ಶನಿವಾರ, ನವೆಂಬರ್ 23, 2019
18 °C

ಆಟ–ಪಾಠಗಳ ಮ್ಯಾಡಿಸನ್‌ ಲೈಬ್ರರಿ

Published:
Updated:
Prajavani

ಅಮೆರಿಕದ ವಿಸ್ಕಾನ್‌ಸಿನ್‌ ರಾಜಧಾನಿ ಮ್ಯಾಡಿಸನ್‌ನಲ್ಲಿ ನನ್ನ ಮಗನ ಮನೆಗೆ ಸಮೀಪದಲ್ಲಿ ಸನ್‌ ಪ್ರೇರಿ(SUN PRAIRIE) ಎಂಬ ಲೈಬ್ರರಿ ಇತ್ತು. ಅಮೆರಿಕ ಪ್ರವಾಸದಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಈ ಗ್ರಂಥಾಲಯ. ಪ್ರವಾಸಿಗರ ಪಾಲಿಗೆ, ಇದೂ ಒಂದು ಪ್ರವಾಸಿ ತಾಣ ಎಂದರೆ ಅಚ್ಚರಿ ಏನಲ್ಲ.

ಈ ಲೈಬ್ರರಿಗೆ ನನ್ನ ಮಗ, ಸೊಸೆ ಮತ್ತು ಮೊಮ್ಮಗಳು ಮೂವರು ಸದಸ್ಯರು. ಹಾಗಾಗಿ, ನನಗೂ ಇಲ್ಲಿಗೆ ಹೋಗುವ ಹಾಗೂ ಮಾಹಿತಿ ತಿಳಿಯುವ ಸದಾವಕಾಶ ಸಿಕ್ಕಿತ್ತು. ಒಂದು ಇಡೀ ದಿನ ಲೈಬ್ರರಿ ನೋಡಿ ಬರಲು ಹೊರಟೆ. ಗ್ರಂಥಾಲಯದ ಒಳ ಪ್ರವೇಶಿಸಿದರೆ, ದೊಡ್ಡದಾದ ಹಾಲ್‌. ಬೃಹತ್‌ ಕಪಾಟುಗಳಲ್ಲಿ ಪುಸ್ತಕದ ಜೋಡಣೆ. ಒಂದು ಭಾಗದಲ್ಲಿ ಮಕ್ಕಳಿಗೆ ಆಟವಾಡಲು ಆಟಿಕೆಗಳು. ಹಿರಿಯ ನಾಗರಿಕರಿಗೆ ವಿರಮಿಸಿಕೊಂಡು ಓದುವ ಸೌಲಭ್ಯ. ಇನ್ನೊಂದೆಡೆ ಡಿಜಿಟಲ್ ಲೈಬ್ರರಿ, ಯುವಕ / ಯುವತಿಯರಿಗಾಗಿ ಪ್ರತ್ಯೇಕ ಸ್ಥಳ..!

ಓದುವುದಕ್ಕೆ ಪೂರಕ ವಾತಾವರಣ ಕಲ್ಪಿಸಿರುವ ಲೈಬ್ರರಿಯ ಒಳಾಂಗಣದ ಸೌಲಭ್ಯಗಳನ್ನು ನೋಡಿದಾಗ, ನಮ್ಮ ದೇಶದಲ್ಲೂ ಇಂಥ ಲೈಬ್ರರಿಗಳಿರಬಾರದೇ ಎನ್ನಿಸಿತು.

ಈ ಗ್ರಂಥಾಲಯದಲ್ಲಿ ಒಂದು ಲೈಬ್ರರಿ ಕಾರ್ಡ್‌ಗೆ ತಿಂಗಳಿಗೆ 25 ಪುಸ್ತಕಗಳನ್ನು ಕೊಡುತ್ತಾರಂತೆ. ತೆಗೆದುಕೊಂಡ ಪುಸ್ತಕಗಳನ್ನು ಲೈಬ್ರರಿಗೆ ಹೋಗಿ ಹಿಂದಿರುಗಿಸಬೇಕಾಗಿಲ್ಲ. ರಾಜ್ಯದ ಯಾವುದೇ ಲೈಬ್ರರಿಯಲ್ಲಿ ವಾಪಸ್ ಕೊಟ್ಟರೂ ಸಾಕು. ಈ ಸೇವೆ ಸಂಪೂರ್ಣ ಉಚಿತ. ಸರ್ಕಾರದ ಲಾಭರಹಿತ ಸಂಸ್ಥೆಯದು.

ಕೀ ಬಂಚ್‌ಗೆ ಹಾಕುವಂಥಹ ಕಾರ್ಡ್ ಕೊಡುತ್ತಾರೆ. ಅದು ಲೈಬ್ರರಿ ಕಾರ್ಡ್‌. ಅದು ಬೇಕಾದರೆ ಮಾತ್ರ ಒಂದು ಡಾಲರ್ ಪಾವತಿಸಬೇಕು. ಲೈಬ್ರರಿಗೆ ರಜೆ ಇದ್ದಲ್ಲಿ ಅಥವಾ ಸಮಯವಿಲ್ಲದಿದ್ದಲ್ಲಿ ಗ್ರಂಥಾಲಯದ ಹೊರ ಭಾಗದಲ್ಲಿರುವ ಬಾಕ್ಸ್‌ಗಳಿಗೆ ಪುಸ್ತಕಗಳನ್ನು ಹಾಕಿ ಹೋಗಬಹುದು. ಅದರಲ್ಲಿ ಅಳವಡಿಸಿದ ಚಿಪ್‌ನಿಂದಾಗಿ ಸಿ.ಡಿ. ಪುಸ್ತಕಗಳು ಆಯಾ ಬಾಕ್ಸ್‌ನಲ್ಲೇ ಹೋಗಿ ಬೀಳುತ್ತವೆ. ಅಷ್ಟು ದೊಡ್ಡ ಲೈಬ್ರರಿ ನಿರ್ವಹಣೆಗೆ ಇರುವುದು ಬೆರಳೆಣಿಕೆಯ ಸಿಬ್ಬಂದಿ !

ಇಲ್ಲಿ ಎಲ್ಲ ವಯೋಮಾನದವರಿಗೂ ವಿಭಾಗಗಳಿವೆ. ಆಯಾ ವಯಸ್ಸಿನವರಿಗೆ ಅನುಕೂಲಕ್ಕೆ ತಕ್ಕಂತೆ ಪುಸ್ತಕಗಳು, ಆಟಗಳಿವೆ. ಮಕ್ಕಳಿಗೆ ಡ್ರಾಯಿಂಗ್ ಪುಸ್ತಕ ಕೊಡುತ್ತಾರೆ. ಆಟಿಕೆಗಳಿರುತ್ತವೆ. ಮಕ್ಕಳು, ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಚಿತ್ರಗಳಿಗೆ ಬಣ್ಣ ಹಚ್ಚಬಹುದು. ಉತ್ತಮ ಚಿತ್ರವನ್ನು ಆಯ್ಕೆ ಮಾಡಿ ಲೈಬ್ರರಿ ಗೋಡೆ ಮೇಲೆ ಅಂಟಿಸುತ್ತಾರೆ. ಇಲ್ಲಿ 1 ಅಥವಾ 2 ವರ್ಷಗಳೊಳಗಿನ ಮಗುವಿಗೂ ಆನಂದಿಸುವ, ಆಡಿ ಕಲಿಯುವ ಸೌಲಭ್ಯ!

ಆ ಕಡೆ ಮಕ್ಕಳು ಆಟವಾಡುತ್ತಿದ್ದರೆ, ಇತ್ತ ಪೋಷಕರು ನಿಶ್ಚಿಂತೆಯಿಂದ ಪುಸ್ತಕ ಓದುತ್ತಿರುತ್ತಾರೆ. ಆದರೆ, ಎಂಟು ವರ್ಷದೊಳಗಿನ ಮಕ್ಕಳಿಗೆ, ಪೋಷಕರು ಜೊತೆಯಲ್ಲಿರಲೇಬೇಕು. ಇದು ಕಡ್ಡಾಯ. ಮಕ್ಕಳನ್ನು ಅರ್ಧ ಗಂಟೆ ಲೈಬ್ರರಿಯಲ್ಲೇ ಬಿಟ್ಟು ಬರಬಹುದು. ಅವರು ಕಂಪ್ಯೂಟರ್‌ಗಳಲ್ಲಿ ಆಟಗಳನ್ನು ಆಡಿ, ಕಾರ್ಟೂನ್ ನೋಡಬಹುದು. ವಯಸ್ಕರಿಗೆ ಹಿರಿಯರಿಗೆ ಬೇರೆಬೇರೆ ವಿಭಾಗಗಳಿವೆ. ಇಂಥ ಕ್ಷೇತ್ರದ ಬಗ್ಗೆ ಪುಸ್ತಕವಿಲ್ಲ ಎಂದು ಹೇಳುವಂತಿಲ್ಲ. ಅಷ್ಟು ಪ್ರಮಾಣದ ಕೃತಿಗಳಿವೆ.

ಮಕ್ಕಳು ಯಾವುದೇ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅದಕ್ಕೆ ಸಂಬಂಧಿಸಿದ ವಸ್ತುಗಳು ಚೀಲಗಳಿರುತ್ತವೆ. ಅದರಲ್ಲಿ ಕೃಷಿ, ಅಡುಗೆ ಮನೆ ಇತ್ಯಾದಿ.. ವಿಷಯಗಳ ಪುಸ್ತಕಗಳಿರುತ್ತವೆ. ಆ ಚೀಲವನ್ನು ಮನೆಗೇ ತೆಗೆದುಕೊಂಡು ಹೋಗಿ ನಂತರ ಹಿಂದಿರುಗಿಸಬೇಕು. ಅದರಲ್ಲಿರುವ ಪರಿಕರಗಳ ಪಟ್ಟಿ ಹಾಗೂ ಬೆಲೆ ನಮೂದಾಗಿರುತ್ತದೆ. ಹಾಗೆಯೇ ಸಿ.ಡಿ, ಡಿವಿಡಿಯೊಂದಿಗೆ ಕಥೆ, ಹಾಡು, ನಾಟಕಗಳ ಸಾಹಿತ್ಯದ ಪುಸ್ತಕಗಳ ಚೀಲಗಳಿರುತ್ತವೆ.

ಲೈಬ್ರರಿಯಲ್ಲಿ ಕ್ಯಾಂಟಿನ್‌ ಸೌಲಭ್ಯವಿದೆ. ಒಮ್ಮೊಮ್ಮೆ ಅರ್ಧ ಬೆಲೆಗೆ ಅಥವಾ ಉಚಿತವಾಗಿಯೂ ಪುಸ್ತಕಗಳು ಸಿಗುತ್ತವೆ. ನಾನು ಎರಡು ಪುಸ್ತಕಗಳನ್ನು ಅಲ್ಲಿಂದ ಖರೀದಿಸಿ ತಂದೆ.

ನಾನು ಹೋಗಿದ್ದು ಜೂನ್-ಜುಲೈ ತಿಂಗಳಲ್ಲಿ. ಆಗ ಬೇಸಿಗೆ ರಜೆ. ಅದರ ಅಂಗವಾಗಿ ಮಕ್ಕಳಿಗೆ ‘ರಾಕ್ ಅಂಡ್ ರೀಡ್’ ಎಂಬ ವಿಶೇಷ ಕಾರ್ಯಕ್ರಮವಿತ್ತು. ಮಕ್ಕಳಿಗೆ ಆರು ಪುಸ್ತಕ ಕೊಡುತ್ತಾರೆ. ಅವುಗಳನ್ನು ಓದಿದ ನಂತರ ಮಗುವಿನ ಹೆಸರು ಬರೆದು ಗೋಡೆಗೆ ಅಂಟಿಸುತ್ತಾರೆ. ಮಗುವಿನ ವಯಸ್ಸಿಗೆ ತಕ್ಕಂತೆ ಯಾವ ಪುಸ್ತಕ ಓದಬೇಕೆಂದು ಹೇಳುತ್ತಾರೆ. ಮಗು ತನ್ನಿಚ್ಛೆಯಂತೆ ಮನೆಯಲ್ಲಿದ್ದ ಅಥವಾ ಗ್ರಂಥಾಲಯದ ಪುಸ್ತಕಗಳನ್ನೂ ಓದಬಹುದು. ಪ್ರತಿ ಹಂತ ಮುಗಿಸಿದಾಗಲೂ ಸರಳ ಪ್ರಶ್ನೆಗಳೊಂದಿಗೆ ಬಹುಮಾನವಿರುತ್ತದೆ. ಮಗು ಹತ್ತು ಹಂತವನ್ನು ಮುಗಿಸಿದಾಗ 60 ಪುಸ್ತಕಗಳನ್ನು ಓದಿರುತ್ತದೆ. ಆಗ ಮಗುವಿನ ಹೆಸರು ನಕ್ಷತ್ರದಾಕಾರದ ಪೇಪರ್‌ನಲ್ಲಿ ಬರೆದು ಗೋಡೆಗೆ ಅಂಟಿಸಿ  ‘ಎ ಲೈಬ್ರರಿ ಚಾಂಪಿಯನ್ ಲಿವ್ಸ್ ಹಿಯರ್’ ಎಂಬ ಬೋರ್ಡ್ ಬಹುಮಾನ ಕೊಡುತ್ತಾರೆ.

ತಿಂಗಳಲ್ಲಿ 2 ದಿನ 1 ಗಂಟೆಯ ಕಾಲ ಗ್ರಂಥಾಲಯದಲ್ಲಿ ಕಥನ ಕಾವ್ಯ, ಶಿಶುಕಾವ್ಯ, ಸಂಗೀತ-ನಾಟಕದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.‌ ಗ್ರಂಥಾಲಯದ ಸೇವೆ, ಒಳಾಂಗಣದಲ್ಲಷ್ಟೇ ಅಲ್ಲ, 15 ದಿನಗಳಿಗೊಮ್ಮೆ ಪಾರ್ಕ್‌ಗಳಿಗೂ ಸ್ಥಳಾಂತರವಾಗುತ್ತದೆ. ಅಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಮಗು ತನ್ನ ಅನುಭವ, ತಾನು ಆಡಿದ ಆಟಗಳ ಬಗ್ಗೆ ಬರೆಯಲು ಚಿತ್ರ ಬಿಡಿಸಲು ಪರಿಕರಗಳನ್ನು ಕೊಡುತ್ತಾರೆ. ಮೆಂಬರ್ ಆಗದವರು ಸದಸ್ಯರಾಗಿ ಉಚಿತ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು.  ಇದ
ನ್ನೆಲ್ಲ ನೋಡಿ, ಅನುಭವಿಸುತ್ತಿದ್ದ ನನಗೆ, ನಮ್ಮ ದೇಶದಲ್ಲೂ ಇಂಥ ಗ್ರಂಥಾಲಯಗಳ ಕನಸು ನನಸಾಗಲಿ ಎಂದು ಮನದಲ್ಲಿ ಆಶಿಸಿದೆ.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)