ಪಾಸ್‌ವರ್ಡ್‌ ಸದ್ಯಕ್ಕಿಲ್ಲ ಮುಕ್ತಿ!

7

ಪಾಸ್‌ವರ್ಡ್‌ ಸದ್ಯಕ್ಕಿಲ್ಲ ಮುಕ್ತಿ!

Published:
Updated:
Deccan Herald

ಎಷ್ಟೂ ಅಂತ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ? ಲ್ಯಾಪ್‌ಟಾಪ್‌, ಮೊಬೈಲ್‌ ಬಳಸುತ್ತಿರುವ ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳುವ ಏಕೈಕ ಪ್ರಶ್ನೆ ಇದು. ತಂತ್ರಜ್ಞಾನ ಯುಗದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲೇಬೇಕು. ಹೀಗಾಗಿ ಪ್ರತಿಯೊಂದಕ್ಕೂ ಒಂದು ಪಾಸ್‌ವರ್ಡ್‌ ಇಡುವುದು, ಅದನ್ನು ನಿಯಮಿತವಾಗಿ ಬದಲಾಯಿಸುವ ಪ್ರಕ್ರಿಯೆ ಅನಿವಾರ್ಯ. 

ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಿಸಬೇಕಾಗಿ ಬಂದಾಗ ತಲೆಯೇ ಖಾಲಿಯಾಗಿದೆ ಅನ್ನಿಸುತ್ತದೆ. ಏಕೆಂದರೆ ಸಿಸ್ಟಂ, ಮೊಬೈಲ್‌, ಇ–ಮೇಲ್‌, ಫೇಸ್‌ಬುಕ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ .... ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ನೀಡುವುದು ಕಷ್ಟ ಕಷ್ಟ. ಅದು ಸರಳವಾಗಿಯೂ ಇರಬಾರದಲ್ಲಾ. ಹೆಸರಿನೊಂದಿಗೆ, ಮೊಬೈಲ್‌ ನಂಬರ್‌, ಇಸವಿ, ಜನ್ಮದಿನಾಂಕ ಇಟ್ಟುಕೊಂಡು ಒಮ್ಮೆ ಸೃಷ್ಟಿಸಿದ ಪಾಸ್‌ವರ್ಡ್‌ ಅನ್ನು ಮತ್ತೆ ಹಿಂದೆ ಮುಂದೆ ಮಾಡಿ ನೀಡಿದ ಮೇಲೂ ಮತ್ತೊಮ್ಮೆ ಹೊಸದಾಗಿ ಏನನ್ನು ನೀಡುವುದು ಎನ್ನುವುದು ಯಕ್ಷ ಪ್ರಶ್ನೆ. ಹೊಸತೇನಾದರೂ ನೀಡಿದರೆ ಅದು ಸುಲಭಕ್ಕೆ ನೆನಪಾಗುವುದಿಲ್ಲ ಎನ್ನುವ ಆತಂಕವೂ ಕಾಡುತ್ತದೆ. ಬರೆದಿಟ್ಟುಕೊಳ್ಳುವ ರೂಢಿ ಇದ್ದರೆ, ಪ್ರತಿ ಬಾರಿಯೂ ಅದನ್ನು ಜತೆಯಲ್ಲಿಯೇ ಇಟ್ಟುಕೊಳ್ಳಬೇಕು. ಒಂದೊಮ್ಮೆ ಬರೆದಿಟ್ಟಿದ್ದು ಬೇರೆಯವರ ಕೈಪಾಲಾದರೆ ಎನ್ನುವ ಭಯವೂ ಇರುತ್ತದೆ.

ಹಾಗಾದರೆ, ಈ ಪಾಸ್‌ವರ್ಡ್‌ಗಳಿಂದ ಮುಕ್ತ ಸಿಗುವುದೇ ಇಲ್ಲವೇ ಎಂದು ಕ್ಷಣಕ್ಕಾದರೂ ಅನ್ನಿಸದೇ ಇರದು. ಇನ್ನು ಐದುವರ್ಷಗಳವರೆಗಂತೂ ಅಂತಹ ಯೋಚನೆಯನ್ನೇ ಮಾಡಬೇಡಿ ಎನ್ನುತ್ತದೆ ಅಧ್ಯಯನ ವರದಿ.

‘ಐದು ವರ್ಷಗಳಲ್ಲಿ ಪಾಸ್‌ವರ್ಡ್‌ ಬಳಕೆ ಈಗಿರುವುದಕ್ಕಿಂತಲೂ ದುಪ್ಪಟ್ಟಾಗುತ್ತದೆ’ ಎನ್ನುತ್ತಾರೆ ಕನ್ಸ್ಯೂಮರ್‌ ಪಾಸ್‌ವರ್ಡ್‌ ಸೆಕ್ಯುರಿಟಿ ಕಂಪನಿ ಡ್ಯಾಷ್‌ಲೇನ್‌ನ ಮುಖ್ಯ ಕಾರ್ಯನಿರ್ವಾಹಕ ಇಮ್ಯಾನುಯೆಲ್‌ ಶಾಲಿತ್‌ (Schalit). ಪಾಸ್‌ವರ್ಡ್‌ಗಳು ಸಮಸ್ಯೆ ಅಲ್ಲ. ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆ ಎನ್ನುತ್ತಾರೆ ಶಾಲಿತ್‌.

ವಾಯ್ಸ್‌ ರೆಕಗ್ನಿಷನ್‌, ಫಿಂಗರ್‌ಪ್ರಿಂಟ್‌, ಫೇಸ್‌ ಐಡಿಯಂತಹ ಹೊಸ ತಂತ್ರಜ್ಞಾನಗಳ ಬಳಕೆ ಪಾಸ್‌ವರ್ಡ್‌ಗಳಿಗೆ ಪರ್ಯಾಯವಾಗುವತ್ತ ಹೆಜ್ಜೆ ಇಟ್ಟಿವೆ. ಆದರೆ, ಈ ತಂತ್ರಜ್ಞಾನಗಳು ಪೂರ್ಣ ಪ್ರಮಾಣದಲ್ಲಿ ಬರುವುದಕ್ಕೂ ಮೊದಲು ಪಾಸ್‌ವರ್ಡ್‌ಗಳ ಬಳಕೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಶಾಲಿತ್‌ ಮತ್ತು ಅವರ ತಜ್ಞರ ತಂಡ ಅಂದಾಜು ಮಾಡಿದೆ.

ಸಾರ್ವಜನಿಕ ಸೇವೆ, ಹೆಲ್ತ್‌ಕೇರ್‌, ಶಿಕ್ಷಣ ಹಾಗೂ ಚಿಲ್ಲರೆ ವಹಿವಾಟುಗಳಲ್ಲಿ ಗ್ರಾಹಕರು ಹೊಂದಿರುವ ಖಾತೆಗಳಿಗೆ ಸದ್ಯಕ್ಕೆ ಪಾಸ್‌ವರ್ಡ್‌ಗಳು ಸುರಕ್ಷತೆ ಒದಗಿಸುತ್ತಿವೆ. ಮನೆಗಳಲ್ಲಿ ಡಿಜಿಟಲ್‌ ಸಾಧನಗಳ ಬಳಕೆ ಹೆಚ್ಚುತ್ತಿದೆಯಾದರೂ ಸದ್ಯದ ಮಟ್ಟಿಗಂತೂ ಪಾಸ್‌ವರ್ಡ್‌ ಬಳಕೆ ಕಡಿಮೆಯಾಗುವ ಲಕ್ಷಣವೇ ಇಲ್ಲ ಎಂದಿದ್ದಾರೆ.

ನೆನಪಿನಲ್ಲಿ ಇಟ್ಟುಕೊಳ್ಳಲು ಸುಲಭ ಎನ್ನುವ ಕಾರಣಕ್ಕೆ ಸುಲಭವಾದ ಪಾಸ್‌ವರ್ಡ್ ನೀಡುವುದರಿಂದಷ್ಟೇ ಅಲ್ಲದೆ, ಒಮ್ಮೆ ಬಳಸಿದ ಪಾಸ್‌ವರ್ಡ್‌ ಮರುಬಳಕೆ ಮಾಡುವುದರಿಂದ ಆ ಖಾತೆಯ ಸುರಕ್ಷತೆಗೆ ಧಕ್ಕೆಯುಂಟಾಗುತ್ತದೆ ಎನ್ನುವುದು ತಜ್ಞರ ಎಚ್ಚರಿಕೆ. ಹೀಗೆ ಪಾಸ್‌ವರ್ಡ್‌ ಮರುಬಳಕೆ ಮಾಡುವ ಖಾತೆಗಳನ್ನು ಹ್ಯಾಕರ್‌ಗಳು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿಯೇ ಕೆಲವು ಹಣಕಾಸು ಸಂಸ್ಥೆಗಳು, ದೊಡ್ಡ ಚಿಲ್ಲರೆ ಮಳಿಗೆಗಳು ಮತ್ತು ಇತರೆ ವಾಣಿಜ್ಯ ಕಂಪನಿಗಳು ಫಿಂಗರ್‌ಪ್ರಿಂಟ್‌, ಐರಿಸ್‌, ವಾಯ್ಸ್‌ ಸ್ಕ್ಯಾನ್‌ ಮತ್ತು ಫೇಸ್‌ ರೆಕಗ್ನಿಷನ್‌ನಂತಹ ಬಯೋಮೆಟ್ರಿಕ್ ಸಾಧನಗಳನ್ನು ಬಳಸಲಾರಂಭಿಸಿವೆ. 

ಆದರೆ ಈ ಬಯೋಮೆಟ್ರಿಕ್‌ ಸಹ ಸಂಪೂರ್ಣವಾಗಿ ಸುರಕ್ಷಿತವಲ್ಲ. ಇದರಲ್ಲಿರುವ ಮಾಹಿತಿಗಳನ್ನು ಯಾರಾದರೂ ಕದ್ದರೆ, ರಹಸ್ಯ ಮಾಹಿತಿಗಳೆಲ್ಲವೂ ಸೋರಿಕೆಯಾಗುತ್ತದೆ ಎನ್ನುವುದು ತಜ್ಞರ ವಾದ. 2015ರಲ್ಲಿ ವಿದೇಶಿ ಹ್ಯಾಕರ್‌ಗಳು ಅಮೆರಿಕ ಸರ್ಕಾರದ ಮಾನವ ಸಂಪನ್ಮೂಲ ಕಚೇರಿಯಲ್ಲಿನ ಮಾಹಿತಿಗಳನ್ನು ಕದ್ದರು. ಆಗ, ಯೂಸರ್‌ ನೇಮ್‌, ಪಾಸ್‌ವರ್ಡ್‌, ಸಾಮಾಜಿಕ ಭದ್ರತಾ ಸಂಖ್ಯೆ ಮತ್ತು ಮನೆ ವಿಳಾಸಗಳ ಜತೆಗೆ 56 ಲಕ್ಷ ಫಿಂಗರ್‌ಪ್ರಿಂಟ್‌ಗಳನ್ನೂ ಕದ್ದೊಯ್ದಿದ್ದಾರೆ.

ಕೆಲವು ಕಂಪನಿಗಳು ಪಾಸ್‌ವರ್ಡ್‌ ನಿರ್ವಹಣಾ ವ್ಯವಸ್ಥೆ ಒದಗಿಸುತ್ತವೆ. ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ಖಾತೆಯ ಪಾಸ್‌ವರ್ಡ್‌ಗಳನ್ನೂ ಎನ್‌ಕ್ರಿಪ್ಟೆಡ್‌ ರೂಪದಲ್ಲಿ ಇಡಬಹುದು. ಮಾಸ್ಟರ್‌ ಪಾಸ್‌ವರ್ಡ್‌ನಿಂದ ಮಾತ್ರ ಆ ಪಾಸ್‌ವರ್ಡ್‌ಗಳನ್ನು ಪಡೆಯಲು ಸಾಧ್ಯ. LastPass, 1Password, Dashlane, LogmeOnce, True Key ವ್ಯವಸ್ಥೆ ಕಲ್ಪಿಸುವ ಪ್ರಮುಖ ಕಂಪನಿಗಳಾಗಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !