ರಾಜರಾಜೇಶ್ವರಿಯ ಆರಾಧನೆ

7

ರಾಜರಾಜೇಶ್ವರಿಯ ಆರಾಧನೆ

Published:
Updated:
Deccan Herald

ಬೆಂಗಳೂರು ದಕ್ಷಿಣದ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿರುವ ರಾಜರಾಜೇಶ್ವರಿ ದೇವಾಲಯಕ್ಕೆ ಆರು ದಶಕಗಳ ಇತಿಹಾಸವಿದೆ. ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ನಿತ್ಯ ಸಹಸ್ರಾರು ಭಕ್ತರು ಭೇಟಿ ನೀಡಿ ನಮಿಸುತ್ತಾರೆ.

ಶರನ್ನವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ನಿತ್ಯ ವಿಶೇಷ ಪೂಜೆ ನಡೆಯುತ್ತಿದೆ. ದೇವಿಗೆ ನಿತ್ಯವೂ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತಿದೆ. ಹಬ್ಬದ ಸಂರ್ಭದಲ್ಲಿ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿರುತ್ತದೆ.

ತಿರುಚ್ಚಿ ಸ್ವಾಮಿಯಿಂದ ನಿರ್ಮಾಣ: ಕೆಂಚೇನಹಳ್ಳಿ ಬಳಿಯ ವೃಷಭಾವತಿ ನದಿ ಬಳಿ 1960ರಲ್ಲಿ ತಿರುಚ್ಚಿ ಸ್ವಾಮಿಗಳು ಕೈಲಾಸ ಆಶ್ರಮ ಸ್ಥಾಪನೆಗೆ ಅಡಿಗಲ್ಲು ಹಾಕಿದರು. 1978ರಲ್ಲಿ ಇಲ್ಲಿ ರಾಜರಾಜೇಶ್ವರಿ ದೇಗುಲವೂ ನಿರ್ಮಾಣವಾಯಿತು. ತಿರುಚ್ಚಿ ಸ್ವಾಮೀಜಿ ತಮ್ಮ ಶಿಷ್ಯರಾದ ಜಯೇಂದ್ರಪುರಿ ಸ್ವಾಮೀಜಿ ಅವರನ್ನು 2003ರಲ್ಲಿ ಈ ದೇವಾಲಯಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಿ ಪಟ್ಟಾಭಿಷೇಕ ಮಾಡಿದರು.

ರಾಜ್ಯದಲ್ಲಿ ಆಧುನಿಕ ಕಾಲಘಟ್ಟದಲ್ಲಿ ನಿರ್ಮಾಣವಾದ ಅನೇಕ ದೇವಾಲಯಗಳಲ್ಲಿ ಇದು ವಿಶಿಷ್ಟ ಶಿಲಾ ದೇಗುಲ. ಪಾಂಡ್ಯರ ವಾಸ್ತುಶೈಲಿ, ಕಶ್ಯಪ ಶಿಲ್ಪಶಾಸ್ತ್ರದ ಶಿಲ್ಪಾಕೃತಿಯನ್ನು ಇದು ಹೊಂದಿದೆ. ಈ ದೇವಸ್ಥಾನ ಆಗಮಶಾಸ್ತ್ರ, ವಾಸ್ತು ಸಂಪ್ರದಾಯದಂತೆ ನಿರ್ಮಾಣವಾಗಿದೆ.

ಸೂಕ್ಷ್ಮ ಕೆತ್ತನೆಯ ಕಂಬಗಳು, ದೇವಾಲಯದ ಒಳಾಂಗಣದ ಸುಂದರ ಚಿತ್ರಾಕೃತಿಗಳು ಕಣ್ಮನ ಸೆಳೆಯುತ್ತವೆ. ವಿಶಾಲ ಗರ್ಭಗೃಹ, ಆರಾಧನಾ ಮಂಟಪ, ಮಹಾ ಮಂಟಪ, ಮುಖ ಮಂಟಪ, ಚಿತ್ರ ಮಂಟಪ ಮತ್ತು ಮೂರು ಪ್ರಾಕಾರಗಳನ್ನೊಳಗೊಂಡ ಪ್ರದಕ್ಷಿಣಾ ಪಥಗಳಿರುವ ರಾಜರಾಜೇಶ್ವರಿ ದೇವಾಲಯ ಒಂದು ಅಪರೂಪದ ದೈವ ಸನ್ನಿಧಿ.

ಕಮಲದ ಮೇಲೆ ದೇವಿ
ದೇವಾಲಯದ ಗರ್ಭಗೃಹದಲ್ಲಿ ಆರು ಅಡಿ ಎತ್ತರದ ರಾಜರಾಜೇಶ್ವರಿ ದೇವಿಯು ಬಲಪಾದವನ್ನು ಮಡಚಿ, ಎಡ ಮೊಣಕಾಲೂರಿ ಕಮಲ ಪುಷ್ಪದ ಮೇಲೆ ಆಸೀನಳಾಗಿದ್ದಾಳೆ.

ದೇವಾಲಯದ ನೂತನ ರಾಜಗೋಪುರ ಜಯೇಂದ್ರ ಪುರಿ ಸ್ವಾಮಿಗಳ ಸಂಕಲ್ಪದಂತೆ ನಿರ್ಮಾಣವಾಗಿದೆ. 103 ಅಡಿ ಎತ್ತರದ ಒಂಬತ್ತು ಕಳಸಗಳಿರುವ ಏಳು ಅಂತಸ್ತಿನ ಈ ರಾಜಗೋಪುರ ಭವ್ಯವಾಗಿದೆ. ಅನೇಕ ಶಿಲ್ಪ ಕಲಾವಿದರ ಹತ್ತಾರು ವರ್ಷಗಳ ನಿರಂತರ ಶ್ರಮದ ಪ್ರತೀಕವಾಗಿ ಈ ಗೋಪುರ ತಲೆಯೆತ್ತಿದೆ. ಇದಲ್ಲದೆ ಇನ್ನೂ ಮೂರು ಗೋಪುರಗಳು ದೇವಾಲಯದಲ್ಲಿವೆ. ಮಂಗಳವಾರ,  ಶುಕ್ರವಾರ ಮತ್ತು ಭಾನುವಾರಗಳಂದು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಾರ್ಷಿಕ ಬ್ರಹ್ಮ ರಥೋತ್ಸವ ಮತ್ತು ನವರಾತ್ರಿ ಉತ್ಸವ ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ವಿವಿಧ ಬಗೆಯ ಪೂಜೆ, ಹೋಮ ಹವನಗಳು ನಡೆಯುತ್ತವೆ.

ನವರಾತ್ರಿ ಪೂಜಾ ಕಾರ್ಯಗಳು
ಶರನ್ನವರಾತ್ರಿ ಪ್ರಯುಕ್ತ ರಾಜರಾಜೇಶ್ವರಿ ದೇವಾಲಯದಲ್ಲಿ ಅಕ್ಟೋಬರ್‌ 8ರಿಂದಲೇ ಪೂಜಾ ಕಾರ್ಯಗಳು ಆರಂಭವಾಗಿವೆ. ಅ. 10ರಿಂದ ದೇವಿಗೆ ವಿವಿಧ ರೀತಿ ಅಲಂಕಾರ ಮಾಡಿ ಆರಾಧಿಸಲಾಗುತ್ತಿದೆ. ಇದೇ 19ರವರೆಗೂ ನಿತ್ಯ ಚಂಡಿಹೋಮ, ಪೂರ್ಣಾಹುತಿ, ಕುಂಕುಮಾರ್ಚನೆ ನಡೆಯಲಿದೆ.

ಈಗಾಗಲೇ 10ರಂದು ರಾಜರಾಜೇಶ್ವರಿ, 11ರಂದು ಮೀನಾಕ್ಷಿ, 12ರಂದು ಕಾಮಾಕ್ಷಿ ದೇವಿಯ ಅಲಂಕಾರದಿಂದ ಆರಾಧಿಸಲಾಗಿದೆ. ಇದೇ 13ರಂದು ವಿಶಾಲಾಕ್ಷಿ, 14ರಂದು ಅನ್ನಪೂರ್ಣೇಶ್ವರಿ, 15ರಂದು ದೇವಿ ಶಯನ, 16ರಂದು ಮಹಾಲಕ್ಷ್ಮಿ, 17ರಂದು ಮಹಿಷಾಸುರ ಮರ್ಧಿನಿ, 18ರಂದು ಸರಸ್ವತಿ, 19ರಂದು ಮುತ್ತಗಿ ಅಲಂಕಾರ ಮಾಡಿ ದೇವಿಯನ್ನು ಸಿಂಗರಿಸಿ ಪೂಜಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !