ಮಳೆನೀರು ಸಂಗ್ರಹ ಕಡ್ಡಾಯಕ್ಕೆ ಕಿಮ್ಮತ್ತಿಲ್ಲ

ಗುರುವಾರ , ಏಪ್ರಿಲ್ 25, 2019
29 °C

ಮಳೆನೀರು ಸಂಗ್ರಹ ಕಡ್ಡಾಯಕ್ಕೆ ಕಿಮ್ಮತ್ತಿಲ್ಲ

Published:
Updated:
Prajavani

ಬೆಂಗಳೂರು: ಮಳೆಗಾಲದಲ್ಲಿ ಸುರಿಯುವ ಪರಿಶುದ್ಧ ನೀರನ್ನು ಚರಂಡಿಗೆ ಹರಿಯಲು ಬಿಟ್ಟ ನಗರವಾಸಿಗಳು ಈ ಬೇಸಿಗೆಯಲ್ಲಿ ಅದೇ ನೀರಿಗಾಗಿ ಹಪಹಪಿಸುತ್ತಿದ್ದಾರೆ.

ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡು, ನೀರನ್ನು ‘ಸಂಚಿತ ನಿಧಿಯಲ್ಲಿ’ ಠೇವಣಿಯಿಟ್ಟು, ಕಷ್ಟಕಾಲದಲ್ಲಿ ಬಳಸಿಕೊಳ್ಳಿ ಎಂದು ಜಲತಜ್ಞರು ಕಿವಿಮಾತು ಹೇಳುತ್ತಿದ್ದರೂ, ಜಲಮಂಡಳಿ ಕಡ್ಡಾಯ ನಿಯಮ ಮಾಡಿದ್ದರೂ ಅದನ್ನು ಪಾಲಿಸುತ್ತಿಲ್ಲ. ಜಲಸಂರಕ್ಷಣೆಯ ಹಿತೋಪದೇಶಕ್ಕೆ ಕ್ಯಾರೆ ಎನ್ನದ ಜನರಿಗ ‘ಬೆಲೆಬಾಳುವ ನೀರನ್ನು’ ಖರೀದಿಸಿ ಕುಡಿಯುತ್ತಿದ್ದಾರೆ, ಬಳಸುತ್ತಿದ್ದಾರೆ.

ಮಾಳಿಗೆ ಮೇಲೆ ಬಿದ್ದ ನೀರನ್ನು ವ್ಯರ್ಥವಾಗಿ ಹರಿಯಲು ಬಿಟ್ಟ ತಪ್ಪಿಗೆ, ಕೋಟಿಗಟ್ಟಲೇ ದಂಡವನ್ನು ಕಟ್ಟುತ್ತ, ಜಲಮಂಡಳಿಯ ಬೊಕ್ಕಸವನ್ನು ತುಂಬುತ್ತಿದ್ದಾರೆ.

ದಂಡ ಕಟ್ಟುವುದರಲ್ಲೇ ಇವರಿಗೆ ಪ್ರೀತಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ(ತಿದ್ದುಪಡಿ) ಕಾಯ್ದೆ, 2009ರ ಅನ್ವಯ ಮಳೆನೀರು ಸಂಗ್ರಹವನ್ನು ಕಡ್ಡಾಯ ಮಾಡಲಾಗಿದೆ.

2,400 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳು, 1,200 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಮನೆ ಅಥವಾ ವಾಣಿಣ್ಯ ಕಟ್ಟಡಕ್ಕೆ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬ ಕಡ್ಡಾಯ ನಿಯಮಗಳು ಕಾಯ್ದೆಯಲ್ಲಿವೆ. 

ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿದ್ದರೂ, ಈ ಅಳತೆಯ ಕಟ್ಟಡಗಳು ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದಿದ್ದರೆ ಪ್ರತಿತಿಂಗಳ ನೀರಿನ ಶುಲ್ಕದ ಶೇ 50 ರಷ್ಟು ಮೊತ್ತವನ್ನು ದಂಡ ರೂಪದಲ್ಲಿ ಕಟ್ಟಬೇಕು. ನೀರಿನ ಸಂಪರ್ಕ ಪಡೆದ ಮೂರು ತಿಂಗಳುಗಳಲ್ಲಿ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳದಿದ್ದರೆ, ದಂಡದ ಶುಲ್ಕವೂ ಹೆಚ್ಚುತ್ತದೆ.

ಬಹುತೇಕ ಜನರು ದಂಡ ಪಾವತಿಸಲು ಮುಂದಾಗುತ್ತಿದ್ದಾರೆ ಹೊರತು, ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಲು ಸಿದ್ಧರಿಲ್ಲ.

ಮಳೆನೀರು ಸಂಗ್ರಹದಿಂದಾಗುವ ಲಾಭಗಳು

* ಜಲಮಂಡಳಿ ಮೇಲಿನ ಅವಲಂಬನೆ ಸ್ವಲ್ಪ ತಪ್ಪಲಿದೆ.

* ಬಿದ್ದಲ್ಲೇ ನೀರು ಹಿಡಿದರೆ ಪ್ರವಾಹ ಪರಿಸ್ಥಿತಿ ತಲೆದೊರದು.

* ದಂಡಶುಲ್ಕದ ಹಣ ಉಳಿತಾಯ ಆಗಲಿದೆ.

* ಜಲಸ್ವಾವಲಂಬನೆ ಸಾಧ್ಯ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !