‘ನನಗಂತೂ ಕೆಲಸಗಾರರ ತಲೆನೋವಿಲ್ಲ’

7

‘ನನಗಂತೂ ಕೆಲಸಗಾರರ ತಲೆನೋವಿಲ್ಲ’

Published:
Updated:
Prajavani

ಭವಾನಿ ಕಂಗನ್ ಸ್ಟೋರ್‌ನಿಂದ ಹೋಟೆಲ್‌ ಉದ್ಯಮದತ್ತ ಒಲವು ಮೂಡಿದ್ದು ಹೇಗೆ?

ನನಗೆ ಓದುವ ಹವ್ಯಾಸ ಸ್ವಲ್ಪ ಜಾಸ್ತಿ. ನಗರದ ಬಹುತೇಕ ಹೋಟೆಲ್‌ ಉದ್ಯಮಿಗಳ ಸಂದರ್ಶನ ಓದಿ, ಅವರಿಂದ ಪ್ರಭಾವಿತನಾಗಿದ್ದೇನೆ. ಹೋಟೆಲ್‌ ಉದ್ಯಮಕ್ಕೆ ಬರಬೇಕೆಂಬ ಪ್ಯಾಷನ್ ನನಗರಿವಿಲ್ಲದೇ ನನ್ನಲ್ಲಿ ಬೆಸೆದುಕೊಂಡಿತ್ತು. ಮೈಯ್ಯಾಸ್, ಎಂಟಿಆರ್, ಬ್ರಾಹ್ಮಣ್ ಕೆಫೆಗಳನ್ನು ತೀರ ಹತ್ತಿರದಿಂದ ಬಲ್ಲೆ. ದೃಢ ನಿರ್ಧಾರ ಮಾಡಿ ಈ ಉದ್ಯಮಕ್ಕೆ ಕಾಲಿಟ್ಟಿದ್ದೇನೆ.

ಹೊಸ ಉದ್ಯಮ ಹೇಗಿದೆ?

ಈ ಉದ್ಯಮಕ್ಕೆ ಬಂದು ಎಂಟು ತಿಂಗಳುಗಳಷ್ಟೇ ಕಳೆದಿವೆ. ಹೊಸ ಉದ್ಯಮವಾದ್ದರಿಂದ ಇಲ್ಲಿ ನಾನು ಅಸ್ತಿತ್ವ ಕಂಡುಕೊಳ್ಳಬೇಕಾದರೆ ಹೆಚ್ಚು ಮುತುವರ್ಜಿ ವಹಿಸಬೇಕು. ಮಾಲೀಕರೇ ನಿಂತು ಹೋಟೆಲ್‌ ಪ್ರತಿಯೊಂದು ಪ್ರಕ್ರಿಯೆ ಬಗ್ಗೆ ನಿಗಾ ವಹಿಸುವುದು ಮಹತ್ವದ್ದು. ಕಡಿಮೆ ಅವಧಿಯಲ್ಲಿ ಜನರಿಂದ ಮೆಚ್ಚುಗೆ ಪಡೆದಿದ್ದೇವೆ. ಇದುವರೆಗಿನ ಅನುಭವ ಚೆನ್ನಾಗಿಯೇ ಇದೆ.

ಪ್ರಾರಂಭಿಕವಾಗಿ ಎದುರಿಸಿದ ಸವಾಲುಗಳೇನು?

ಭವಾನಿ ಕಂಗನ್ ಸ್ಟೋರ್‌ನ ವಸ್ತುಗಳು ಎಷ್ಟು ದಿನ ಇಟ್ಟರೂ ಹಾಳಾಗುವುದಿಲ್ಲ. ಆದರೆ, ಹೋಟೆಲ್‌ನ ಆಹಾರ ಪದಾರ್ಥಗಳು ಹಾಗೂ ಆಹಾರ ಖಾದ್ಯಗಳು ಹಾಗಲ್ಲ. ಕೆಲವೇ ಗಂಟೆಗಳಲ್ಲಿ ತಾಜಾತನ ಕಳೆದುಕೊಳ್ಳುವ ಆಹಾರ ಖಾದ್ಯಗಳ ಮೇಲೆ ನಿಗಾ ಇಟ್ಟು ಗುಣಮಟ್ಟದ ರುಚಿಕರವಾದದ್ದನ್ನೇ ಗ್ರಾಹಕರಿಗೆ ಉಣಬಡಿಸುವುದು ದೊಡ್ಡ ಸವಾಲಿನ ಕೆಲಸ. ದಿನೇ ದಿನೇ ಈ ಸವಾಲನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ.

ಇನ್ನು ಗ್ರಾಹಕರನ್ನು ನಿಭಾಯಿಸುವುದೂ ಸವಾಲಿನ ಕೆಲಸವೇ ಸರಿ. ದೊಡ್ಡ ದೊಡ್ಡ ಹೋಟೆಲ್‌ಗಳ ಆಹಾರದ ರುಚಿಯ ಬಗ್ಗೆಯೇ ಗ್ರಾಹಕರು ಕಾಮೆಂಟ್ ಮಾಡುತ್ತಾರೆ. ಇನ್ನು ಚಿಕ್ಕ ಹೋಟೆಲ್‌ಗಳನ್ನು ಬಿಡುತ್ತಾರಾ. ಹೀಗಾಗಿ, ಅವರನ್ನು ತೃಪ್ತಿ ಪಡಿಸುವುದೂ ಸವಾಲಿನ ಕೆಲಸ.

ರುಚಿಕರ ಆಹಾರ ನೀಡುವುದು ಕಷ್ಟವೇ?

ಗ್ರಾಹಕರು ಆಪೇಕ್ಷಿಸುವ ರುಚಿಯ ಆಹಾರ ಪೂರೈಸುವುದು ಸವಾಲಿನ ಕೆಲಸ. ಒಬ್ಬೊಬ್ಬರು ಒಂದೊಂದು ರೀತಿಯ ರುಚಿಯನ್ನು ಬಯಸುತ್ತಾರೆ. ಗ್ರಾಹಕರು ಬಯಸುವಂತೆಯೇ ರುಚಿ ನೀಡಿ ಅವರನ್ನು ಸಂತೃಪ್ತಿಗೊಳಿಸುವುದು ನನ್ನ ಪ್ರಕಾರ ಕಷ್ಟ. ಆದರೂ ಆ ಕೆಲಸವನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ.

ಕೆಲಸಗಾರರ ನಿರ್ವಹಣೆ ಹೇಗೆ?

ಉದ್ಯಮದಲ್ಲಿ ಈ ಮಾತು ಸಹಜವಾದದ್ದು. ವೈಯಕ್ತಿಕವಾಗಿ ನನಗೆ ಆ ತಲೆನೋವಿಲ್ಲ. ಹೋಟೆಲ್ ಕಾರ್ಮಿಕರನ್ನು ಸ್ನೇಹಪೂರ್ವಕವಾಗಿ ನಡೆಸಿಕೊಳ್ಳಬೇಕು. ಅವರೊಂದಿಗೆ ಆತ್ಮೀಯತೆ ಹೊಂದಿರಬೇಕು. ಅವರ ಕಷ್ಟ ಸುಖಗಳಿಗೆ ಮಾಲೀಕರು ಸ್ಪಂದಿಸಬೇಕು. ಕೆಲಸಗಾರರು ಹಾಗೂ ನನ್ನ ನಡುವೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿಯೇ, ಎಂಟು ತಿಂಗಳಿನಿಂದ ನಮ್ಮ ಹೋಟೆಲ್‌ನಲ್ಲಿನ ಕೆಲಸಗಾರರು ನನಗೆ ಕಿರಿಕಿರಿ ಉಂಟು ಮಾಡಿಲ್ಲ. ಈ ವಿಚಾರದಲ್ಲಿ ನಾನು ಅದೃಷ್ಟವಂತ.

ಗ್ರಾಹಕರು ಹೋಟೆಲ್‌ಗಳಿಗೆ ಏಕೆ ಬರಬೇಕು?

ಆಹಾರದ ಗಮ್ಮತ್ತು ಗೊತ್ತಾಗುವುದು ಅದು ಬಿಸಿಯಿದ್ದಾಗಲೇ. ಅದು ತಣ್ಣಗಾದ ಮೇಲೆ ಹೊಟ್ಟೆ ತುಂಬಿಸುವ ಸಲುವಾಗಷ್ಟೇ ತಿನ್ನಬೇಕು. ಮನೆ ಹೊರತಾಗಿ ಬಿಸಿಯಾದ ರುಚಿಕರ ಆಹಾರ ಸಿಗುವುದು ಹೋಟೆಲ್‌ನಲ್ಲಿ ಮಾತ್ರ. ಹೀಗಾಗಿ, ಗ್ರಾಹಕರು ಹೋಟೆಲ್‌ಗಳಿಗೆ ಬರಬೇಕು.

ನನಗೆ ಪಾರ್ಸೆಲ್ ಪದ್ಧತಿಯೇ ಇಷ್ಟವಾಗುವುದಿಲ್ಲ. ನಮ್ಮ ಹೋಟೆಲ್‌ನಲ್ಲಿ ಆಹಾರವನ್ನು ಪಾರ್ಸೆಲ್ ಕೊಡುವುದಕ್ಕೆ ಬೇಜಾರಾಗುತ್ತದೆ. ಪಾರ್ಸೆಲ್ ಕಟ್ಟಿದ ಮೇಲೆ ಆಹಾರದ ಶೇ 25 ರಷ್ಟು ರುಚಿ ಕಳೆದುಹೋಗುತ್ತದೆ. ಗ್ರಾಹಕರಿಗೆ ಅನಿವಾರ್ಯ ಎಂಬ ಕಾರಣಕ್ಕೆ ಪಾರ್ಸೆಲ್ ಕೊಡುತ್ತಿದ್ದೇವೆ. 

ಉದ್ಯಮಕ್ಕೆ ಬರಲು ಏನೆಲ್ಲ ತಯಾರಿ ಬೇಕು?

ಹೋಟೆಲ್ ಉದ್ಯಮ ತುಂಬ ಕಷ್ಟವಾದದ್ದು. ಉದ್ಯಮದ ಆಳ–ಅಗಲ ತಿಳಿದೇ ಈ ಕ್ಷೇತ್ರಕ್ಕೆ ಕಾಲಿಡಬೇಕು. ಉದ್ಯಮದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಅರಿಯಬೇಕು. ಒಳ್ಳೆ ಒಳ್ಳೆಯ ಹೋಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ವಾತಾವರಣದ ಬಗ್ಗೆ ತಿಳಿದುಕೊಳ್ಳಬೇಕು. ಉದ್ಯಮದ ಆಧುನಿಕ ತಂತ್ರಜ್ಞಾನದ ಬಗ್ಗೆ ಅಪ್‌ಡೇಟ್ ಆಗುತ್ತಲೇ ಇರಬೇಕು. ಇಷ್ಟೆಲ್ ತಯಾರಿ ಇಲ್ಲದೆ ಕುರುಡನಂತೆ ಬಂದರೆ ಮುಗ್ಗರಿಸಿ ಬೀಳುವುದು ಗ್ಯಾರಂಟಿ.

ಈ ಉದ್ಯಮ ಕಲಿಸಿದ ಪಾಠವೇನು?

ಈ ಉದ್ಯಮದಲ್ಲಿ ಸಹನೆ ತುಂಬ ಮುಖ್ಯವಾಗುತ್ತದೆ. ಸಹನೆ ಇದ್ದವನು ಯಶಸ್ವಿಯಾಗಿ ಮುನ್ನಡೆಯಬಲ್ಲ. ಸಹನೆಯ ಪಾಠವನ್ನು ಕಲಿತಿದ್ದೇನೆ. ತಾಳ್ಮೆಯಿಂದ ಗ್ರಾಹಕರನ್ನು ನಿಭಾಯಿಸುವುದನ್ನು ಕಲಿತಿದ್ದೇನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !