ವಿಷ ಪ್ರಸಾದ ದುರಂತ: ‘ಕಿಚ್ಚುಗುತ್ತು’ ಎಂಬ ಹೆಸರು ಬಂದಿದ್ದಾದರೂ ಏಕೆ?

7
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಭಕ್ತರನ್ನು ಸುಳ್ವಾಡಿ ಮಾರಮ್ಮ

ವಿಷ ಪ್ರಸಾದ ದುರಂತ: ‘ಕಿಚ್ಚುಗುತ್ತು’ ಎಂಬ ಹೆಸರು ಬಂದಿದ್ದಾದರೂ ಏಕೆ?

Published:
Updated:
Deccan Herald

ಮಹದೇಶ್ವರ ಬೆಟ್ಟ: ವಿಷ ಪ್ರಸಾದ ದುರಂತದಿಂದ ರಾಜ್ಯದಾದ್ಯಂತ ಸುದ್ದಿಯಾಗಿರುವ ಇಲ್ಲಿಗೆ ಸಮೀಪದ ಕಿಚ್ಚುಗುತ್ತು ಮಾರಮ್ಮನ ದೇವಸ್ಥಾನದ ಹೆಸರಿನಲ್ಲಿ ಬರುವ ‘ಕಿಚ್ಚುಗುತ್ತು’ ಎಂಬ ಪದ ವಿಚಿತ್ರವಾಗಿ ಕೇಳಿಸುತ್ತದೆ.

ಸ್ಥಳೀಯವಾಗಿ ‘ಕಿಚ್ಚುಗುತ್ತಿ’, ‘ಕಿಚ್‌ಕುತ್‌’ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತಿದೆ. ಈ ಹೆಸರಿನ ಹಿಂದೆಯೂ ಐತಿಹ್ಯವಿದೆ ಎಂದು ಹೇಳುತ್ತಾರೆ ಊರಿನ ಹಿರಿಯರು.

ದೇವಸ್ಥಾನ ಅಭಿವೃದ್ಧಿ 20–30 ವರ್ಷಗಳ ಹಿಂದೆ ಆಗಿದ್ದರೂ, ಸಣ್ಣ ಗುಡಿಯಲ್ಲಿದ್ದ ಮಾರಮ್ಮನನ್ನು ಸ್ಥಳೀಯರು ಅದಕ್ಕಿಂತ ಮೊದಲೇ ಹಲವು ದಶಕಗಳಿಂದ ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಗ್ರಾಮಗಳ ನಿವಾಸಿಗಳಿಗೆ ಯಾವುದಾದರೂ ಕಾಯಿಲೆ ಬಂದರೆ, ಮಾರಮ್ಮನ ಗುಡಿಗೆ ಬಂದು ಬಿದಿರಿನ ಅಥವಾ ಅಂಕೋಲೆ ಮರದ ಕಡ್ಡಿಗಳನ್ನು ಗುತ್ತಿ (ಒಟ್ಟಾಗಿ, ಗೊಂಚಲಿನ ರೀತಿ ಹಿಡಿದು) ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗುತ್ತಿತ್ತು. ಇದೊಂದು ರೀತಿಯಲ್ಲಿ ಪಂಜಿನ ಸೇವೆಯಂತೆ ಭಾಸವಾಗುತ್ತಿತ್ತು. ಹಲವು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿತ್ತು. ಇದರಿಂದಾಗಿ ಮಾರಮ್ಮನಿಗೆ ಕಿಚ್ಚುಗುತ್ತಿ/ಕಿಚ್ಚುಗುತ್ತು ಮಾರಮ್ಮ ಎಂಬ ವಿಶೇಷಣ ಸೇರ್ಪಡೆಯಾಯಿತು ಎಂದು ಹೇಳುತ್ತಾರೆ ಹಿರಿಯರು.

‘ದೇವಸ್ಥಾನಕ್ಕೆ ಒಂದು ತಲೆಮಾರಿನ ಇತಿಹಾಸವಿದೆ. ಹಲವು ವರ್ಷಗಳ ಹಿಂದೆ ಇಲ್ಲಿ ಸಣ್ಣ ಗುಡಿ ಇತ್ತು. ಕಾಲ ಕ್ರಮೇಣ ಮಾರಮ್ಮನ ಕಾರಣಿಕ ಹೆಚ್ಚುತ್ತಾ ಹೋಯಿತು. ಹೆಚ್ಚು ಹೆಚ್ಚು ಭಕ್ತರು ಬರಲು ಆರಂಭಿಸಿದರು. ಇಲ್ಲಿಗೆ ಹರಕೆ ಹೊತ್ತು ಯಾವುದೇ ಕಾರ್ಯವನ್ನು ನೆನೆಸಿಕೊಂಡರೆ. ಅದು ಈಡೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ’ ಎಂದು ಸ್ಥಳೀಯರಾದ 70ರ ಹರೆಯದ ಮಾಣಿಕ್ಯಂ ಅವರು ಹೇಳುತ್ತಾರೆ.

ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತು ಸ್ಥಳೀಯರಲ್ಲದೆ, ಮೈಸೂರು, ಬೆಂಗಳೂರು, ತಮಿಳುನಾಡು ಭಾಗಗಳಿಂದಲೂ ಭಕ್ತರು ನೆರವೇರುತ್ತಾರೆ. ಶಕ್ತಿ ದೇವತೆಯಾಗಿರುವ ಮಾರಮ್ಮನಿಗೆ ಭಕ್ತರು ಆಡುಗಳ ಬಲಿ ಕೊಟ್ಟು ಕೃತಾರ್ಥರಾಗುತ್ತದೆ.

ದೇವಸ್ಥಾನ ಬಂದ್‌

ಡಿಸೆಂಬರ್‌ 14ರಂದು ಘಟನೆ ನಡೆದ ಬಳಿಕ ದೇವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಪೂಜೆಗಳು ನಡೆಯುತ್ತಿಲ್ಲ. ದೇವಾಲಯಕ್ಕೆ ಬರುವ ಭಕ್ತರು ಹೊರಗಿನಿಂದಲೇ ಕೈಮುಗಿದು ಹೋಗುತ್ತಿದ್ದಾರೆ.

ಕೆಟ್ಟು ಹೋಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ

ಈ ಹಿಂದೆ ದೇವಾಲಯದಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದುದರಿಂದ, ಭದ್ರತೆಯ ದೃಷ್ಟಿಯಿಂದ ದೇವಾಲಯದ ಆವರಣದಲ್ಲಿ ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಕೆಲವು ತಿಂಗಳುಗಳ ಹಿಂದೆ ಇವು ಕೆಟ್ಟು ಹೋಗಿತ್ತು. ಆದರೆ, ಅವುಗಳನ್ನು ದುರಸ್ತಿ ಮಾಡಿರಲಿಲ್ಲ. ಹೀಗಾಗಿ ಘಟನೆ ನಡೆದ ದಿನ ಏನಾಗಿರಬಹುದು ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದಾದ ಅವಕಾಶ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !