ಮಳೆ ನೀರು ಸಂಗ್ರಹ ಇಂದೇ ಆರಂಭಿಸಿ..

ಭಾನುವಾರ, ಜೂನ್ 16, 2019
28 °C

ಮಳೆ ನೀರು ಸಂಗ್ರಹ ಇಂದೇ ಆರಂಭಿಸಿ..

Published:
Updated:

ಮಳೆಗಾಲ ಆರಂಭವಾಗಿದೆ. ಮಳೆ ನೀರನ್ನು ಸಂಗ್ರಹಿಸಬೇಕಾದ ಸಮಯ ಬಂದಿದೆ. ಬೇಸಿಗೆಯ ಬವಣೆಗೆ ಪರಿತಪಿಸುವ ಜನರು ಮಳೆಗಾಲ ಬಂತೆಂದರೆ ಅದನ್ನು ಮರೆತುಬಿಡುತ್ತಾರೆ. ಕಾವೇರಿ ನೀರಿನ ಅಭಾವ ತಲೆದೋರಿದಾಗ ಬೋರ್‌ವೆಲ್ ಮೊರೆ ಹೋಗುವುದು ಸಾಮಾನ್ಯ. ಆದರೆ ಅದೂ ಕೂಡಾ ಕೈಗೆಟುಕುತ್ತಿಲ್ಲ. 1,500 ಅಡಿ ಆಳಕ್ಕೆ ಅಂತರ್ಜಲ ಇಳಿದುಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದೇ ಜಾಣತನ ಎನ್ನುತ್ತಾರೆ ತಜ್ಞರು. 

ಕೆರೆ ಕಟ್ಟೆಗಳು ತುಂಬಿ ಸಮೃದ್ಧವಾಗಿದ್ದ ಬೆಂಗಳೂರಿನ ಬಹುತೇಕ ಭಾಗಕ್ಕೆ ಕಾವೇರಿ ಯೋಜನೆಯಿಂದ ನೀರು ಒದಗಿಸಲಾಗುತ್ತಿದೆ. ಆದರೆ ಬೇಸಿಗೆ ಬಂದರೆ ಹಾಹಾಕಾರ ಶುರುವಾಗುತ್ತದೆ. ಹಾಗಂತ ಮಳೆಗೇನೂ ಕೊರತೆಯಿಲ್ಲ. ಮಳೆ ನೀರು ಎಲ್ಲಿಯೂ ನಿಲ್ಲದೆ ಓಡುತ್ತಿದೆ. ನೀರು ಹಿಡಿದಿಟ್ಟುಕೊಳ್ಳುತ್ತಿದ್ದ ಕೆರೆಗಳನ್ನು ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದೆ. ಬಾವಿ, ಕಲ್ಯಾಣಿಗಳು ಮುಚ್ಚಿಹೋಗಿವೆ. ಹೀಗಾಗಿ ಬಿದ್ದ ನೀರು ರಸ್ತೆಯಲ್ಲಿ ಪ್ರವಾಹದ ರೀತಿಯಲ್ಲಿ ಹರಿದು ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ. 

ಬೆಂಗಳೂರಿನಲ್ಲಿ ವರ್ಷಕ್ಕೆ ಸರಿಸುಮಾರು 100 ದಿನ ಮಳೆ ಬರುತ್ತದೆ. ಮಳೆ ನೀರನ್ನು ಹಿಡಿದಿಟ್ಟುಕೊಂಡರೆ 365ರ ಪೈಕಿ 200 ದಿನವಾದರೂ ಸಂಗ್ರಹಿಸಿದ ನೀರನ್ನೇ ಬಳಸಿಕೊಳ್ಳಬಹುದು. ಆಗ ಅನಗತ್ಯವಾಗಿ ಬೇರೊಂದು ನೀರಿನ ಮೂಲವನ್ನು ಅವಲಂಬಿಸುವುದು ತಪ್ಪುತ್ತದೆ. ಸಂಗ್ರಹ ತೊಟ್ಟಿ ದೊಡ್ಡದಾಗಿದ್ದರೆ ವರ್ಷಪೂರ್ತಿ ಇದೇ ನೀರನ್ನು ಬಳಸಿಕೊಳ್ಳಬಹುದು. ಹೀಗೆ ಮಾಡಿ ಜಲಸ್ವಾವಲಂಬನೆ ಮಾಡಿದವರು ನಗರದಲ್ಲಿ ಬೇಕಾದಷ್ಟು ಜನರಿದ್ದಾರೆ. ಈ ವ್ಯವಸ್ಥೆ ಅಳವಡಿಸಿಕೊಂಡಿರುವ ಶ್ರೀಧರ್ ಎಂಬುವರು ಜಲಮಂಡಳಿ ಅಥವಾ ಬೋರ್‌ವೆಲ್ ನೀರಿನ ಮೇಲೆ ಅವಲಂಬಿತರಾಗಿಲ್ಲ. ಆದರೆ ಇದನ್ನು ನಿರ್ಲಕ್ಷಿಸುವವರ ಸಂಖ್ಯೆಯೇ ನಗರದಲ್ಲಿ ಹೆಚ್ಚು. 

ನೀರು ಸಂಗ್ರಹ ವಿಧಾನ 

ವರ್ಷಪೂರ್ತಿ ಬಳಸುವ ನೀರು ಶುದ್ಧವಾಗಿ ಇರಬೇಕು. ಸಂಗ್ರಹಿಸಬೇಕಾದರೆ ಶುದ್ಧ ನೀರನ್ನೇ ಸಂಗ್ರಹಿಸಬೇಕು ಎನ್ನುತ್ತಾರೆ ಫಾರ್ಮ್‌ಲ್ಯಾಂಡ್ ರೈನ್‌ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆಯ ಜಲತಜ್ಞ ವಿಜಯ್‌ರಾಜ್. ಮಳೆ ನೀರನ್ನು ಕಸದಿಂದ ಬೇರ್ಪಡಿಸಿ, ಕೇವಲ ಶುದ್ಧ ನೀರನ್ನು ಮಾತ್ರ ಸಂಗ್ರಹಣಾ ತೊಟ್ಟಿಗೆ ಕಳುಹಿಸುವ ಸ್ವಯಂಚಾಲಿತ ತಂತ್ರಜ್ಞಾನವನ್ನು ಇವರು ಪರಿಚಯಿಸಿದ್ದಾರೆ.

ಮಳೆ ಬಂದ ಮೊದಲ 10 ನಿಮಿಷ ನೀರನ್ನು ತೊಟ್ಟಿಗೆ ಬಿಡಬಾರದು. ಚಾವಣಿ ಹಾಗೂ ಪೈಪ್‌ನಲ್ಲಿ ಇರುವ ಕಸ ಮೊದಲು ಸ್ವಚ್ಛಗೊಳ್ಳಬೇಕು. ಆ ನಂತರ ಬರುವ ನೀರು ಶುದ್ಧವಾಗಿದ್ದರೂ ಒಂದಿಷ್ಟು ದೂಳು, ಕಸಕಡ್ಡಿ ನುಸುಳಿರುತ್ತವೆ. ಇವನ್ನೆಲ್ಲಾ ಪ್ರತ್ಯೇಕಿಸುವ ಕೆಲಸವನ್ನು ಮೈಕ್ರಾನ್ ಬಲೆ ಅಳವಡಿಸಿರುವ ಫಿಲ್ಟರ್ ಮಾಡುತ್ತದೆ. ಮೂರು ಹಂತ ಗಳಲ್ಲಿ ನೀರು ಶುದ್ಧಗೊಂಡು ಸಂಪ್‌ ಸೇರಿಕೊಳ್ಳುತ್ತದೆ. 

ಬಾವಿ ನೀರು ಬಳಸಿ 

ಚಾವಣಿ ಮೇಲೆ ಬಿದ್ದ ಮಳೆ ನೀರನ್ನು ಪೈಪ್‌ಗಳ ಮೂಲಕ ಸಂಪ್‌ಗೆ ವರ್ಗಾಯಿಸಿ ಬಳಸುವುದು ಒಂದು ವಿಧಾನ. ಅದೇ ರೀತಿ ಜಲ ಮರುಪೂರಣ ಮಾಡಲು ನಿರ್ಮಿಸುವ ಬಾವಿಗಳ ನೀರನ್ನೇ ಬಳಸಿಕೊಳ್ಳುವುದು ಮತ್ತೊಂದು ವಿಧಾನ. ಅಂತರ್ಜಲ ವೃದ್ಧಿಗೂ ಬಳಕೆಯಾಗುವ ಇಂಗು ಬಾವಿಗಳು ಜಲಮೂಲವೂ ಆಗುತ್ತವೆ. ಶುದ್ಧವಾದ ನೀರನ್ನು ಬಾವಿಗೆ ಹರಿಸಿದ್ದಲ್ಲಿ, ಅದೇ ನೀರನ್ನು ನಿತ್ಯದ ಬಳಕೆಗೆ ಉಪಯೋಗಿಸಬಹುದು. 

ನಗರದ ಉದ್ಯಾನಗಳಲ್ಲಿ ನಾಲ್ಕೈದು ಬಾವಿಗಳನ್ನು ನಿರ್ಮಿಸಿ ಅವುಗಳಿಗೆ ಮಳೆ ನೀರನ್ನು ತುಂಬಿಸುವುದೂ ಉಪಯುಕ್ತ. ಉದ್ಯಾನದ ಗಿಡಗಳಿಗೆ ಅದೇ ನೀರನ್ನು ಬಳಸಿಕೊಳ್ಳಬಹುದು. 40 ಅಡಿ ಆಳದ 5 ಬಾವಿಗಳು ಇದ್ದಲ್ಲಿ, ಒಂದು ಸಾಧಾರಣ ಉದ್ಯಾನವನ್ನು ವರ್ಷಪೂರ್ತಿ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು. 

ಜಲಪ್ರಾತ್ಯಕ್ಷಿಕೆ 

ಮಳೆ ಕೊಯ್ಲು ಪ್ರಾತ್ಯಕ್ಷಿತೆ ನೀಡುವ ಹಲವು ಯತ್ನಗಳು ನಗರದಲ್ಲಿ ನಡೆಯುತ್ತಿವೆ. ಜಯನಗರದ 8ನೇ ಬ್ಲಾಕ್‌ನಲ್ಲಿ ಮಳೆ ನೀರು ಸಂಗ್ರಹ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ತೋರಿಸುವ ಥೀಮ್‌ಪಾರ್ಕ್ ರಚಿಸಲಾಗಿದೆ. ಜಲಮಂಡಳಿಯು ಸರ್ ಎಂ.ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರವನ್ನು ಸ್ಥಾಪಿಸಿದೆ. ತಂತ್ರಜ್ಞರಿಂದ ಮಾರ್ಗದರ್ಶನ, ಪುಸ್ತಕಗಳೂ ಲಭ್ಯ. ತರಬೇತಿಯನ್ನೂ ಇಲ್ಲಿ ನೀಡಲಾಗುತ್ತದೆ. 

ವಿಜಯ್‍ರಾಜ್ ಅವರು ಜಲಸಂಗ್ರಹದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಾತ್ಯಕ್ಷಿಕೆ ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಮನೆಯ ಪೃತಿಕೃತಿಯನ್ನು ವಾಹನವೊಂದರ ಮೇಲೆ ನಿರ್ಮಿಸಲಾಗಿದೆ. ಮಳೆ ನೀರು ಬೀಳುವ ಚಾವಣಿ, ನೀರು ಹರಿದು ಕೆಳಗೆ ಬರಲು ಪೈಪ್‌ಗಳು, ನೀರನ್ನು ಸೋಸುವ ಫಿಲ್ಟರ್, ನೀರು ಸಂಗ್ರಹಿಸುವ ತೊಟ್ಟಿ – ಹೀಗೆ ಇಡೀ ಪ್ರಕ್ರಿಯೆಯನ್ನು ಸಾಕ್ಷಾತ್ ಆಗಿ ಮನದಟ್ಟು ಮಾಡುವ ಪ್ರಯತ್ನ ಇಲ್ಲಿದೆ. ಮಳೆ ಬಂದಾಗ ನೀರು ಸಂಗ್ರಹ ಹೇಗೆ ಆಗುತ್ತದೆ ಎಂದು ಈ ಮಾದರಿ ಮನೆಯ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದೆ. ಇದನ್ನು ಒಮ್ಮೆ ನೋಡಿದರೆ ಸಾಕು, ಮಳೆ ನೀರು ಸಂಗ್ರಹ ವಿಧಾನ ಎಷ್ಟೊಂದು ಸರಳ ಎಂಬುದು ಅರಿವಿಗೆ ಬರುತ್ತದೆ. ಈ ಕಾರ್ಯಕ್ಕೆ ಮುಂದಾಗುವಂತೆ ಅವರನ್ನು ಪ್ರೇರೇಪಿಸುತ್ತದೆ. ವಿವಿಧ ರಾಜ್ಯಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ಈ ವಾಹನದ ಪ್ರಾತ್ಯಕ್ಷಿಕೆ ಇರುತ್ತದೆ. 

ಮಳೆ ನೀರು ಸಂಗ್ರಹ ಕಡ್ಡಾಯಕ್ಕೆ 10 ವರ್ಷ

ನಗರದಲ್ಲಿ ನೀರಿನ ಕೊರತೆಯನ್ನು ಮನಗಂಡ ಜಲಮಂಡಳಿಯು 2009ರಲ್ಲೇ ಮಳೆ ನೀರು ಸಂಗ್ರಹ ವ್ಯವಸ್ಥೆ ರಚಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. 30x40 ಅಳತೆಯ ಎಲ್ಲ ಮನೆಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಹೊಸ ಮನೆಗೆ ಜಲಮಂಡಳಿಯ ಕೊಳಾಯಿ ಸಂಪರ್ಕ ಬೇಕೆಂದರೆ ಜಲಸಂಗ್ರಹ ವ್ಯವಸ್ಥೆ ಕಡ್ಡಾಯ. ಹಳೆಯ ಮನೆಗಳು ಈ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಲು ನೀಡಿದ್ದ ಗಡುವು ಕೂಡಾ ಮುಕ್ತಾಯವಾಗಿದೆ. ಆದೇಶ ಪಾಲಿಸದಿದ್ದರೆ ನೀರಿನ ಶುಲ್ಕದ ಮೇಲೆ ಶೇ 25ರಷ್ಟು ದಂಡ ವಿಧಿಸಲಾಗುತ್ತಿದೆ. ಇನ್ನೂ ವಿಳಂಬ ಮಾಡಿದರೆ ಶೇ 60ರಷ್ಟು ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ವಿಪರ್ಯಾಸವೆಂದರೆ ಜಲಮಂಡಳಿಯು ದಂಡದ ರೂಪದಲ್ಲಿ ₹3.5 ಕೋಟಿ ಸಂಗ್ರಹಿಸಿದೆ. ದಂಡ ಕಟ್ಟಲು ಸಿದ್ಧರಿರುವ ಜನರು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈ 10 ವರ್ಷಗಳ ಅವಧಿಯಲ್ಲಿ 1.40 ಲಕ್ಷ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. 45 ಸಾವಿರ ಮನೆಗಳು ಈ ವ್ಯವಸ್ಥೆಗೆ ಇನ್ನಷ್ಟೇ ಒಳಪಡಬೇಕಿದೆ. ಈ ಬಗ್ಗೆ ಅರಿವು ಮೂಡಿಸಲು ಮುಂದಿನ ತಿಂಗಳು ಮಲ್ಲೇಶ್ವರದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್ ಗಂಗಾಧರ್ ಅವರು ಮಾಹಿತಿ ನೀಡಿದ್ದಾರೆ.

ಪ್ರವಾಹ ತಡೆಗೆ ನೀರು ಸಂಗ್ರಹವೇ ಉಪಯುಕ್ತ

ನಗರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹವನ್ನು ತಡೆಯಬೇಕಾದರೆ ಮಳೆ ನೀರು ಸಂಗ್ರಹವೇ ಉಪಯುಕ್ತ ವಿಧಾನ ಎನ್ನುತ್ತಾರೆ ಜಲತಜ್ಞ ವಿಶ್ವನಾಥ್ ಎಸ್. ಇಲ್ಲಿ 4 ಲಕ್ಷ ಬೋರ್‌ವೆಲ್‌ಗಳಿವೆ. ಬೇರೆ ಯಾವುದೇ ನಗರಗಳಲ್ಲಿ ಇಷ್ಟು ಕೊಳವೆಬಾವಿಗಳು ಇಲ್ಲ. ಮಳೆ ನೀರಿನಲ್ಲಿ ಶೇ 3ರಷ್ಟು ಮಾತ್ರ ಅಂತರ್ಜಲ ಸೇರುತ್ತಿದೆ. ಅಂದರೆ 100 ಲೀಟರ್ ಪೈಕಿ 3 ಲೀಟರ್ ಮಾತ್ರ ಭೂಗರ್ಭ ಸೇರುತ್ತಿದೆ. ಮಳೆ ನೀರು ಅಂತರ್ಜಲ ಸೇರುವ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸಬೇಕು ಎನ್ನುತ್ತಾರೆ ಅವರು.

30x40 ಅಳತೆಯ ಜಾಗದ ಮೇಲೆ ಒಂದು ವರ್ಷದಲ್ಲಿ 1.20 ಲಕ್ಷ ಲೀಟರ್ ಮಳೆ ನೀರು ಬೀಳುತ್ತದೆ. ಈ ಪೈಕಿ 60 ಸಾವಿರ ಲೀಟರ್ ನೀರನ್ನಾದರೂ ಇಂಗಿಸಬೇಕು. ಕನಿಷ್ಠ 20 ಅಡಿ ಆಳದ ಇಂಗು ಬಾವಿ ನಿರ್ಮಾಣ ಅಗತ್ಯ. ಅಂತರ್ಜಲಕ್ಕೆ ಯಾವುದೇ ಕಾರಣಕ್ಕೂ ಕಲುಷಿತ ನೀರು ಸೇರ್ಪಡೆಯಾಗಬಾರದು ಎನ್ನುತ್ತಾರೆ ಅವರು.

ಮಳೆ ನೀರು ಸಂಗ್ರಹದ ವಿವಿಧ ಮಾದರಿಗಳು

1. ನೆಲದಡಿಯ ಸಂಪ್‌ಗೆ ಮಳೆ ನೀರು ವರ್ಗಾಯಿಸುವುದು

2. 100 ಚದರ ಮೀಟರ್‌ಗಿಂತ ಕಡಿಮೆ ಅಳತೆಯ ಚಾವಣಿ ನೀರಿನಿಂದ ಬೋರ್‌ವೆಲ್ ಮರುಪೂರಣ

3. ತೆರೆದ ಬಾವಿಗೆ ಮಳೆ ನೀರು ಹರಿಸಿ ಮರುಪೂರಣ ಮಾಡುವುದು

ತಂತ್ರಜ್ಞಾನ ಹೀಗೆ ಕೆಲಸ ಮಾಡುತ್ತದೆ:

ಕುಡಿಯುವ ನೀರಿನ ಕೊಳವೆಬಾವಿ

ಕಸ ಬೇರ್ಪಡಿಸುವ ಫಿಲ್ಟರ್

ಮಳೆ ನೀರು ಹರಿಯುವ ಮಾರ್ಗ

ಆಧಾರ: ಫಾರ್ಮ್‌ಲ್ಯಾಂಡ್ ರೈನ್‌ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್)

* ಎಲ್ಲ ಮನೆಗಳಲ್ಲಿಯೂ ಮೂರಡಿ ಸುತ್ತಳತೆಯ ಬಾವಿ ತೆಗೆದು ಮಳೆ ನೀರು ಸಂಗ್ರಹಿಸಿ ಬಳಸಬಹುದು. ಇದರಿಂದ ಮಳೆಗಾಲದಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ದೂರವಾಗುತ್ತದೆ. ಈ ಬಾವಿ ನಿರ್ಮಾಣಕ್ಕೆ ಸರ್ಕಾರ ಸಹಾಯಧನ ನೀಡಬೇಕು

- ವಿಜಯ್‌ರಾಜ್, ಜಲತಜ್ಞ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !