ಮಳೆಯಲ್ಲೂ ಮುದವೆನಿಸಲು...

7

ಮಳೆಯಲ್ಲೂ ಮುದವೆನಿಸಲು...

Published:
Updated:

ಬೇಸಿಗೆಯ ಧಗೆ ಕಳೆದು ಹನಿ ಮಳೆ ಶುರುವಾಗತೊಡಗಿದರೆ ಒಂದಷ್ಟು ಬೆಚ್ಚನೆಯ ನೆನಪುಗಳು, ಮಳೆಗಾಲಕ್ಕಾಗಿ ಕಾಯ್ದಿರಿಸಿಕೊಂಡಿರುವ ಕೆಲವು ಖುಷಿಗಳು ಮೆತ್ತಗೆ ಮೊಳಕೆಯೊಡೆಯುತ್ತವೆ.

ಕೈಯ್ಯಲ್ಲೊಂದು ಕಪ್ಪು ಹೊಗೆಯಾಡುವ ಕಾಫಿ ಹಿಡಿದು ಪ್ರೀತಿಯ ಪುಸ್ತಕದೊಳಗೆ ಮುಳುಗಿ ಹೋಗುವುದಿರಲಿ, ಬೆಚ್ಚನೆಯ ಮೂಲೆಯಲ್ಲಿ ಕೂತು ಅದೆಷ್ಟೋ ಬಾರಿ ನೋಡಿದ ಚಿತ್ರವನ್ನೇ ಮತ್ತೊಂದು ಬಾರಿ ನೋಡುವುದಿರಲಿ, ಪಿರಿಪಿರಿ ಮಳೆಗೆ ಕೊಡೆ ಹಿಡಿದು ಉದ್ದನೆಯ ವಾಕ್ ಹೋಗುವುದೇ ಇರಲಿ, ಧುಮ್ಮಿಕ್ಕುವ ಯಾವುದೋ ಜಲಪಾತಕ್ಕೆ ಭೇಟಿ ನೀಡುವುದಿರಲಿ, ಪುಟ್ಟ ತೊರೆಯಲ್ಲಿ ಕಾಲಾಡಿಸುವುದಿರಲಿ, ಕಾಡೊಳಗಿನ ಕಾಲುದಾರಿಯ ಚಾರಣವಿರಲಿ, ಇವಕ್ಕೆಲ್ಲಾ ಮಳೆಗಾಲಕ್ಕಾಗಿ ಕಾದು ಪಡೆವ ಅನುಭವ ಒಂದು ರೀತಿ ಚೆಂದ!

ಈ ಎಲ್ಲಾ ಖುಷಿಗಳನ್ನು ಒತ್ತಟ್ಟಿಗಿಟ್ಟು ನೋಡಿದರೆ, ಇನ್ನೊಂದೆಡೆ ಪ್ರತಿನಿತ್ಯ ಮಳೆಗಾಲದಲ್ಲಿ ಬೆಳಗೆದ್ದು ಕೆಲಸಕ್ಕೆ ಹೋಗುವುದೋ, ಸಂಜೆ ಅತ್ಯಗತ್ಯವಾಗಿ ಪಕ್ಕದ ಮಾರುಕಟ್ಟೆಗೆ ಹೋಗುವುದೋ ಅಥವಾ ಮಳೆಗಾಲಕ್ಕಾಗಿ ಕಾದು ಪ್ರವಾಸಕ್ಕೆ ಹೊರಡುವುದೋ – ಅಂತೂ ಮಳೆಯೆಂದು ಕೂರದೆ ಚಟುವಟಿಕೆಯಿಂದಲೇ ಇರಬೇಕಾಗುತ್ತದೆ.

ಆದರೆ ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡಬೇಕಾದಲ್ಲಿ ಹೆಣ್ಣುಮಕ್ಕಳಂತೂ ಎಚ್ಚರಿಕೆಯಿಂದ ಕೆಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಳೆಗಾಲದ ಆಯ್ಕೆಗಳನ್ನು ಸೂಕ್ತವಾಗಿ ಮಾಡಿದರೆ ಸುರಿವ ಮಳೆಯನ್ನು ಲೆಕ್ಕಕ್ಕಿಡದೆ ಆರಾಮದಾಯಕವಾಗಿ ಓಡಾಡಬಹುದೆನ್ನುವುದು ನಿಜ. ಇದಕ್ಕಾಗಿ ಹೆಚ್ಚಿನ ಸಮಯವೇನೂ ಅಗತ್ಯವಿಲ್ಲ. ಜೊತೆಗೆ, ಇವು ದಿನಪೂರ್ತಿ ಅದೆಷ್ಟೋ ನೆಮ್ಮದಿಯನ್ನು ಕೊಡುತ್ತವೆ ಎನ್ನುವುದೂ ನಿಜ.

ಸಿಂಥೆಟಿಕ್ ಬಟ್ಟೆಯನ್ನು ಆಯ್ದುಕೊಳ್ಳಿ: ಬಟ್ಟೆಯನ್ನು ಆಯ್ಕೆ ಮಾಡುವಾಗ ದಪ್ಪನೆಯ ಉಲ್ಲನ್, ತೆಳ್ಳನೆಯ ಕಾಟನ್, ನೀರು ಕಂಡರಾಗದ ರೇಷಿಮೆ – ಎಲ್ಲವೂ ಅಹಿತವೇ! ಅತ್ಯಂತ ಸುಲಭದ ಆಯ್ಕೆ ಎಂದರೆ ಸಿಂಥೆಟಿಕ್. ಒದ್ದೆಯಾದಲ್ಲಿ ಇದು ಒಣಗಲೂ ಸುಲಭ!

ಕಡುಬಣ್ಣದ ಬಟ್ಟೆಗಳನ್ನು ಬಳಸಿ: ಮಳೆಗಾಲದಲ್ಲಿ ಕೆಂಪು, ನೀಲಿ, ಕಂದು ಇತ್ಯಾದಿ ಬಣ್ಣಗಳ ಬಟ್ಟೆಗಳ ಮೊರೆಹೋಗುವುದು ಜಾಣತನವಾಗುತ್ತದೆ. ಧರಿಸಿರುವ ಬಟ್ಟೆಯ ಮೇಲೆ ಅಪ್ಪಿತಪ್ಪಿ ಏನಾದರೂ ಕೆಸರಿನ ಹನಿಗಳು ರಾಚಲ್ಪಟ್ಟರೆ ಅದರ ಕಲೆ ಸುಲಭದಲ್ಲಿ ಮಾಸುವುದಿಲ್ಲ. ಮಾತ್ರವಲ್ಲ, ತಿಳಿ ಅಥವಾ ಬಿಳಿಬಣ್ಣದ ಬಟ್ಟೆಗಳು ನೀರು ತಗಲಿದಂತೆ ಹೆಚ್ಚು ಪಾರದರ್ಶಕವೆನಿಸಿ ಇರುಸುಮುರುಸುಂಟಾಗಿಸುವ ಸಾಧ್ಯತೆಯಿರುತ್ತದೆ. ಪೂರ್ತಿ ಸಮಯ ಒಳಾಂಗಣದಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ವಾಹನದೊಳಗೆ ಇರುವುದಾದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಕೂಡ ಆರಿಸಿಕೊಳ್ಳಬಹುದು. ಇದು ತುಂಬಾ ಚೆನ್ನಾಗಿಯೂ ಕಾಣುತ್ತದೆ.

ಹೆಚ್ಚು ಉದ್ದದ ದಿರಿಸುಗಳು ಬೇಡ: ಪಾದದವರೆಗೆ ಇಳಿತಾಕುವ ಅಥವಾ ಸಡಿಲವಾದ ಬಟ್ಟೆಗಳಿಂದ ಆದಷ್ಟು ದೂರವಿರುವುದೊಳಿತು. ಕಚೇರಿಗಳಿಗೆ ಫಾರ್ಮಲ್ ಸ್ಕರ್ಟ್, ದೂರ ಪ್ರಯಾಣದ ಸಂದರ್ಭದಲ್ಲಿ ಮೊಣಕಾಲುವರೆಗಿನ, ಅಥವಾ ಥ್ರೀ ಫೋರ್ಥ್‌ ಬಟ್ಟೆಗಳನ್ನು ಆಯ್ದುಕೊಳ್ಳುವುದು ಸೂಕ್ತ. ಉದ್ದದ ವಸ್ತ್ರಗಳನ್ನು ಮಾತ್ರ ಧರಿಸುವವರಿಗೆ ಕುರ್ತಿ, ಸಿಂಥೆಟಿಕ್ ಲೆಗ್ಗಿಂಗ್ಸ್ ಒಂದು ಉತ್ತಮ ಆಯ್ಕೆ.

ಸೂಕ್ತ ಚಪ್ಪಲಿಯನ್ನು ಬಳಸಿ: ಚರ್ಮದ ಚಪ್ಪಲಿಗಳು, ಷೂ ಅಥವಾ ತೆಳ್ಳನೆ ಎಳೆಗಳನ್ನು ಹೋಲುವ ಡಿಸೈನ್‌ನ ಚಪ್ಪಲಿಗಳನ್ನು ಬಳಸದಿರುವುದು ಹಿತ. ಮಳೆಗಾಲದ ಬೂಟ್ಸ್, ನೀರಿನಲ್ಲೂ ಬಳಸಬಹುದಾದಂತಹ ಚಪ್ಪಲಿಗಳ ಬಳಕೆ ಸೂಕ್ತ.

ದುಪಟ್ಟಾಗಳಿಂದ ದೂರವಿರಿ!: ಉದ್ದನೆಯ, ಅಗಲ, ಭಾರದ ದುಪ್ಪಟ್ಟಾಗಳು ಅದೆಷ್ಟೋ ಬಾರಿ ಮಳೆಯ ಮಧ್ಯೆ ಕೊಡೆಯಿಂದಾಚೆಗೆ ಹಾರಿಯೋ, ಅದರ ತುದಿಯು ನೆಲದ ನೀರಿನಲ್ಲಿ ಎಳೆದಾಡಿದಂತಾಗಿಯೋ ವಿಪರೀತ ಕಿರಿಕಿರಿಯುಂಟುಮಾಡುವುದಿದೆ. ದುಪಟ್ಟಾವು ಕೆಲಸದ ಸ್ಥಳದ ಡ್ರೆಸ್ ಕೋಡ್‌ನ ಭಾಗವಾಗಿದ್ದಲ್ಲಿ, ಪುಟ್ಟ ಸ್ಕಾರ್ಫ್‌ ಅನ್ನು ಬಳಸಿ. ಪ್ರಯಾಣ ಸಮಯದಲ್ಲಿ ಇದನ್ನು ಅಚ್ಚುಕಟ್ಟಾಗಿ ಕೊರಳಿನ ಸುತ್ತಲೂ ಆಲಂಕಾರಿಕವಾಗಿ ಬಳಸಬಹುದು.

ರೈನ್ ಜಾಕೆಟ್: ಸುಲಭದಲ್ಲಿ ಮಡಿಸಿಡಲು ಸಾಧ್ಯವಾಗುವಂಥಹ ಮಳೆಗಾಲದ ಕೋಟ್ ಅಥವಾ ಜಾಕೆಟ್ ಮಾರುಕಟ್ಟೆಯಲ್ಲಿ ಲಭ್ಯ. ಉತ್ತಮ ಗುಣಮಟ್ಟದ ಇಂತಹುದೊಂದನ್ನು ಕೊಂಡರೆ ಕೆಲವು ವರ್ಷಗಳವರೆ ಅದು ಮಳೆಗಾಲದಲ್ಲಿ ಆಪ್ತರಕ್ಷಕನಂತೆ ಕೆಲಸ ಮಾಡುತ್ತದೆ.

ಹೇರ್ ಬನ್ ಪೋನಿಟೇಲ್ ಸೂಕ್ತ: ಮಳೆಯಲ್ಲಿ ಹೊರನಡೆವಾಗ ತಲೆಗೂದಲುಗಳನ್ನು ಹಾಗೆಯೇ ಬಿಡುವುದಕ್ಕಿಂತಲೂ ಒಟ್ಟು ಮಾಡಿ ಬನ್ ಅಥವಾ ಪೋನಿಟೇಲ್ ಹಾಕಿದರೆ ಉತ್ತಮ. ಇದು ಗಾಳಿ ಮಳೆಗೆ ಹಾರಾಡಿ ಒದ್ದೆಮುದ್ದೆಯಾದ ಕೂದಲಿನ ಅಸ್ತವ್ಯಸ್ತ ನೋಟವನ್ನು ತಪ್ಪಿಸುತ್ತದೆ.

ವಾಟರ್ ಪ್ರೂಫ್‌ ಪ್ರಸಾಧನಗಳನ್ನು ಬಳಸಿ: ಮಳೆಗಾಲಕ್ಕೆ ಮಾತ್ರವಲ್ಲ, ಯಾವಾಗಲೂ ಸೂಕ್ತವೆನಿಸುವ ಒಳ್ಳೆಯ ಗುಣಮಟ್ಟದ ವಾಟರ್ ಪ್ರೂಫ್‌ ಮೇಕಪ್ ಸಾಧನಗಳ ಬಳಕೆ ಸೂಕ್ತ. ಜೊತೆಗೆ ಬಳಸುವ ಆಕ್ಸೆಸರೀಸ್ ಕೂಡ ನೀರಿನಲ್ಲಿ ತೋಯ್ದರೆ ಹಾಳಾಗದಂತಿರಲಿ.

ಈ ಎಲ್ಲಾ ಮುನ್ನೆಚ್ಚರಿಕೆಗಳಿಗಿಂತಲೂ ಮಿಗಿಲಾಗಿ, ಪ್ರತಿ ಬಾರಿ ಹೊರಹೋಗಲು ತಯಾರಾಗುವ ಮೊದಲೊಮ್ಮೆ ಆ ದಿನದ ಹವಾಮಾನ ವರದಿಯನ್ನೊಮ್ಮೆ ನೋಡಿಕೊಳ್ಳುವುದೊಳಿತು. ಗೂಗಲ್‌ನಲ್ಲಿ ಸಿಗುವ ಹವಾಮಾನ ವರದಿಗಳು ಸಾಕಷ್ಟು ನಿಖರವಾಗಿದ್ದು ಯಾವ ದಿನ, ಯಾವ ಹೊತ್ತಿಗೆ ಎಷ್ಟು ಮಳೆ ಸುರಿಯಬಹುದೆಂಬ ಮಾಹಿತಿಯ ಆಧಾರದ ಮೇಲೆ ಎದುರಾಗುವ ಮಳೆಗೆ ಸನ್ನದ್ಧರಾಗಿ ಹೊರಡುವುದು ಒಳಿತು. ಹೀಗಿದ್ದಾಗ ಮಳೆಯ ದಿನಕ್ಕಾಗಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು ಮಳೆಯ ಖುಷಿಯನ್ನು ಪೂರ್ಣವಾಗಿ ಆಸ್ವಾದಿಸಲು ಸಹಕಾರಿಯಾಗುವುದು ಖಂಡಿತ.


ಶ್ರುತಿ ಶರ್ಮಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !