ಸಾಲಮನ್ನಾ ಆಗ್ರಹ: 19ರಂದು ವಿಧಾನಸೌಧಕ್ಕೆ ರೈತ ಸಂಘ ಮುತ್ತಿಗೆ‌

7
ನುಡಿದಂತೆ ನಡೆಯಿರಿ: ಸಿ.ಎಂಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯ

ಸಾಲಮನ್ನಾ ಆಗ್ರಹ: 19ರಂದು ವಿಧಾನಸೌಧಕ್ಕೆ ರೈತ ಸಂಘ ಮುತ್ತಿಗೆ‌

Published:
Updated:
Deccan Herald

ಚಾಮರಾಜನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡದೆ ಕೊಟ್ಟ ಮಾತಿಗೆ ತಪ್ಪಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಇದೇ 19ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಅವರು ಪಟ್ಟಣದಲ್ಲಿ ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

‘ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರು ಮಾಡಿದ್ದ ಘೋಷಣೆ ಪ್ರಕಾರ, ರೈತರು ಸಾಲಮನ್ನಾ ಆಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಇದುವರೆಗೆ ಆಗಿಲ್ಲದಿರುವುದರಿಂದ ಗೊಂದಲ ಉಂಟಾಗಿದೆ. ಮುಖ್ಯಮಂತ್ರಿಯವರೇ ಈ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ರೈತ ಮುಖಂಡರ ಸಭೆ ಕರೆದು ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡಿ, 15 ದಿನಗಳಲ್ಲಿ ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುವುದಾಗಿ ಘೋಷಿಸಿದ್ದರು. ಆದರೆ, ಬಜೆಟ್‌ನಲ್ಲಿ ₹2 ಲಕ್ಷದವರೆಗಿನ ಸಾಲ ಮಾತ್ರ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅವರ ನಡೆಗೂ, ನೀಡುತ್ತಿರುವ ಹೇಳಿಕೆಗೂ ವ್ಯತ್ಯಾಸ ಕಾಣುತ್ತಿದೆ’ ಎಂದು ಅವರು ಹೇಳಿದರು.

‘ಸಾಲ ಮನ್ನಾ ವಿಚಾರವನ್ನು 2019ರ ಲೋಕಸಭಾ ಚುನಾವಣೆವರೆಗೂ ಜೀವಂತವಾಗಿರುವ ಹುನ್ನಾರ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ. ರೈತರು ತಾಳ್ಮೆ ಕಳೆದುಕೊಳ್ಳುವುದಕ್ಕೂ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. 19ರಂದು ನಡೆಯಲಿರುವ ಮುತ್ತಿಗೆಯಲ್ಲಿ ಎಲ್ಲ ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ’ ಎಂದು ಅವರು ಹೇಳಿದರು.

ಸಂಘದ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ‘ಮಾತಿಗೆ ತಪ್ಪಿದವರಿಗೆ ನೀಡುವ ಪ್ರಶಸ್ತಿ ಏನಾದರಿದ್ದರೆ, ಅದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರ್ಹ ವ್ಯಕ್ತಿ. ನುಡಿದಂತೆ ನಡೆಯಿರಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ’ ಎಂದರು.

‘ಈ ಬಾರಿ ಮಳೆ ಬಂದು ರಾಜ್ಯದ ಎಲ್ಲ ಅಣೆಕಟ್ಟುಗಳು ತುಂಬಿವೆ. ಹಾಗಿದ್ದರೂ ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿಲ್ಲ. 14 ಜಿಲ್ಲೆಗಳು ಬರಪೀಡಿತವಾಗಿವೆ. ಎಲ್ಲ ಪಕ್ಷಗಳು ಉಪ ಚುನಾವಣೆ, ರಾಜಕೀಯದಲ್ಲಿ ನಿರತವಾಗಿವೆ. ಬರದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಬೇಕಾದ ವಿರೋಧ ಪಕ್ಷ ಬಿಜೆಪಿಯ ಮುಖಂಡರು ಸುಮ್ಮನಿದ್ದಾರೆ. 19ರ ಪ್ರತಿಭಟನೆಯಲ್ಲಿ ಈ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಿದ್ದೇವೆ’ ಎಂದರು.

‘ಅನಾವೃಷ್ಟಿಯಿಂದ ನಲುಗಿರುವ ಕೊಡಗಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಮತ್ತು ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತಲು ಗಣಿಗಾರಿಕೆಯನ್ನು ನಿಲ್ಲಿಸಿ ಜಲಾಶಯವನ್ನು ಉಳಿಸುವಂತೆ ಒತ್ತಾಯಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ, ಕಚೇರಿ ಕಾರ್ಯದರ್ಶಿ ಪಿ.ಗೋಪಾಲ್‌, ಮುಖಂಡರಾದ ಮಂಜುನಾಥ ಗೌಡ, ಮಹೇಶ್‌ ಕುಮಾರ್‌ ಮತ್ತಿತರರು ಇದ್ದರು.

ತೆಂಗು ಸಂಸ್ಕರಣ ಘಟಕ 20ಕ್ಕೆ ಉದ್ಘಾಟನೆ

ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘವು ಚಾಮರಾಜನಗರ ಸಮೀಪದ ಕಾಳನಹುಂಡಿ ರಸ್ತೆಯ ಸ್ಥಾಪಿಸಿರುವ ತೆಂಗು ಸಂಸ್ಕರಣ ಘಟಕವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇದೇ 20ರಂದು ಉದ್ಘಾಟಿಸಲಿದ್ದಾರೆ.

ರೈತ ಮುಖಂಡ ಹಾಗೂ ಸಂಘದ ಅಧ್ಯಕ್ಷ ಮಹೇಶ್‌ ಪ್ರಭು ಅವರು ಭಾನುವಾರ ಈ ಮಾಹಿತಿ ನೀಡಿದರು.

‘ನಾವು ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಬಂದಿದ್ದೇವೆ. ಬರುವುದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ. ಜಿಲ್ಲಾಡಳಿತಕ್ಕೂ ಮುಖ್ಯಮಂತ್ರಿ ಕಚೇರಿಯಿಂದ ದೃಢೀಕರಣ ಬಂದಿದೆ’ ಎಂದು ಅವರು ಹೇಳಿದರು.

‘ಸಹಕಾರ ಸಂಘವೊಂದು ತೆಂಗು ಸಂಸ್ಕರಣಾ ಘಟಕವನ್ನು ಆರಂಭಿಸಿರುವುದು ರಾಜ್ಯದಲ್ಲೇ ಮೊದಲು. ಇದರಿಂದ ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !