ಸರಗಳ್ಳನ ಹಿಡಿದಿದ್ದ ಹೆಡ್ ಕಾನ್‌ಸ್ಟೆಬಲ್‌ ಜೈಲುಪಾಲು !

7
ಗೃಹರಕ್ಷಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ: ನಂದಿನಿ ಲೇಔಟ್‌ ಪೊಲೀಸರಿಂದ ಚಂದ್ರಕುಮಾರ್ ಬಂಧನ

ಸರಗಳ್ಳನ ಹಿಡಿದಿದ್ದ ಹೆಡ್ ಕಾನ್‌ಸ್ಟೆಬಲ್‌ ಜೈಲುಪಾಲು !

Published:
Updated:
Deccan Herald

ಬೆಂಗಳೂರು: ಕುಖ್ಯಾತ ಸರಗಳ್ಳ ಅಚ್ಯುತ್‌ ಕುಮಾರ್‌ನನ್ನು ಬೆನ್ನಟ್ಟಿ ಹಿಡಿದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ಅವರಿಂದ ಬೈಕ್‌ ಹಾಗೂ ಪ್ರವಾಸದ ಬಹುಮಾನ ಪಡೆದಿದ್ದ ಜ್ಞಾನಭಾರತಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಚಂದ್ರಕುಮಾರ್‌, ಗೃಹರಕ್ಷಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಇದೀಗ ಜೈಲು ಸೇರಿದ್ದಾರೆ.

‘ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದ ಚಂದ್ರಕುಮಾರ್, ಅತ್ಯಾಚಾರ ಎಸಗಿದ್ದಾರೆ’ ಎಂದು 27 ವರ್ಷದ ಗೃಹರಕ್ಷಕಿ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೆಲಸದ ಸ್ಥಳದಲ್ಲಿ ಪರಿಚಯ: ‘ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆ, ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಸ್ಥಳದಲ್ಲೇ ಚಂದ್ರಕುಮಾರ್, ಅವರನ್ನು ಪರಿಚಯ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ನ. 2ರಂದು ಗೃಹರಕ್ಷಕಿಯು ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದರು. ಅವರ ಬಳಿ ಬಂದಿದ್ದ ಆರೋಪಿ, ಮನೆಗೆ ಬಿಡುವುದಾಗಿ ಹೇಳಿ ಬೈಕ್‌ನಲ್ಲಿ ಹತ್ತಿಸಿಕೊಂಡು ಹೋಗಿದ್ದರು. ಎರಡು ದಿನಗಳ ನಂತರ, ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಪದೇ ಪದೇ ಬಂದು ಹೋಗಲಾರಂಭಿಸಿದ್ದರು. ‘ನೀನು ನನಗೆ ಬೇಕು. ನಿನಗೆ ಬೇರೆ ಮನೆ ಮಾಡಿಕೊಡುತ್ತೇನೆ. ನನ್ನ ಜೊತೆ ಬಾ’ ಎಂದು ಆರೋಪಿ ಹೇಳುತ್ತಿದ್ದರು. ನಡುರಸ್ತೆಯಲ್ಲೇ ಮಹಿಳೆಯನ್ನು ತಡೆದು ಅಸಭ್ಯವಾಗಿ ವರ್ತಿಸುತ್ತಿದ್ದರು. ಆ ಬಗ್ಗೆ ಮಹಿಳೆ ದೂರಿನಲ್ಲಿ ತಿಳಿಸಿದ್ದರು’ ಎಂದರು.

‘ನ. 16ರಂದು ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆ, ಕೆಲಸಕ್ಕೆ ಹಾಜರಾಗಿದ್ದರು. ಅವರ ಬಳಿ ಹೋಗಿದ್ದ ಆರೋಪಿ, ಮಹಿಳೆಯ ಕೈ ಹಿಡಿದು ಎಳೆದಾಡಿ ತಬ್ಬಿಕೊಳ್ಳಲು ಯತ್ನಿಸಿದ್ದರು. ಆತನ ವರ್ತನೆಯಿಂದ ಬೇಸತ್ತ ಮಹಿಳೆ, ಉಸ್ತುವಾರಿ ಅಧಿಕಾರಿಗೆ ಮಾಹಿತಿ ನೀಡಿದ್ದರು. ಮರುದಿನವೇ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ಅವರಿಗೂ ವಿಷಯ ಗೊತ್ತಾಗಿತ್ತು. ಚಂದ್ರಶೇಖರ್‌ ಅವರನ್ನು ಠಾಣೆಗೆ ಕರೆಸಿದ್ದ ಇನ್‌ಸ್ಪೆಕ್ಟರ್, ಬುದ್ಧಿವಾದ ಹೇಳಿ ಕಳುಹಿಸಿದ್ದರು’.

‘ಅದೇ ದಿನ ರಾತ್ರಿ ಕೆಲಸ ಮುಗಿಸಿಕೊಂಡು ಮಹಿಳೆ, ಮನೆಗೆ ಬಂದು ಸಮವಸ್ತ್ರ ಬದಲಾಯಿಸುತ್ತಿದ್ದರು. ಅವರು ಒಬ್ಬಂಟಿಯಾಗಿರುವುದನ್ನು ತಿಳಿದುಕೊಂಡು ಮನೆಗೆ ಬಂದಿದ್ದ ಆರೋಪಿ, ಬಾಗಿಲು ಬಡಿದಿದ್ದರು. ತಮ್ಮ ಪತಿಯೇ ಬಂದಿರಬಹುದೆಂದು ಮಹಿಳೆ ಬಾಗಿಲು ತೆಗೆದಿದ್ದರು. ಏಕಾಏಕಿ ಅವರನ್ನು ತಬ್ಬಿಕೊಂಡಿದ್ದ ಆರೋಪಿ, ಬಾಗಿಲು ಬಂದ್‌ ಮಾಡಿ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಮಹಿಳೆಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಅಮಾನತು: ಸರಗಳ್ಳನನ್ನು ಹಿಡಿಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಚಂದ್ರಕುಮಾರ್‌ಗೆ ₹ 1 ಲಕ್ಷ ನಗದು ಬಹುಮಾನ, 150 ಸಿ.ಸಿಯ ಹೊಸ ಬಜಾಜ್ ಪಲ್ಸರ್ ಬೈಕ್, ಒಂದು ತಿಂಗಳ ವಿಶ್ರಾಂತಿ ರಜೆ ಹಾಗೂ ಕುಟುಂಬದ ಜತೆ ದಕ್ಷಿಣ ಭಾರತ ಪ್ರವಾಸದ ಭಾಗ್ಯ ಸಿಕ್ಕಿತ್ತು.

ಈಗ ಅದೇ ಚಂದ್ರಕುಮಾರ್‌, ಜೈಲು ಸೇರಿದ್ದಾರೆ. ಆತನ ಮೇಲೆ ದಾಖಲಾಗಿರುವ ಪ್ರಕರಣದ ಕುರಿತು ನಂದಿನಿ ಲೇಔಟ್ ಪೊಲೀಸರು, ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ವರದಿ ಕಳುಹಿಸಿದ್ದಾರೆ. ಕೆಲವೇ ದಿನಗಳಲ್ಲಿ ಚಂದ್ರಕುಮಾರ್‌, ಅಮಾನತಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 1

  Sad
 • 2

  Frustrated
 • 4

  Angry

Comments:

0 comments

Write the first review for this !