಎಂದು ಸೂಚಿಸುವ ಫಲಕ ಇಟ್ಟು, ಅವರು ಸ್ವಚ್ಛತೆಗೆ ಇಳಿಯುತ್ತಾರೆ. ನೀರು ನಿಲ್ಲದಂತೆ, ಸೊಳ್ಳೆಗಳ ಉತ್ಪತ್ತಿಗೆ ಆಸ್ಪದ ನೀಡದಂತೆ ನೈರ್ಮಲ್ಯ ಕಾಪಾಡಲಾಗಿದೆ. 

ಮಸಾಜ್‌ ಮಷಿನ್

ಪ್ರಯಾಣಿಕಸ್ನೇಹಿ ಕ್ರಮದ ಭಾಗವಾಗಿ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಬಾಡಿ ಮಸಾಜ್ ಹಾಗೂ ಫುಟ್ ಮಸಾಜ್ ಯಂತ್ರಗಳನ್ನು ಇರಿಸಲಾಗಿದೆ. ‘ಡಿ ರೊಬಾಟಿಕ್ ಮಸಾಜ್’ ಯಂತ್ರದಲ್ಲಿ ಎಲೆಕ್ಟ್ರಿಕ್ ಹಾಗೂ ಮ್ಯಾಗ್ನೆಟಿಕ್ ಬಾಲ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಕುಳಿತ ವ್ಯಕ್ತಿಯ ಬೆನ್ನು, ಸೊಂಟ ಹಾಗೂ ಕಾಲುಗಳಿಗೆ ಆರಾಮ ದೊರೆಯುತ್ತದೆ. 10 ನಿಮಿಷದ ಬಾಡಿ ಮಸಾಜ್‌ಗೆ ₹120. ಕಾಲುಗಳ ಮಸಾಜ್‌ಗೆ ಬೇರೆ ಯಂತ್ರವಿದ್ದು, ಇದಕ್ಕೆ ₹60 ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಫಿಶ್ ಮಸಾಜ್‌ ಅನ್ನು ಪರಿಚಯಿಸುವ ಉದ್ದೇಶವಿದೆ ಎನ್ನುತ್ತಾರೆ ನೈಟ್‌ಫ್ರಾಂಕ್‌ನ ಮಾರ್ಕೆಂಟಿಂಗ್ ವಿಭಾಗದ ಶ್ರೀಕಾಂತ್. 

ರೈಲಿಗಾಗಿ ಕಾಯು ತ್ತಿದ್ದ ವ್ಯಕ್ತಿಯೊಬ್ಬರು ಕುತೂಹಲಕ್ಕೆ ಮಸಾಜ್ ಯಂತ್ರದಲ್ಲಿ ಕುಳಿತು, ಕೊಂಚ ರಿಲ್ಯಾಕ್ಸ್ ಆದರು. ದರವನ್ನು ಕಡಿಮೆ ಮಾಡಿದರೆ ಒಳ್ಳೆಯದು ಎಂಬುದು ಜನರ ಅಭಿಪ್ರಾಯ ಎನ್ನುತ್ತಾರೆ ಇದನ್ನು ನಿರ್ವಹಿಸುತ್ತಿರುವ ಕೃಷ್ಣ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !