ವಿವಿಧ ಗ್ರಾಮಗಳಲ್ಲಿ ಶ್ರೀರಾಮುಲು ರೋಡ್‌ ಶೋ

ಶುಕ್ರವಾರ, ಏಪ್ರಿಲ್ 26, 2019
35 °C
ಮೋದಿ ನಾಯಕತ್ವ ಮತ್ತು ವಿ.ಶ್ರೀನಿವಾಸ ಪ್ರಸಾದ್‌ ಬೆಂಬಲಿಸಲು ಮತದಾರರಿಗೆ ಮನವಿ

ವಿವಿಧ ಗ್ರಾಮಗಳಲ್ಲಿ ಶ್ರೀರಾಮುಲು ರೋಡ್‌ ಶೋ

Published:
Updated:
Prajavani

ಚಾಮರಾಜನಗರ: ಬಿಜೆಪಿ ಮುಖಂಡ ಹಾಗೂ ಶಾಸಕ ಬಿ.ಶ್ರೀರಾಮುಲು ಅವರು ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಪರವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ರೋಡ್‌ ಶೋ ನಡೆಸಿದರು.

ಯಾನಗಹಳ್ಳಿ, ಅರಕಲವಾಡಿ, ಅಮಚವಾಡಿ, ಹರದನಹಳ್ಳಿ ಭಾಗಗಳಲ್ಲಿ ರೋಡ್ ಶೋ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ನೋಡಿ ಮತ ನೀಡಿ ಎಂದು ಮನವಿ ಮಾಡಿದರು.

35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ  ತಳವಾರ ಹಾಗೂ ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.

‘70 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ತಳವಾರ, ಪರಿವಾರ ಜಾತಿಗಳ ಸಮಸ್ಯೆ ಕಾಣಿಸಲೇ ಇಲ್ಲ. ಪದೇ ಪದೇ ಹೋರಾಟ ಮಾಡಿದರೂ ರಾಜ್ಯದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರದವರೆಗೆ ಸಮಸ್ಯೆಯನ್ನು ತಂದು ಬಗೆಹರಿಸಲು ವಿಫಲರಾದರು’ ಎಂದು ದೂರಿದರು.

‘ಕೇಂದ್ರದಲ್ಲಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈಯನ್ನು ಬಲಪಡಿಸಬೇಕು. ಉತ್ತಮ ವ್ಯಕ್ತಿತ್ವವುಳ್ಳ ಶ್ರೀನಿವಾಸ ಪ್ರಸಾದ್ ಅವರು ಗೆದ್ದರೆ ಸಚಿವರಾಗಿ ಜಿಲ್ಲೆಯ ಅಭಿವೃದ್ದಿ ಮಾಡುತ್ತಾರೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಕೇವಲ ಅರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲಹರಣ ಮಾಡಿತ್ತು. ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿಂದ ಬೆಚ್ಚಿ ಬಿದ್ದಿರುವ ಜೆಡಿಎಸ್-ಕಾಂಗ್ರೆಸ್‌ಗಳು ಮೈತ್ರಿ ಧರ್ಮ ಪಾಲನೆ ಎಂದು ಹೇಳುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿ ಹೋಗಿತ್ತು ಇವರ ಮೈತ್ರಿ? ಬಿಜೆಪಿಯನ್ನು ಏಕಾಂಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ಜೆಡಿಎಸ್‌ಜೊತೆಗೆ ಮೈತ್ರಿ ಮಾಡಿಕೊಂಡು ತನ್ನದೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಸಿ, ಇಡೀ ಪಕ್ಷವನ್ನು ದೇವೇಗೌಡರ ಕುಟುಂಬಕ್ಕೆ ಒತ್ತೆ ಇಟ್ಟಿದೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರದಾದ ಸಿ.ಗುರುಸ್ವಾಮಿ, ಎಂ. ರಾಮಚಂದ್ರ,  ಚಿನ್ನಸ್ವಾಮಿ, ಆರ್. ಪುಟ್ಟಮಲ್ಲಪ್ಪ, ವೃಷಬೇಂದ್ರಪ್, ಬಸಪ್ಪದೇವರು, ಕರಿನಾಯಕ, ಮಹದೇವಯ್ಯ, ಚಿಕ್ಕಸ್ವಾಮಪ್ಪ, ಗುರುಸ್ವಾಮಿ ಇದ್ದರು.

ನಂತರ ಶ್ರೀರಾಮುಲು ಅವರು ಯಳಂದೂರು ಪಟ್ಟಣದಲ್ಲೂ ರೋಡ್‌ ಶೋ ನಡೆಸಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !