ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಆಲಿಕಲ್ಲು ಸಹಿತ ಧಾರಾಕಾರ ಮಳೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಕೆಲವು ಗಂಟೆಗಳ ಬಿಡುವಿನ ಬಳಿಕ ಸಂಜೆ 6ರಿಂದ ಸುಮಾರು ತಾಸು ಮಳೆ ಸುರಿಯಿತು.

ಮಧ್ಯಾಹ್ನ 2 ಗಂಟೆಗೆ ಶುರುವಾದ ಮಳೆ ಬಹುತೇಕ ಕಡೆ ಸುಮಾರು ಮುಕ್ಕಾಲು ತಾಸು ಎಡೆಬಿಡದೆ ಸುರಿಯಿತು. ಮಳೆಯೊಂದಿಗೆ ಧರೆಗಿಳಿದ ಆಲಿಕಲ್ಲುಗಳನ್ನು ಕಂಡ ಸಾರ್ವಜನಿಕರು ಖುಷಿಪಟ್ಟರು. ಕೆಲವರು ಅವುಗಳನ್ನು ಆಯ್ದುಕೊಂಡು ನೋಡಿದರು. ಇನ್ನೂ ಕೆಲವರು ಬಾಯಿಗೂ ಹಾಕಿಕೊಂಡರು. ಚಿತ್ರಗಳನ್ನು ಕ್ಲಿಕ್ಕಿಸಿ, ವಿಡಿಯೊಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರು.

ನಗರದ ವಾಣಿಜ್ಯ ಪ್ರದೇಶಗಳಾದ ಎಂ.ಜಿ.ರಸ್ತೆ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ರೆಸಿಡೆನ್ಸಿ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲುಗಳು ಬಿದ್ದವು. ಯಲಹಂಕದ ಸುತ್ತಮುತ್ತ ಸಹ ಮಳೆರಾಯನ ಆರ್ಭಟ ಜೋರಾಗಿತ್ತು. 

ಮಳೆಯಿಂದಾಗಿ ಬಹುತೇಕ ಪ್ರದೇಶಗಳ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಒಕಳಿಪುರ ಜಂಕ್ಷನ್‌ನಿಂದ ರಾಜಾಜಿನಗರದ ರಾಮಮಂದಿರದ ವರೆಗೆ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಮಾಗಡಿ ರಸ್ತೆಯಲ್ಲಿನ ದಟ್ಟಣೆಯಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. 

6 ಮರಗಳು ಬುಡಮೇಲು: ಮಳೆ–ಗಾಳಿಯ ರಭಸಕ್ಕೆ ನಿಮಾನ್ಸ್‌ ಜಂಕ್ಷನ್‌, ಜಯನಗರದ 7ನೇ ಬ್ಲಾಕ್‌ನ 13ನೇ ಅಡ್ಡರಸ್ತೆ, ಜಯನಗರ ಮೆಟ್ರೊ ನಿಲ್ದಾಣ ಸಮೀಪ, ಬನಶಂಕರಿಯ ಜೆಎಸ್‌ಎಸ್‌ ಜಂಕ್ಷನ್‌, ನಾಗವಾರದ ಲುಂಬಿನಿ ಗಾರ್ಡನ್‌, ಕೆ.ಆರ್‌.ಪುರದ ದೇವಸಂದ್ರದಲ್ಲಿ ತಲಾ ಒಂದೊಂದು ಮರಗಳು ಉರುಳಿ ಬಿದ್ದವು. ರಾಜರಾಜೇಶ್ವರಿ ನಗರದ ಓಂಕಾರ ಹಿಲ್‌ ಬಳಿ ಹಲವಾರು ಮರಗಳ ಕೊಂಬೆಗಳು ಮುರಿದು ಬಿದ್ದವು.

ಜಯನಗರದ 4ನೇ ಬ್ಲಾಕ್‌ನ 32ನೇ ಮುಖ್ಯರಸ್ತೆ ಬದಿ ನಿಲ್ಲಿಸಿದ್ದ ನ್ಯಾನೊ ಕಾರು ಮೇಲೆ ಮರದ ಕೊಂಬೆಗಳು ಉರುಳಿ ಬಿದ್ದು, ಕಾರು ಜಖಂಗೊಂಡಿತು.

 *

ಇನ್ನು ಎರಡು ದಿನ ಮಳೆ 

ಶನಿವಾರ ಮತ್ತು ಭಾನುವಾರ ನಗರದಲ್ಲಿ ಮೋಡಕವಿದ ವಾತಾವರಣ ಇರಲಿದೆ. ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. 
*

Post Comments (+)