ಗಡಿಜಿಲ್ಲೆಯ ಕನ್ನಡದ ಹೆಮ್ಮೆಯ ಕುಡಿ ಮುತ್ತುರಾಜ್‌

ಶುಕ್ರವಾರ, ಮೇ 24, 2019
29 °C
ಡಾ.ರಾಜಕುಮಾರ್‌ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಚಿ‌ಂತಕ ಉಮೇಶ್ ಅಭಿಮತ

ಗಡಿಜಿಲ್ಲೆಯ ಕನ್ನಡದ ಹೆಮ್ಮೆಯ ಕುಡಿ ಮುತ್ತುರಾಜ್‌

Published:
Updated:
Prajavani

ಚಾಮರಾಜನಗರ: ‘ನಟನೆಯಲ್ಲಿ ಪರಕಾಯ ಪ್ರವೇಶ ಮಾಡಿ ಪ್ರತಿಯೊಬ್ಬರನ್ನೂ ತಮ್ಮತ್ತ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ಮೆರುನಟರ ಬಗ್ಗೆ ಎಲ್ಲಿಂದ ಆರಂಭಿಸಬೇಕು, ಎಲ್ಲಿ ಮುಕ್ತಾಯ ಮಾಡಬೇಕು ಎನ್ನುವುದೇ ತಿಳಿಯುವುದಿಲ್ಲ. ವಿಶ್ವ ಮಾನವರೆಲ್ಲರೂ ಮೆಚ್ಚುವ ಅತ್ಯದ್ಭುತ ನಟನೆಯ ನಾಡಿನ ಹೆಮ್ಮೆಯ ಕುಡಿ ಮುತ್ತುರಾಜ್‌’ ಎಂದು ಚಿಂತಕ ಉಮೇಶ್ ಅವರು ವರನಟ ಡಾ.ರಾಜಕುಮಾರ್‌ ಅವರನ್ನು ಬಣ್ಣಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ರಾಜಕುಮಾರ್ ಅವರ 90ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೂರು ವರ್ಷದ ಹಿಂದೆ ರಾಜ್‌ಕುಮಾರ್‌ ಅವರ ಬಗೆಗಿನ ಪುಸ್ತಕ ಬಿಡುಗಡೆಗೊಂಡಿರುವುದು ಹೆಮ್ಮೆಯ ಸಂಗತಿ. ಈ ಗಡಿ ಜಿಲ್ಲೆಯನ್ನು ಗರ್ವದಿಂದ ಹೇಳಿಕೊಳ್ಳಬೇಕಾದರೆ ರಾಜಕುಮಾರ್ ಅವರ ಹೆಸರನ್ನು ಹೇಳಬೇಕು. ಅಭಿನಯದೊಂದಿಗೆ ವ್ಯಕ್ತಿತ್ವ, ಅಯಸ್ಕಾಂತದ ನುಡಿ, ಮುಗ್ಧತೆಯ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದ ಶಕ್ತಿ ಅವರದ್ದು. ತಮ್ಮ ವಿಶ್ವ ಮಾನವ ಸಂದೇಶ ಸಾರ್ಥಕವಾಗುತ್ತಿರುವುದು ಡಾ.ರಾಜಕುಮಾರ್‌ ಮೂಲಕ ಎಂದು ನಾಡಿನಶ್ರೇಷ್ಠ ಕವಿ ಕುವೆಂಪು ಹೇಳಿದ್ದರು. ಅಂತಹ ವಿಶ್ವ ಮಾನವತ್ವವನ್ನು ಮೈಗೂಡಿಸಿಕೊಂಡು ವಿಶ್ವಕ್ಕೆ ಮಾದರಿಯಾಗಿದ್ದ ನಟ ರಾಜ್‌ ಅವರೊಬ್ಬರೇ’ ಎಂದರು.

ಸ್ವರ್ಣ ಕಮಲ ಪ್ರಶಸ್ತಿ, ನಾಡಿನ ಗೌರವ: ‘ಹಿರಿಯ ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ‘ಡಾ. ರಾಜಕುಮಾರ್’ ಸಮಗ್ರ ಚರಿತ್ರೆಯ ಎರಡು ಸಂಪುಟಗಳನ್ನು ಬಿಡುಗಡೆಗೊಳಿಸಿದ್ದರು. ಈ ಬೃಹತ್‌ ಸಂಪುಟ ಪ್ರಕಟಗೊಂಡಾಗ ಕೇಂದ್ರ ಸರ್ಕಾರ ಅವರಿಗೆ ‘ಸ್ವರ್ಣ ಕಮಲ’ ಪ್ರಶಸ್ತಿ ನೀಡಿ ಗೌರವಿಸಿತು. ಅದು ರುಕ್ಕೋಜಿ ಅವರಿಗೆ ಸಂದಂತಹ ಗೌರವ ಅಲ್ಲ. ಇಡೀ ಕನ್ನಡಕ್ಕೆ ಸಂದ ದೊಡ್ಡ ಗೌರವ’ ಎಂದರು.

ಪರಕಾಯ ಪ್ರವೇಶ: ‘ಭಕ್ತಕುಂಬಾರ, ಕವಿರತ್ನ ಕಾಳಿದಾಸ ಸೇರಿದಂತೆ 208 ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್‌ ಅವರು ಎಲ್ಲ ಚಿತ್ರಗಳ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜಕುಮಾರ್‌ ಅವರು ನಟಿಸದ ಪಾತ್ರವಿಲ್ಲ ಹಾಗೂ ಹಾಡದ ಹಾಡುಗಳಿಲ್ಲ. ಭವಿಷ್ಯದ ಕುಡಿಗಳಿಗೆ ರಾಜ್‌ ಅವರ ಅಭಿರುಚಿಯ ಸಿನಿಮಾಗಳನ್ನು ತೋರಿಸಬೇಕು’ ಎಂದು ಸಲಹೆ ನೀಡಿದರು.

ಸಾಹಿತ್ಯವೇ ಕೇಳುವುದಿಲ್ಲ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ರಾಜಕುಮಾರ್‌ ಅವರ ಎಲ್ಲ ಸಿನಿಮಾಗಳು ಜೀವನ ಮೌಲ್ಯ ಎತ್ತಿಹಿಡಿಯುತ್ತವೆ. ಹಾಡುಗಳಲ್ಲಿನ ಸಾಹಿತ್ಯ, ಸಂಗೀತ ಮನಕೆ ಇಂಪು ನೀಡುತ್ತಿದ್ದವು. ಚಿತ್ರ ನೋಡಿ ಹೊರಬಂದರೂ ಹಾಡುಗಳು ಕಿವಿಗೆ ಗುಂಯ್‌ಗುಡುತ್ತಿದ್ದವು. ಆದರೆ, ಇಂದಿನ ಚಿತ್ರಗಳ ಹಾಡಿನ ಸಾಹಿತ್ಯವೇ ಅರ್ಥವಾಗುವುದಿಲ್ಲ. ಚಿತ್ರಮಂದಿರದಲ್ಲೇ ಮರೆಯುವಂತಾಗುತ್ತದೆ’ ಎಂದರು.

ಕಾರ್ಯಕ್ರಮಕ್ಕೂ ಮೊದಲು ಡಾ.ರಾಜಕುಮಾರ್‌ ಅವರ ಅಭಿನಯದ ಚಲನಚಿತ್ರ ಗೀತೆಗಳನ್ನು ಗಾಯಕರು ಹಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ ಇದ್ದರು.

‘ರಂಗಮಂದಿರ, ಸಂಶೋಧನಾ ಕೇಂದ್ರ ತೆರೆಯಬೇಕು’

‘ಡಾ.ರಾಜಕುಮಾರ್‌ ಅವರು ಗಡಿ ಜಿಲ್ಲೆಯ ಅಭಿಮಾನಿಗಳ ಆರಾಧ್ಯ ದೈವ ಮಾತ್ರವಲ್ಲ; ಅವರ ಜೀವನ ಮೌಲ್ಯವನ್ನು ತಮ್ಮದಾಗಿಸಿಕೊಳ್ಳುವಂತಹ ವ್ಯಕ್ತಿ’ ಎಂದು ಉಮೇಶ್ ಹೇಳಿದರು.

ವಿಶ್ವಮಾನವರೆಲ್ಲರೂ ಮೆಚ್ಚಿದ, ಜಿಲ್ಲೆಯ ಸಾಂಸ್ಕೃತಿಕ ನಾಯಕರ ಸಾಲಿಗೆ ಸೇರುವ ಜನ ಸಮುದಾಯದವರರೊಂದಿಗೆ ಬೆರೆಯುವ ಮುಗ್ಧಮಗುವಿನ ಮನಸ್ಸು ಹೊಂದಿದ್ದ ಮೇರುನಟ. ಇವರ ಹೆಸರಲ್ಲಿ ರಂಗಮಂದಿರ ನಿರ್ಮಾಣವಾಗಬೇಕಿದೆ. ಚಲನಚಿತ್ರಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯ ಸ್ಥಾಪಿಸುವ ಆಲೋಚನೆ ಸರ್ಕಾರಕ್ಕೆ ಇದ್ದರೆ ಆ ವಿವಿಗೆ ಡಾ.ರಾಜ್‌ ಅವರ ಹೆಸರನ್ನು ಇಡಬೇಕು. ಇವರ ಬಗ್ಗೆ ಸಾಕಷ್ಟು ಅಧ್ಯಯನಗಳು ಆಗಬೇಕು. ಈ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಿಸಲು ಈ ಭಾಗದ ಜನಪ್ರತಿನಿಧಿಗಳು, ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ತಿಳಿಸಿದರು.

ಭಾವನಾತ್ಮಕವಲ್ಲ, ವಾಸ್ತವದ ಸ್ಥಿತಿ: ‘1982ರಲ್ಲಿ ಭಾಷೆಗೆ ಸಂಬಂಧಿಸಿದಂತೆ ದೊಡ್ಡ ಚಳವಳಿ ನಡೆಯಿತು. ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕ ಮಹನೀಯರು ಈ ಚಳವಳಿಗೆ ಧುಮುಕಿದರೂ ಸಾಕಷ್ಟು ಪ್ರಮಾಣದ ಯಶಸ್ಸು ಕಾಣಲಿಲ್ಲ. ಈ ಸಂದರ್ಭದಲ್ಲಿ ಡಾ.ರಾಜ್‌ ಅವರ ಪ್ರವೇಶ ಆಗುತ್ತಿದಂತೆ ಜನಸಾಗರವೇ ಗೋಕಾಕ್‌ ಚಳವಳಿಗೆ ಹರಿದುಬಂತು. ಇದೊಂದು ಭಾವನಾತ್ಮಕವಲ್ಲ ವಾಸ್ತವದ ಸ್ಥಿತಿ. ಈ ಚಳವಳಿಯಲ್ಲಿ ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ಕನ್ನಡ.. ಕನ್ನಡ... ಎಂದು ಹೇಳಿದರು. ಆಗ ಆಳುವ ಸರ್ಕಾರ ಅನಿವಾರ್ಯವಾಗಿ ಮಣಿಯಿತು’ ಎಂದು ಅವರು ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !