ಬಿರುಗಾಳಿ–ಮಿಂಚು–ಗುಡುಗು–ಸಿಡಿಲಿನಬ್ಬರ..!

ಮಂಗಳವಾರ, ಜೂನ್ 18, 2019
24 °C
ವಿಜಯಪುರ ಜಿಲ್ಲೆಯ ವಿವಿಧೆಡೆ ವರ್ಷಧಾರೆ; ಅಲ್ಲಲ್ಲೇ ನೆಲಕ್ಕುರುಳಿದ ಮರಗಳು

ಬಿರುಗಾಳಿ–ಮಿಂಚು–ಗುಡುಗು–ಸಿಡಿಲಿನಬ್ಬರ..!

Published:
Updated:
Prajavani

ವಿಜಯಪುರ: ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಮುಸ್ಸಂಜೆ, ರಾತ್ರಿ ವರ್ಷಧಾರೆಯಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಸಿಂದಗಿ ತಾಲ್ಲೂಕಿನ ಚಾಂದಕವಠೆ ಗ್ರಾಮದ ಪರಮಾನಂದ ಪ್ರೌಢಶಾಲೆಯ ಆವರಣದಲ್ಲಿ ಬೀಡು ಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಮರವೊಂದು ಬಿದ್ದಿದ್ದು, ವಿಜಯಪುರ ತಾಲ್ಲೂಕಿನ ಟಕ್ಕಳಕಿಯ ಸಂತೋಷ ರಾಠೋಡ, ಜಾಲಗೇರಿ ಗ್ರಾಮದ ವಿಲಾಸ ಚವ್ಹಾಣ ಎಂಬುವರಿಗೆ ಸೇರಿದ ಆರು ಕುರಿಗಳು, ಎರಡು ಕುದುರೆ ಮೃತಪಟ್ಟಿವೆ ಎಂದು ಗ್ರಾಮದ ಶಿವಶರಣ ಕನ್ನೊಳ್ಳಿ ತಿಳಿಸಿದರು.

ವಿಜಯಪುರ ನಗರದಲ್ಲಿ ಮಳೆಯ ಅಬ್ಬರಕ್ಕಿಂತ, ಬಿರುಗಾಳಿ, ದೂಳು, ಮಿಂಚು, ಗುಡುಗು, ಸಿಡಿಲಿನ ಆರ್ಭಟವೇ ಹೆಚ್ಚಿತ್ತು. ಅರ್ಧ ತಾಸಿಗೂ ಹೆಚ್ಚಿನ ಅವಧಿ ವರ್ಷಧಾರೆಯಾಗಿದ್ದು, ವಿವಿಧೆಡೆ ಮರಗಳು ನೆಲಕ್ಕುರುಳಿವೆ.

ಸಿಂದಗಿ ರಸ್ತೆಯಲ್ಲಿರುವ ಚೈತನ್ಯ ಡಾಬಾದ ಪತ್ರಾಸಿನ ಶೀಟ್‌ಗಳು ಹಾರಿ ಹೋಗಿವೆ. ಒಳಗಿದ್ದ ಕೆಲವರ ಮೇಲೆ ಈ ಶೀಟ್‌ಗಳು ಬಿದ್ದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ ಶೆಡ್‌ಗಳ ಪತ್ರಾಸಿನ ಶೀಟ್‌ಗಳು ಹಾರಿ ಹೋಗಿದ್ದು, ಬಿರುಗಾಳಿಗೆ ದೂಳು ಹೆಚ್ಚಿತ್ತು ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯಪುರದ ಎನ್‌ಇಕೆಆರ್‌ಟಿಸಿಯ ಎರಡನೇ ಬಸ್‌ ಡಿಪೊದ ಆವರಣದಲ್ಲಿದ್ದ ಬೃಹತ್ ಮರವೊಂದು ಬಿರುಗಾಳಿಗೆ ಉರುಳಿಬಿದ್ದಿದ್ದು, ಡಿಪೊದ ಆವರಣ ಗೋಡೆ ಕುಸಿದು ಬಿದ್ದಿದೆ. ಇದೇ ಮರ ಹೈಟೆನ್ಶನ್‌ ವಿದ್ಯುತ್‌ ತಂತಿ ಮೇಲೆ ಬಿದ್ದಿದ್ದು, ತಂತಿಗಳು ಹಲವರ ಮನೆ ಮೇಲೆ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದುದರಿಂದ ಯಾವುದೇ ಅಪಾಯವಾಗಿಲ್ಲ ಎಂದು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಆನಂದ ಧುಮಾಳೆ ಮಾಹಿತಿ ನೀಡಿದರು.

ಸೊಲ್ಲಾಪುರ ರಸ್ತೆಯಲ್ಲಿನ ಮರಗಳ ರೆಂಬೆ–ಕೊಂಬೆಗಳು ಬಿರುಗಾಳಿಯ ಅಬ್ಬರಕ್ಕೆ ಮುರಿದು ಬಿದ್ದಿವೆ. ರಸ್ತೆ ಮಧ್ಯೆ ಅಳವಡಿಸಿದ್ದ ಕೆಲ ಜಾಹೀರಾತು ಫಲಕಗಳು ಧಾರಾಶಾಹಿಯಾಗಿವೆ. ನಗರದ ಪ್ರಮುಖ ವೃತ್ತಗಳಲ್ಲಿ ಬೈಕ್‌ ಸವಾರರಿಗೆ ಬಿಸಿಲಿನ ಝಳ ತಟ್ಟುವುದನ್ನು ತಪ್ಪಿಸಲಿಕ್ಕಾಗಿ ಮಹಾನಗರ ಪಾಲಿಕೆ ಆಡಳಿತ ಅಳವಡಿಸಿದ್ದ ಹಸಿರು ಹೊದಿಕೆಯೂ ಹರಿದು ಬಿದ್ದಿದೆ.

ನಗರದ ಹೊರ ವಲಯದ ಐನಾಪುರ ಮಹಲ್‌ನಲ್ಲೂ ಮರವೊಂದು ಮಳೆ–ಬಿರುಗಾಳಿಗೆ ಉರುಳಿ ಬಿದ್ದಿದೆ. ತಿಕೋಟಾ ಗ್ರಾಮದ ಸುತ್ತಮುತ್ತಲೂ ವರ್ಷಧಾರೆಯಾಗಿದ್ದು, ಮಳೆಯಿಲ್ಲದೆ ಕಂಗಾಲಾಗಿದ್ದ ದ್ರಾಕ್ಷಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಾಳಿಕೋಟೆ, ಮುದ್ದೇಬಿಹಾಳದಲ್ಲೂ ಮಳೆಯಾಗಿದೆ. ಇಂಡಿ, ಸಿಂದಗಿ, ತಾಂಬಾ, ಬಸವನಬಾಗೇವಾಡಿ ಪಟ್ಟಣದಲ್ಲಿ ಮೋಡ ಕವಿದ ವಾತಾವರಣವಿದ್ದರೂ ವರ್ಷಧಾರೆಯಾಗಿಲ್ಲ. ಗುಡುಗು–ಮಿಂಚು–ಗಾಳಿಯ ಅಬ್ಬರವೇ ಹೆಚ್ಚಿತ್ತು.

ವಿಜಯಪುರಿಗರಲ್ಲಿ ಖುಷಿ

ಕಡು ಬೇಸಿಗೆಯ ಅಂತ್ಯ ಬಂದರೂ; ಮುಂಗಾರು ಪೂರ್ವ ಮಳೆ ಸುರಿಯದಿದ್ದುದರಿಂದ ಜಿಲ್ಲೆಯ ಜನರು ಚಿಂತೆಗೀಡಾಗಿದ್ದರು. ಬಿಸಿಲ ಬೇಗೆ, ಝಳವೂ ವಿಪರೀತವಿತ್ತು.

ಬೆಳಿಗ್ಗೆ 9–10 ಗಂಟೆ ಆಸುಪಾಸಿನಿಂದಲೇ ಪ್ರಖರ ಬಿಸಿಲಿಗೆ ಜನ ತತ್ತರಿಸಿದ್ದರು. ನಸುಕಿನ ನಾಲ್ಕರವರೆಗೂ ಬಿಸಿಲಿನ ಝಳ ತಾಳಲಾರದೆ ನಿದ್ದೆ ಮಾಡಲಾಗದೆ ಒದ್ದಾಡುತ್ತಿದ್ದರು.

‘ಮಂಗಳವಾರ ಮುಸ್ಸಂಜೆ ಮುಂಗಾರು ಪೂರ್ವ ಮಳೆ ಸುರಿದಿದ್ದು, ವಿಜಯಪುರಿಗರಲ್ಲಿ ಖುಷಿ ಮೂಡಿಸಿದೆ. ಇನ್ನೊಂದೆರೆಡು ಬಾರಿ ರಭಸದ ಮಳೆ ಸುರಿದರೆ, ವಾತಾವರಣದಲ್ಲಿ ಬಿಸಿಲ ಝಳ ಜರಾ ಕಡಿಮೆಯಾಗಲಿದೆ’ ಎಂದು ಎ.ಎ.ತಿಮ್ಮಶೆಟ್ಟಿ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !