ಕೋಟ್ಯಂತರ ವಂಚನೆ ಆರೋಪ: ದೂರು ದಾಖಲು
ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರಕಿಸಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ಮೊತ್ತ ವಂಚಿಸಿದ ಆರೋಪದ ಮೇಲೆ ಕಾರ್ವಿ ಸಮೂಹ ಸಂಸ್ಥೆಗಳ ಮುಖ್ಯಸ್ಥ, ನಿರ್ದೇಶಕರು ಮತ್ತು ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಂಚನೆಗೊಳಗಾದ ಕೇತಕಿ ಷಾ ತಲಟಿ ಎಂಬುವರು ಕಾರ್ವಿ ಸಮೂಹ ಸಂಸ್ಥೆಯ ಸಿಇಓ ಅಭಿಜಿತ್ ಭಾವೆ, ರಿಯಲ್ ಎಸ್ಟೇಟ್ ಮುಖ್ಯಸ್ಥ ಪ್ರವೀಣ್ ಗಾರ್ಲೆ, ನಿರ್ದೇಶಕರಾದ ಪಾರ್ಥಸಾರಥಿ, ಯುಗಾಂಧರ್ ಮೆಕಾ, ಆಶೀಸ್ ಅಗರವಾಲ್, ಭಗವಾನ್ದಾಸ್ ನಾರಂಗ್, ನಿತಿನ್ ಸಭರ್ವಾಲ್, ಪ್ರವೀಣ್ ಭಾಯಿ ಭಗವಾನ್ಜಿ, ನಿತಿನ್ ಸಕ್ಸೇನಾ ಸೇರಿದಂತೆ ಒಟ್ಟು 13 ಮಂದಿಯ ವಿರುದ್ಧ ದೂರು ನೀಡಿದ್ದಾರೆ.
ಚಂಡೀಗಡದ ಸಿ ಅಂಡ್ ಸಿ ಟವರ್ಸ್ ಲಿಮಿಟೆಡ್, ಮಹಾರಾಷ್ಟ್ರದ ಥಾಣೆಯ ಮಿರಾಡಾರ್ ನಿರ್ಮಾಣ ಸಂಸ್ಥೆ, ಬೆಂಗಳೂರಿನ ಗ್ರೀನ್ಸ್ ಫಾರ್ಮಟೆಕ್, ಮುಂಬೈಯ ಕಸಾಟಾ ಹೋಮ್ ಟೆಕ್ ಇಂಡಿಯಾ ಪ್ರೈವೇಟ್, ನವದೆಹಲಿಯ ಕಾನ್ಸೆಪ್ಟ್ ಹಾರಿಝನ್ ಇನ್ಫಾ ಪ್ರೈವೇಟ್, ಭಾಗ್ಯಲಕ್ಷ್ಮೀ ಹೋಮ್ಸ್, ಭಾರತ್ ಹೈಟೆಕ್ ಬಿಲ್ಡರ್ಸ್ ಮತ್ತಿತರ ರಿಯಲ್ ಎಸ್ಟೇಟ್ಸ್, ಬಿಲ್ಡರ್ಸ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ. ಹೂಡಿಕೆ ಮಾಡಿದ ಎಲ್ಲ ಯೋಜನೆಗಳಿಗೆ ಭದ್ರತೆ ಸೌಲಭ್ಯಗಳಿರುತ್ತದೆ ಎಂದು ನಂಬಿಸಿ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.