ಶುಕ್ರವಾರ, ನವೆಂಬರ್ 22, 2019
23 °C
ಮೂರು ದಿನದ ವಿಚಾರ ಸಂಕಿರಣದ ಸಮಾರೋಪದಲ್ಲಿ ಗದಗಿನ ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್ ಅಭಿಮತ

ಭಕ್ತಿ ಮಾರ್ಗದ ಪ್ರತಿಪಾದಕ ರಾಮಾನುಜಾಚಾರ್ಯ

Published:
Updated:

ಮೈಸೂರು: ‘ವಿಶಿಷ್ಟಾದ್ವೈತ ತತ್ವ ಪ್ರತಿಪಾದಿಸಿದ ರಾಮಾನುಜಾಚಾರ್ಯರು ಭಕ್ತಿ ಮಾರ್ಗದ ಪ್ರತಿಪಾದಕರು ಆಗಿದ್ದರು’ ಎಂದು ಗದಗಿನ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗ ಆಯೋಜಿಸಿದ್ದ ಮೂರು ದಿನದ ‘ತತ್ವಶಾಸ್ತ್ರ, ಧರ್ಮ ಮತ್ತು ಸಮಾಜದಲ್ಲಿ ಶ್ರೀ ರಾಮಾನುಜರ ಸ್ಥಾನ’ ಕುರಿತ ವಿಚಾರ ಸಂಕಿರಣದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ರಾಮಾನುಜರ ಸಿದ್ಧಾಂತ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.

‘ರಾಮಾನುಜಾಚಾರ್ಯರು ಸಾಧನಾ ಭಕ್ತಿ, ಪರಾ ಭಕ್ತಿ, ಪರಮ ಭಕ್ತಿ ಬಗ್ಗೆ ವಿವರವಾಗಿ ಹೇಳಿದ್ದು, ದೇವರೊಟ್ಟಿಗೆ ನೇರ ಸಂಬಂಧ ಹೊಂದುವ ಪರಿಯನ್ನು ವಿವರಿಸಿದ್ದಾರೆ. ದೇವರ ಸಾಮೀಪ್ಯ ಗಳಿಸುವ ಬಗ್ಗೆಯೂ ತಿಳಿಸಿದ್ದಾರೆ. ಭಕ್ತಿ ಮೂಲಕವೇ ದೇವರನ್ನು ಕಾಣುವುದನ್ನು ವಿವರವಾಗಿ ಹೇಳಿಕೊಟ್ಟಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.

‘ರಾಮಾನುಜಾಚಾರ್ಯರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಜನರಿಗೆ ಸರಳವಾಗಿ ಅರ್ಥವಾಗುವಂತದ್ದು. ಆಲೋಚನಾ ಶಕ್ತಿ, ಭಾವನಾ ಶಕ್ತಿಯನ್ನು ಬಿಂಬಿಸಿದ್ದಾರೆ. ಭಾವನಾ ಶಕ್ತಿ ಎಂಬುದು ಇಂಧನವಿದ್ದಂತೆ ಎಂಬುದನ್ನು ಸವಿವರವಾಗಿ ಹೇಳಿದ್ದಾರೆ. ನಮ್ಮಲ್ಲಿ ಆರೋಗ್ಯ, ಸಂತಸ ತುಂಬಿಕೊಂಡರೆ ಸಮಾಜದಲ್ಲೂ ಆರೋಗ್ಯ, ಸಂತಸ ತುಂಬುತ್ತದೆ ಎಂದಿದ್ದಾರೆ’ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಎಚ್‌.ಕಸ್ತೂರಿರಂಗನ್ ಮಾತನಾಡಿ, ‘ದಲಿತರನ್ನು ಶ್ರೇಷ್ಠ ಕುಲದವರು ಎಂದು ಕರೆದವರಲ್ಲಿ ರಾಮಾನುಜಾರ್ಯರು ಮೊದಲಿಗರು. ಇಂದಿಗೂ ಮೇಲುಕೋಟೆ ಉತ್ಸವದಲ್ಲಿ ದಲಿತರಿಗೆ ಮೊದಲ ಆದ್ಯತೆ. ದೇಗುಲ ಪ್ರವೇಶದ ಅವಕಾಶ ಕೊಟ್ಟವರು ಇವರು. ಹಲವು ಶತಮಾನಗಳ ಹಿಂದೆಯೇ ಸಮಾಜ ಸುಧಾರಕರಾಗಿ ಹಲವು ಕ್ರಾಂತಿಕಾರಿ ಬದಲಾವಣೆ ತಂದವರಾಗಿದ್ದಾರೆ’ ಎಂದರು.

ಮೂರು ದಿನದ ವಿಚಾರ ಸಂಕಿರಣ ಕುರಿತಂತೆ ಪ್ರೊ.ಎ.ವಿ.ನರಸಿಂಹಮೂರ್ತಿ, ಪ್ರೊ.ಬಿ.ವಿ.ಕೆ.ಶಾಸ್ತ್ರಿ, ಪ್ರೊ.ಎ.ಟಿ.ಭಾಷ್ಯಂ, ಪ್ರೊ.ವೈ.ಅನಂತನಾರಾಯಣ, ಪ್ರೊ.ಶರ್ಮಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರೊ.ವಿ.ಎನ್.ಶೇಷಗಿರಿರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಸ್.ವೆಂಕಟೇಶ್‌, ಪ್ರೊ.ಎಸ್.ಪದ್ಮನಾಭನ್, ಡಾ.ಎಂ.ಡೇನಿಯಲ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)