ಗುರುವಾರ , ಅಕ್ಟೋಬರ್ 17, 2019
28 °C

ರೈತ ದಸರಾ: ಎತ್ತಿನ ಬಂಡಿಗಳ ಮೆರವಣಿಗೆಯ ಮೆರುಗು

Published:
Updated:
Prajavani

ಚಾಮರಾಜನಗರ: ಜಿಲ್ಲಾ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ರೈತ ದಸರಾಕ್ಕೆ ಅಲಂಕೃತ ಎತ್ತಿನ ಬಂಡಿಗಳ ಮೆರವಣಿಗೆ ವಿಶೇಷ ಮೆರುಗು ನೀಡಿತು. 

ತಳಿರು ತೋರಣ, ಎಳನೀರು, ಅಡಿಕೆ, ಬಾಳೆಗೊನೆ..  ಇನ್ನಿತರ ಕೃಷಿ ಫಲಗಳಿಂದ ಅಲಂಕರಿಸಿದ್ದ 20 ಎತ್ತಿನಗಾಡಿಗಳು ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿದ್ದು ದಸರಾ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು. ರಸ್ತೆಗಳ ಇಕ್ಕೆಲಗಳಲ್ಲಿ ನಿಂತಿದ್ದ ನೂರಾರು ಜನರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಹಸಿರು ಸೀರೆ ತೊಟ್ಟಿದ್ದ ರೈತ ಮಹಿಳೆಯರು ಪೂರ್ಣ ಗಿಡಗಳನ್ನು ಗಿಡಗಳನ್ನು ಹಿಡಿದು ಸಾಗಿದರೆ, ಅವರ ಹಿಂದೆ ಡೊಳ್ಳು ಕುಣಿತ, ಸುಗ್ಗಿ ಕುಣಿತ ಕಾಲ ತಂಡಗಳು ನೃತ್ಯ ಮಾಡುತ್ತಾ ಹೆಜ್ಜೆ ಹಾಕಿದವು. 

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ, ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮುಕ್ತಾಯ ಕಂಡಿತು. 

ಗುಂಡ್ಲುಪೇಟೆ ಶಾಸಕ ಹಾಗೂ ದಸರಾ ಉತ್ಸವ ಸಮಿತಿಯ ಉಪಾಧ್ಯಕ್ಷ ಸಿ.ಎಸ್‌.ನಿರಂಜನ್‌ ಕುಮಾರ್‌ ಅವರು ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ನಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಬಾಲರಾಜು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಅವರೊಂದಿಗೆ ಎತ್ತಿನ ಗಾಡಿ ಏರಿ ಜಿಲ್ಲಾಡಳಿತ ಭವನದವರೆಗೂ ಸವಾರಿ ಮಾಡಿದರು. 

ಮಾತಿನ ಚಕಮಕಿ
ಇದಕ್ಕೂ ಮೊದಲು ಮೆರವಣಿಗೆ ಉದ್ಘಾಟಿಸುವ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. 

9.30ಕ್ಕೆ ಉದ್ಘಾಟನೆ ಎಂದು ಹೇಳಲಾಗಿತ್ತು. ಶಿವಮ್ಮ ಅವರು ಅದೇ ಹೊತ್ತಿಗೆ ಸ್ಥಳಕ್ಕೆ ಬಂದಿದ್ದರು. ಅಷ್ಟರಲ್ಲಿ ಎಲ್ಲ ಎತ್ತಿನ ಗಾಡಿಗಳು ಬಂದಿರಲಿಲ್ಲ. ಶಾಸಕ ನಿರಂಜನ್‌ಕುಮಾರ್‌ ಅವರೂ ಇರದಿದ್ದುದರಿಂದ ಅವರು ವಾಪಸ್ ಹೋದರು. ಅರ್ಧ ಗಂಟೆ ಬಿಟ್ಟು ವಾಪಸ್‌ ಅವರು ಬಂದರೂ ಶಾಸಕ ಬಂದಿರಲಿಲ್ಲ. ಹಾಗಾಗಿ, ತಾವೇ ಉದ್ಘಾಟನೆ ಮಾಡುವುದಾಗಿ ಶಿವಮ್ಮ ಹೇಳಿದರು. ಇದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಗುಂಡ್ಲುಪೇಟೆಯಲ್ಲಿ ಕಾರ್ಯಕ್ರಮ ‌ಮುಗಿಸಿ ಬರಬೇಕು ಸ್ವಲ್ಪ ತಡವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ವಲ್ಪ ವಾಗ್ವಾದ ನಡೆಯಿತು. 

ಇನ್ನು ಕಾಯುವುದರಲ್ಲಿ ಅರ್ಥ ಇಲ್ಲ ಎಂದು ಶಿವಮ್ಮ ಹೊರಡಲು ಅಣಿಯಾದಾಗ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. 10.30ಕ್ಕೆ ನಿರಂಜನ್‌ಕುಮಾರ್‌ ಬಂದು ಹಸಿರು ನಿಶಾನೆ ತೋರಿದರು. ಆ ಬಳಿಕ ಇಬ್ಬರು ಕೂಡ ಒಂದೇ ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಸಾಗಿದರು. 

ಪುಟ್ಟರಂಗಶೆಟ್ಟಿ ಗೈರು: ಸ್ಥಳೀಯ ಶಾಸಕ ಪುಟ್ಟರಂಗ ಶೆಟ್ಟಿ ಅವರು ರೈತ ದಸರಾ ಕಾರ್ಯಕ್ರಮಕ್ಕೆ ಗೈರಾಗಿದ್ದರು. 

Post Comments (+)