ಚಾಮರಾಜನಗರ, ಕೊಳ್ಳೇಗಾಲ, ಹನೂರು: ಗಾಳಿ ಸಹಿತ ಆಲಿಕಲ್ಲು ಮಳೆ, ಮನೆಗಳಿಗೆ ಹಾನಿ

ಭಾನುವಾರ, ಮೇ 26, 2019
30 °C

ಚಾಮರಾಜನಗರ, ಕೊಳ್ಳೇಗಾಲ, ಹನೂರು: ಗಾಳಿ ಸಹಿತ ಆಲಿಕಲ್ಲು ಮಳೆ, ಮನೆಗಳಿಗೆ ಹಾನಿ

Published:
Updated:
Prajavani

ಚಾಮರಾಜನಗರ/ಕೊಳ್ಳೇಗಾಲ/ಹನೂರು: ಜಿಲ್ಲಾ ಕೇಂದ್ರ ಚಾಮರಾಜನಗರ, ಕೊಳ್ಳೇಗಾಲ ಮತ್ತು ಹನೂರು ಭಾಗಗಳಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡು‌ಗು ಮಿಂಚು ಸಹಿತ ಬಿರುಸಿನ ಮಳೆಯಾಗಿದೆ.

ಮೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ತೀವ್ರ ಗಾಳಿಗೆ ಮರಗಳು ಧರೆಗೆ ಉರುಳಿದ್ದು, ಮನೆ, ಕಟ್ಟಡಗಳಿಗೆ ಹಾನಿಯಾಗಿವೆ. ಚಾವಣಿ ಹಾರಿಹೋದ ಪ್ರಕರಣಗಳೂ ವರದಿಯಾಗಿವೆ. 

ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಕೆ.ಗುಡಿ, ನಾಗವಳ್ಳಿ, ಅಮಚವಾಡಿ, ನಗರ, ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಯಂಕಾಲ 4 ಗಂಟೆಗೆ ಆರಂಭವಾದ ಮಳೆ ಅರ್ಧಗಂಟೆ ಕಾಲ ಬಿರುಸಾಗಿ ಸುರಿಯಿತು. ಚಾಮರಾಜನಗರದ ವಿವಿಧ ಕಡೆಗಳಲ್ಲಿ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಕೊಳ್ಳೇಗಾಲ ವರದಿ: ನಗರದಲ್ಲಿ ಸಂಜೆ 4.45ರ‌ ಸುಮಾರಿಗೆ ಗಾಳಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಮುಕ್ಕಾಲು ಗಂಟೆ ಉತ್ತಮ ಮಳೆ ಬಿದ್ದಿದೆ. 

ತಾಲ್ಲೂಕಿನ ಶಿವನಸಮುದ್ರ, ಜಾಗೇರಿ, ಸತ್ತೇಗಾಲ, ಧನಗೆರೆ, ನರೀಪುರ, ಅಣಗಳ್ಳಿ, ಸಿದ್ದಯ್ಯನಪುರ, ಮಧುವನಹಳ್ಳಿ, ಕುಣಗಳ್ಳಿ, ಸೂರಾಪುರ, ಉತ್ತಂಬಳ್ಳಿ, ತೇರಂಬಳ್ಳಿ, ಕುಂತುರೂ, ಟಗರಪುರ ಸೇರಿದಂತೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

ನಗರದ ಭೀಮನಗರದಲ್ಲಿ ನಾಗರಾಜು ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ವಕೀಲರಾಮಯ್ಯ ಬಡಾವಣೆಯಲ್ಲಿ ವಾಸವಾಗಿರುವ ಶಿಕ್ಷಕ ಶಂಕರ್ ಎಂಬುವವರ ಮನೆಯ ಮೇಲೆ ದೊಡ್ಡ ಭಾಗೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಹೊಸಬೀದಿ ಬಡಾವಣೆಯಲ್ಲಿ ಎರಡು ದನದ ಕೊಟ್ಟಿಗೆಗಳು ನೆಲಕ್ಕೆ ಉರುಳಿವೆ. ಪೀಸ್ ಪಾರ್ಕ್‌ನಲ್ಲಿ 4 ರಿಂದ 5 ಮರಗಳು ಮುರಿದಿವೆ.

ಹೊಸ ಬಸ್ ನಿಲ್ದಾಣದಲ್ಲಿ ಹಾಗೂ ಆರ್‌ಎಂಸಿ ಮಾರುಕಟ್ಟೆಯ ಅರಳಿ ಮರ ಬಿದ್ದ ಪರಿಣಾಮ 2 ಬೈಕ್‍ಗಳು ಜಖಂಗೊಂಡಿದೆ. ಸಿದ್ದಮಲ್ಲಯ್ಯನ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇವಿನ ಮರ ಮುರಿದು ಬಿದ್ದಿದೆ. ಕಲ್ಲು ಬಾವಿ ಬೀದಿಯಲ್ಲಿರುವ ಅಪೋಸ್ತ ಚರ್ಚ್‍ನ ಚಾವಣಿ ಹಾರಿ ಹೋಗಿದೆ. ನಾಯಕರ ಬಡಾವಣೆಯಲ್ಲಿ 5 ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. 

ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು ತಾಲ್ಲೂಕುಗಳಲ್ಲಿ ಮಳೆಯಾಗಿಲ್ಲ. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲೂ ಮಳೆ ಬಿದ್ದಿಲ್ಲ.

ಹನೂರಲ್ಲೂ ಗಾಳಿ ಸಹಿತ ಮಳೆಯಿಂದ ಹಾನಿ

ಹನೂರು ತಾಲ್ಲೂಕಿನ ಶಾಗ್ಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ.

ಗ್ರಾಮದ ರೈತ ಬಸವಣ್ಣ ಅವರ ಹಸುವಿನ ಕೊಟ್ಟಿಗೆ ಶೀಟುಗಳು ಬಿಗಾಳಿಗೆ ಹಾರಿ ಹೋಗಿವೆ. 9 ಹಸುಗಳು ಪ್ರಾಣಾಪಾಯದಿಂದ ಪಾರಾಗಿವೆ. ಇದೇ ಗ್ರಾಮದ ಆದಿಜಾಂಬವ ಹೊಸ ಬಡಾವಣೆ ಜ್ಯೋತಿ ನಿಂಗಮ್ಮ ಅವರ ಮನೆಯ ಚಾವಣಿ ಶೀಟುಗಳು ಹಾರಿ ಹೋಗಿದ್ದರಿಂದ ಆಹಾರ ಪದಾರ್ಥಗಳಿಗೆ ಹಾನಿಯಾಗಿವೆ.

‘ಸಾಲ ಮಾಡಿ ನಿರ್ಮಿಸಿದ್ದ ಕೊಟ್ಟಿಗೆ ಹಾಗೂ ಮನೆಗಳು ಗಾಳಿಗೆ ಹಾನಿಯಾಗಿವೆ. ಜಿಲ್ಲಾಡಳಿತ ನಮಗೆ ಪರಿಹಾರ ಕೊಡಬೇಕು’ ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಸಂಚಾರಕ್ಕೆ ಅಡಚಣೆ: ಪ್ರಕಾಶ್‍ಪಾಳ್ಯ ಗ್ರಾಮದಲ್ಲಿ ಸಂಜೆ ಬಿರುಗಾಳಿ ಸಹಿತ ಆನೆಕಲ್ಲು ಮಳೆಯಾಗಿದೆ. ಈ ಮಾರ್ಗದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮರದ ಕೊಂಬೆಗಳು ಮುರಿದುಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹಲಗಾಪುರ, ಬಿರೋಟ, ಕಳ್ಳಿದೊಡ್ಡಿ, ಕೊತ್ತನೂರು, ತೆಳ್ಳನೂರು, ಬಾಣೂರು ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದೆ. ಬಂಡಳ್ಳಿ, ಮಣಗಳ್ಳಿ, ಸಿಂಗನಲ್ಲೂರು, ಕಾಮಗೆರೆ, ಮಂಗಲ, ಚೆನ್ನಾಲಿಂಗನಹಳ್ಳಿ, ಕಣ್ಣೂರು ಗ್ರಾಮಗಳಲ್ಲಿ ಸಾಧರಾಣ ಮಳೆ ಬಿದ್ದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !