ರೋಜಾ ಎಂಬ ಪವಿತ್ರ ವ್ರತಾಚರಣೆಯು...

ಬುಧವಾರ, ಜೂನ್ 19, 2019
28 °C
ಮುಸ್ಲಿಮರಿಗೆ ಅತ್ಯಂತ ಶ್ರೇಷ್ಠವಾದ ತಿಂಗಳು: ಉಪವಾಸದ ಜೊತೆಗೆ ಅಡುಗೆಗೂ ಹೆಚ್ಚಿನ ಮಹತ್ವ

ರೋಜಾ ಎಂಬ ಪವಿತ್ರ ವ್ರತಾಚರಣೆಯು...

Published:
Updated:
Prajavani

ಚಾಮರಾಜನಗರ: ನಗರದ ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿ ವಾಸಿಸುತ್ತಿರುವ ಅನ್ಸರ್‌ ಖಾನ್‌ ಅವರ ಕುಟುಂಬದ ದಿನಚರಿ ಈಗ ಬೆಳಿಗ್ಗೆ 3 ಗಂಟೆಗೇ ಆರಂಭವಾಗುತ್ತದೆ. ಅವರಷ್ಟೇ ಅಲ್ಲ, ಹತ್ತು ದಿನಗಳಿಂದ ಮುಸ್ಲಿಂ ಸಮುದಾಯದವರ ಎಲ್ಲರ ಮನೆಯಲ್ಲೂ ಮುಂಜಾವು 3–3.30 ಹೊತ್ತಿಗೆ ಚಟುವಟಿಕೆಗಳು ಆರಂಭವಾಗುತ್ತದೆ. ಇದಕ್ಕೆ ಕಾರಣ ‍ಪವಿತ್ರ ರಂಜಾನ್‌ ಮಾಸ.  

ವಿಶ್ವದಾದ್ಯಂತ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷ ಆಚರಿಸುವ ಒಂದು ತಿಂಗಳ ಉಪವಾಸ ವ್ರತವು ಸಮುದಾಯದ ದಿನಚರಿಯನ್ನೇ ಬದಲಿಸುತ್ತದೆ. ಒಂದು ತಿಂಗಳ ಕಾಲ ಸೂರ್ಯೋದಯದಿಂದ ಸೂರ್ಯಸ್ತದವರೆಗೂ ಮಾಡುವ ಉಪವಾಸಕ್ಕೆ (ರೋಜಾ) ಇಸ್ಲಾಂನಲ್ಲಿ ಎಲ್ಲಿಲ್ಲದ ಮಹತ್ವ. ಈ ಆಚರಣೆಯಿಂದ ದೇಹ ಮತ್ತು ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ. 

ರಂಜಾನ್‌ ಅವಧಿಯಲ್ಲಿ ಸೂರ್ಯೋದಯಕ್ಕೂ ಮುನ್ನ ಮಸೀದಿಯಿಂದ ಕೇಳಿ ಬರುವ ಆಜಾನ್‌ಗೂ (ಕರೆ) ಮುನ್ನ ಉಪಹಾರ ಸೇವಿಸಬೇಕು (ಸಹ್ರಿ ಎನ್ನುತ್ತಾರೆ). ನಂತರ ಹಗಲಿಡೀ ಉಪವಾಸ ಇದ್ದು, ಸಂಜೆ ಸೂರ್ಯಾಸ್ತದ ಬಳಿಕ ಮಸೀದಿಯ ಆಜಾನ್‌ ಕೇಳಿದ ನಂತರ ಆಹಾರ ಸೇವಿಸುವುದು (ಇಫ್ತಾರ್‌) ಕ್ರಮ.

ಬೆಳಗ್ಗಿನಿಂದ ಸಂಜೆವರೆಗೆ...: ಸಹ್ರಿಗೂ ಮುನ್ನ ಆಹಾರ ಸಿದ್ಧಪಡಿಸಲು ಮಹಿಳೆಯರು ಬೆಳಿಗ್ಗೆ 3 ಗಂಟೆಗೇ ಎದ್ದೇಳುತ್ತಾರೆ. ಬೆಳಗಿನ ಊಟ/ಉಪಹಾರಕ್ಕೆ ವಿವಿಧ ತಿಂಡಿಗಳನ್ನು ತಯಾರಿಸಿ ಕುಟುಂಬದ ಸದಸ್ಯರಿಗೆ ಬಡಿಸುತ್ತಾರೆ. ಸಹ್ರಿ ನಂತರ, ಹಗಲಿಡೀ ಉಪವಾಸ ಇದ್ದರೂ ಮಹಿಳೆಯರ ಕೆಲಸಗಳು ಮುಗಿಯುವುದಿಲ್ಲ. ಇಫ್ತಾರ್‌ ನಂತರ ಸೇವಿಸುವ ಆಹಾರ ಸಿದ್ಧಪಡಿಸುವ ಕೆಲಸವಿರುತ್ತದೆ. ಬೆಳಿಗ್ಗೆ ಒಂದಷ್ಟು ಹೊತ್ತು ವಿರಮಿಸಿ, ಅಲ್ಲಾಹುನ ಸ್ಮರಣೆ ಮಾಡಿ ಮತ್ತೆ ಸಂಜೆಯ ಅಡುಗೆಗೆ ಮಧ್ಯಾಹ್ನವೇ ಸಿದ್ಧತೆ ಆರಂಭಿಸುತ್ತಾರೆ. ರಾತ್ರಿ ಕುಟುಂಬದ ಎಲ್ಲರೂ ಊಟ ಮಾಡಿದ ನಂತರ ಅವರ ದಿನಚರಿ ಮುಗಿಯುತ್ತದೆ.

ರಂಜಾನ್‌ ಮಾಸದ ಅಡುಗೆ ಎಂದಿನಂತೆ ಇರುವುದಿಲ್ಲ. ದಿನಂಪ್ರತಿ ತರಹೇವಾರಿ ಖಾದ್ಯ, ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ.  ಕುಟುಂಬದವರೆಲ್ಲರೂ ಜೊತೆಯಾಗಿ ಕುಳಿತು ತಿಂಡಿ ತಿನಿಸುಗಳನ್ನು ಸವಿಯುತ್ತಾರೆ. 

‘ರಂಜಾನ್‌ ಸಮಯದಲ್ಲಿ ಆಹಾರ ತಯಾರಿಕೆಯಲ್ಲಿ ನಮ್ಮದೇ ನಿರ್ಣಾಯಕ ಪಾತ್ರ. ಈ ಮಾಸದಲ್ಲಿ ಹೆಚ್ಚಿನ ಖಾದ್ಯಗಳನ್ನು ತಯಾರಿಸುತ್ತೇವೆ. ಪ್ರತಿ ದಿನವೂ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಸಸ್ಯಹಾರ, ಮಾಂಸಾಹಾರ, ಎಣ್ಣೆ ಕರಿದ ತಿಂಡಿ ಅದರೊಂದಿಗೆ ಸಿಹಿ ತಿಂಡಿಗಳನ್ನು ಮಾಡುತ್ತೇವೆ. ಚಿಕನ್‌ ಕಟ್‌ಲೆಟ್, ಚಿಕನ್‌ ಬಿರಿಯಾನಿ, ಶಾವಿಗೆ ಕಬಾಬ್‌, ಸಮೋಸ, ಬಜ್ಜಿ, ಶಾವಿಗೆ ಪಾಯಸ, ಫಲೂದಾ, ಜಾಮೂನು... ಹೀಗೆ ಹಲವು ಬಗೆಯ ತಿನಿಸುಗಳನ್ನು ಸಿದ್ಧಪಡಿಸುತ್ತೇವೆ’ ಎಂದು ಅನ್ಸರ್‌ ಖಾನ್‌ ಅವರ ಪತ್ನಿ ಶಬನಾ ಅಂಜುಮ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಂಜಾನ್‌ನಲ್ಲಿ ಸಮಯ, ಆಹಾರ ತಿನಿಸಿಗೆ ಹೆಚ್ಚಿನ ಮಹತ್ವವಿದೆ. ಪಾಯಸ, ಖರ್ಜೂರ, ತುಪ್ಪದಿಂದ ಕರಿದ ಸಿಹಿ ತಿನಿಸುಗಳು, ರಾತ್ರಿ ಸಮಯದಲ್ಲಿ ಪ್ರತಿ ದಿನ ವಿವಿಧ ಬಗೆಯ ಜ್ಯೂಸ್‌ ಕುಡಿಯುತ್ತೇವೆ. ಇವೆಲ್ಲ ಶಕ್ತಿ ವೃದ್ಧಿಗೆ ಸಹಕಾರಿ’ ಎನ್ನುತ್ತಾರೆ ಅನ್ಸರ್‌ ಖಾನ್‌.

ಹಾಲು, ಖರ್ಜೂರಕ್ಕೆ ಬೇಡಿಕೆ: ‘ಸಂಜೆ ಉಪವಾಸ ಬಿಡುವ ಮುಂಚೆ ಖರ್ಜೂರ ಸೇವಿಸಲಾಗುತ್ತದೆ. ರಂಜಾನ್‌ ಮಾಸದಲ್ಲಿ ಶಾವಿಗೆ ಪಾಯಸಕ್ಕೆ (ಶೀರ್‌ ಖುರ್ಮಾ) ಅತ್ಯಂತ ಮಹತ್ವವಿದೆ. ಎಲ್ಲರೂ ಉಪವಾಸ ಬಿಡುವ ಸಂದರ್ಭದಲ್ಲಿ ಇದನ್ನು ಸೇವಿಸುತ್ತಾರೆ. ಇದನ್ನು ಹಾಲಿನಿಂದ ಮಾಡುತ್ತೇವೆ‌. ಹಾಗಾಗಿ ಈ ಮಾಸದಲ್ಲಿ ಹಾಲು ಮತ್ತು ಖರ್ಜೂರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ’ ಎಂದು ಶಬನಾ ಅಂಜುಮ್‌ ಹೇಳಿದರು.

‘ಸಹ್ರಿಯಲ್ಲಿ ಆಜಾನ್‌ಗೂ ಮುನ್ನ, ಇಫ್ತಾರ್‌ನಲ್ಲಿ ಆಜಾನ್‌ ನಂತರ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಆಹಾರ ತೆಗೆದುಕೊಳ್ಳುತ್ತೇವೆ. ಬಿಡುವು ಇದ್ದಾಗಲೆಲ್ಲ ಕುರ್‌ ಅನ್‌ ಪಠಣ ಮಾಡುತ್ತೇವೆ’ ಎಂದು ಅವರು ವಿವರಿಸಿದರು.

ಕಠಿಣ ವ್ರತ: ಕಲ್ಮಾ (ಮನಸ್ಸಿನ್ಲಲೇ ದೇವರ ಸ್ಮರಣೆ), ನಮಾಜ್‌ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್‌ (ದಾನ) ಹಾಗೂ ಹಜ (ಮೆಕ್ಕಾಗೆ ಪವಿತ್ರ ಯಾತ್ರೆ)... ಇವು ಇಸ್ಲಾಂ ಧರ್ಮದ ಐದು ತತ್ವಗಳು. ರಂಜಾನ್‌ ಮಾಸದಲ್ಲಿ ಪ್ರತಿಯೊಬ್ಬರೂ ನಿತ್ಯ ಕಲ್ಮಾ, ರೋಜಾ, ನಮಾಜ್‌ ಮತ್ತು ದಾನಕ್ಕೆ ಆದ್ಯತೆ ನೀಡಲಾಗುತ್ತದೆ.

ಉಪವಾಸದೊಂದಿಗೆ ನಿತ್ಯವೂ ಐದು ಬಾರಿ ಪ್ರಾರ್ಥನೆ (ನಮಾಜ್‌ ಮಾಡುತ್ತಾರೆ). ಪುರುಷರು ಮಸೀದಿಗೆ ತೆರಳಿದರೆ, ಮಹಿಳೆಯರು ಮನೆಯಲ್ಲೇ ಮಾಡುತ್ತಾರೆ. ರಂಜಾನ್‌ ಮಾಸದಲ್ಲೇ ಮುಸ್ಲಿಮರು ಹೆಚ್ಚು ದಾನ ಮಾಡುತ್ತಾರೆ.  ಈ ಮಾಸದಲ್ಲಿ ಮುಸ್ಲಿಮರು ಹಗಲು ಹೊತ್ತಿನಲ್ಲಿ ನೀರನ್ನು ಕುಡಿಯದೇ, ಎಂಜಲನ್ನೂ ಸೇವಿಸದೆ ತಪ್ಪಸ್ಸಿನ ರೀತಿಯಲ್ಲಿ ವ್ರತ ಆಚರಿಸುತ್ತಾರೆ. ಬಡವ –ಶ್ರೀಮಂತ ಎಂಬ ಭೇದ ಭಾವ ಇಲ್ಲದೇ, ಎಲ್ಲರೂ ಒಟ್ಟಾಗಿ ಉಪವಾಸ ಮಾಡುತ್ತಾರೆ.

‘ಧಾನ್ಯ’ ದಾನ: ‘ಈದ್‌ ಉಲ್‌–ಫಿತ್ರ್‌ ಮತ್ತು ಬಕ್ರೀದ್‌ ನಮ್ಮ ಎರಡು ಪ್ರಮುಖ ಹಬ್ಬಗಳು. ರಂಜಾನ್‌ ಮಾಸದ ಮುಗಿದ ಬಳಿಕ ಈದ್‌ ಉಲ್‌ ಫಿತ್ರ್‌ ಆಚರಿಸಲಾಗುತ್ತದೆ. ನಾವು ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಈದ್-ಉಲ್-ಫಿತರ್ 'ಧಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಅದನ್ನು ನಾವು ಕಡ್ಡಾಯವಾಗಿ ಆಚರಿಸುತ್ತೇವೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಇದರ ಉದ್ದೇಶ. ಒಬ್ಬ ಮುಸ್ಲಿಂ, ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚಿಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯ ವಾಗಿ ದಾನ ನೀಡಬೇಕು. ಅದು ಆಹಾರ ಧಾನ್ಯವಾಗಿರಬೇಕು ಮತ್ತು ಅದಕ್ಕಾಗಿ 3 ಕೆಜಿ ಅಳತೆಯನ್ನು ನಿಗದಿಪಡಿಸಲಾಗಿದೆ’ ಚಾಮರಾಜನಗರದ ಮದೀನ ಮಸೀದಿಯ ಧರ್ಮಗುರು ಹಫೀದ್‌ ಸೈಯದ್ ಮುಖ್ತಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾರು ದಾನ ಮಾಡಲು ಸಮರ್ಥರಲ್ಲವೋ ಅವರೆಲ್ಲ ದಾನ ಪಡೆಯಲು ಅರ್ಹರು. ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ, ಒಡವೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆ, ಚಿನ್ನದ ಒಡವೆ ಮಾರಿಯಾದರೂ ದಾನ ನೀಡಬೇಕು. ಮನೆಯಲ್ಲಿರುವ ಪ್ರತಿಯೊಬ್ಬರೂ ದಾನವನ್ನು ಕಡ್ಡಾಯ ಮಾಡಬೇಕು’ ಎಂದು ಅನ್ಸರ್‌ ಖಾನ್‌ ವಿವರಿಸಿದರು.

ಅಶಕ್ತರಿಗೆ ವಿನಾಯಿತಿ
‘ಈ ಉಪವಾಸವನ್ನು ಎಲ್ಲರೂ ಕಡ್ಡಾಯವಾಗಿ ಆಚರಿಸಬೇಕು. ತೀರಾ ವಯಸ್ಸಾದವರು, ರೋಗಿಗಳು, ಬಾಣಂತಿಯರು, ಎಳೆಯ ಮಕ್ಕಳಿಗೆ ಇದರಿಂದ ವಿನಾಯಿತಿ ಇದೆ. ಆರೋಗ್ಯವಂತರು ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯವಂತರಾದ ಬಳಿಕ ಉಪವಾಸ ಮಾಡಲೇ ಬೇಕು. ಪರಿಹಾರವಾಗಿ ಅನ್ನದಾನ, ವಸ್ತ್ರದಾನ ಮಾಡಬೇಕು’ ಎಂದು ಅನ್ಸರ್‌ ಖಾನ್‌ ಹೇಳಿದರು.

ಇಫ್ತಾರ್‌ ಸಂಭ್ರಮ
ರಂಜಾನ್‌ ಮಾಸದಲ್ಲಿ ಪ್ರತಿ ದಿನ ಸಂಜೆ ನಡೆಯುವ ಇಫ್ತಾರ್‌ನದ್ದೇ ಮತ್ತೊಂದು ಸಂಭ್ರಮ. ಅದೊಂದು ರೀತಿಯಲ್ಲಿ ಏಕತೆಯ ಸಂಗಮ. ಸೂರ್ಯಾಸ್ತದ ನಂತರ ಮಸೀದಿಯಲ್ಲಿ ಆಜಾನ್‌ ಆದ ನಂತರ ಆಹಾರ ಸೇವಿಸುವ ಮೂಲಕ ಉಪವಾಸ ಬಿಡಲಾಗುತ್ತದೆ.

ಎಲ್ಲ ಮಸೀದಿಗಳಲ್ಲಿ ಇಫ್ತಾರ್‌ ಏರ್ಪಡಿಸಲಾಗುತ್ತದೆ. ಅಲ್ಲಲ್ಲಿ ಇಫ್ತಾರ್‌ ಕೂಟಗಳು ನಡೆಯುತ್ತವೆ. ಪುರುಷರು ಮಸೀದಿಗಳಲ್ಲಿ ಸೇರಿ ಸಾಮೂಹಿಕವಾಗಿ ಕುಳಿತು ಉಪವಾಸ ಬಿಡುತ್ತಾರೆ. ಮಹಿಳೆಯರು ಮನೆಗಳಲ್ಲಿ ಆ ದಿನದ ಉಪವಾಸಕ್ಕೆ ಕೊನೆ ಹಾಡು‌ತ್ತಾರೆ. ಈ ಸಂದರ್ಭದಲ್ಲಿ ಖರ್ಜೂರ, ಬಾಳೆಹಣ್ಣು, ಕಲ್ಲಂಗಡಿ, ದ್ರಾಕ್ಷಿ ಮುಂತಾದ ಹಣ್ಣುಗಳು ಹಣ್ಣುಗಳು, ಹಣ್ಣಿನ ರಸಗಳನ್ನು ಸೇವಿಸುತ್ತಾರೆ. ತದ ನಂತರ ತಮ್ಮ ಮನೆಗಳಿಗೆ ಹೋಗಿ ಇತರೆ ತಿಂಡಿ ತಿನಿಸುಗಳನ್ನು ಸ್ವೀಕರಿಸುತ್ತಾರೆ. 

ಬಡವ ಬಲ್ಲಿದ ಎಂಬ ಭೇದ ಭಾವ ಮರೆತು ಎಲ್ಲರೂ ಒಟ್ಟಾಗಿ ಇಫ್ತಾರ್‌ನಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಮನೆಗೆ ಸಂಬಂಧಿಕರು ಮತ್ತು ಸ್ನೇಹಿತರನ್ನೂ ಕರೆಯುತ್ತಾರೆ. 

ರಂಜಾನ್‌ ಮಾಸದಲ್ಲಿ ಪ್ರತಿ ದಿನ ಐದು ನಮಾಜ್‌ ಅಲ್ಲದೇ ರಾತ್ರಿ ಒಂದು ಗಂಟೆ ಕಾಲ ವಿಶೇಷ ನಮಾಜ್‌ ಮಾಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !