ಭಾನುವಾರ, ಡಿಸೆಂಬರ್ 15, 2019
26 °C
ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಬಳಿ ಕನಕದಾಸರ ವೃತ್ತ

ಮರೆತಿದ್ದ ವೃತ್ತ ಮತ್ತೆ ನೆನಪಾಯ್ತು..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ವಿಜಯಪುರ ನಗರದ ಎಂ.ಜಿ.ರಸ್ತೆ, ಸ್ಟೇಷನ್‌ ರಸ್ತೆಯುದ್ದಕ್ಕೂ ಹಲ ಮಹನೀಯರ ವೃತ್ತಗಳಿವೆ. ಎಂ.ಜಿ.ರಸ್ತೆ ಆರಂಭದಲ್ಲೇ ಜಗಜ್ಯೋತಿ ಬಸವೇಶ್ವರರ ವೃತ್ತ, ನಡುವಿನಲ್ಲಿ ಗಾಂಧಿ ಚೌಕ್, ಅಂತ್ಯದಲ್ಲಿ ಶಿವಾಜಿ ಚೌಕ್‌ ಇದೆ.

ಸ್ಟೇಷನ್‌ ರಸ್ತೆ ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತವಿದೆ. ಇಲ್ಲಿಂದ ಮುಂದಕ್ಕೆ ಜಿಲ್ಲಾ ಕ್ರೀಡಾಂಗಣದ ಬಳಿ, ಶಹಾಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ದಾರ್ಶನಿಕ ಕನಕದಾಸರ ವೃತ್ತವಿದೆ.

ಕನಕದಾಸರ ವೃತ್ತದ ನೆನಪು ಈಚೆಗಿನ ವರ್ಷಗಳಲ್ಲಿ ಮರೆಯಾಗಿತ್ತು. ವಾರದ ಹಿಂದಷ್ಟೇ ನಡೆದ ಕನಕ ಜಯಂತಿ ವೃತ್ತವನ್ನು ವಿಜಯಪುರಿಗರಿಗೆ ನೆನಪಿಸುವ ಜತೆ, ತನ್ನ ಕುರುಹು ಪ್ರದರ್ಶಿಸಿದೆ. ಇದರ ಹಿಂದೆ ಜಿಲ್ಲಾ ಕನಕ ಯುವ ಸೇನೆ, ಹಾಲುಮತ ಮಹಾಸಭಾ, ಕುರುಬರ ಸಂಘದ ಒತ್ತಾಸೆ ಅಡಗಿದೆ.

ಕನಕ ಜಯಂತಿ ಆಚರಣೆಗಾಗಿಯೇ ವೃತ್ತಕ್ಕೆ ಮರುಜೀವ ನೀಡಲಾಗಿತ್ತು. ಆದರೆ ಕೇಂದ್ರದ ಮಾಜಿ ಸಚಿವರಾದ ಅಂಬರೀಷ್‌, ಜಾಫರ್‌ ಷರೀಫ್‌ ನಿಧನದಿಂದ ಶೋಕಾಚರಣೆ ಘೋಷಣೆಯಾಯ್ತು. ಇದರ ನಡುವೆಯೂ ಕನಕ ಸೇನೆಯ ಯುವಕರು, ಕುರುಬ ಸಂಘದ ಪದಾಧಿಕಾರಿಗಳು ವೃತ್ತದಲ್ಲಿ ಜಮಾಯಿಸಿ, ಕನಕ ಜಯಂತಿ ಆಚರಣೆಗೂ ಮುನ್ನ ಸಂತಾಪ ವ್ಯಕ್ತಪಡಿಸಿದ್ದು, ಪ್ರಶಂಸೆಗೆ ಪಾತ್ರವಾಗಿತ್ತು.

2010ರಲ್ಲಿ ಸ್ಥಾಪನೆ:

‘ಜಿಲ್ಲಾ ಕುರುಬರ ಸಂಘದಿಂದ ವಿಜಯಪುರದಲ್ಲಿ ಕನಕದಾಸರ ವೃತ್ತ ಸ್ಥಾಪಿಸುವಂತೆ ಈ ಹಿಂದಿನ ನಗರಸಭೆ ಆಡಳಿತಕ್ಕೆ ಸಂಘದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಇತರರು ಮನವಿ ಸಲ್ಲಿಸಿದ್ದರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿಜಯಪುರ ನಗರ ಶಾಸಕರಿದ್ದರು. ಪರಶುರಾಮ ರಜಪೂತ ನಗರಸಭೆಯ ಅಧ್ಯಕ್ಷರಿದ್ದರು. ನಾನು ನಗರಸಭೆಯ ನಾಮನಿರ್ದೇಶಿತ ಸದಸ್ಯನಾಗಿದ್ದೆ. ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದಂತೆ, ಅಬ್ದುಲ್‌ ರಜಾಕ್‌ ಹೊರ್ತಿ, ಉಮೇಶ ವಂದಾಲ, ಶಂಕರ ಕುಂಬಾರ ಸಹಮತ ವ್ಯಕ್ತಪಡಿಸಿದ್ದರು.

ಉಳಿದ ಸದಸ್ಯರು ಸಾಥ್‌ ನೀಡಿದರು. ಅದರಂತೆ 2010ರಲ್ಲಿ ಜಿಲ್ಲಾ ಕ್ರೀಡಾಂಗಣದ ಬಳಿ ಕನಕದಾಸ ವೃತ್ತ ನಿರ್ಮಾಣಕ್ಕೆ ಚಾಲನೆ ನೀಡಿದೆವು. ಅಪ್ಪು ಪಟ್ಟಣಶೆಟ್ಟಿ ವೃತ್ತ ಉದ್ಘಾಟಿಸಿದ್ದರು’ ಎಂದು ರಾಜು ಬಿರಾದಾರ ಕನಕ ವೃತ್ತದ ಇತಿಹಾಸ ನೆನಪು ಮಾಡಿಕೊಂಡರು.

‘ಉಳಿದ ವೃತ್ತಗಳಂತೆ ಕನಕದಾಸರ ವೃತ್ತ ನಿರ್ಮಿಸಬೇಕು ಎಂಬ ಕನಸಿತ್ತು. ಆದರೆ ಅದು ನೆರವೇರುವುದರೊಳಗಾಗಿ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿತು. ವೃತ್ತ ನಿರ್ಮಾಣದ ಕನಸು ಕಮರಿತು. ಹಲ ವರ್ಷಗಳ ಬಳಿಕ ವಿಜಯಪುರಿಗರಿಗೆ ಕನಕ ವೃತ್ತದ ನೆನಪಿರಲಿಲ್ಲ. ಈ ಬಾರಿ ಸಮಾಜದ ಯುವಕರು ರಸ್ತೆ ನಡುವೆಯೇ ವಿದ್ಯುತ್‌ ದೀಪದ ಸುತ್ತಲಿನ ಕಟ್ಟೆಗೆ ಕನಕದಾಸ ವೃತ್ತ ಎಂದು ಬರೆಯುವ ಮೂಲಕ ಇತಿಹಾಸವನ್ನು ನೆನಪಿಸುವ ಕೆಲಸ ಮಾಡಿದ್ದಾರೆ’ ಎಂದು ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು