ಭಾನುವಾರ, ಆಗಸ್ಟ್ 18, 2019
23 °C
ಜಾಲಹಳ್ಳಿ ಪೊಲೀಸರಿಂದ ಮೂವರ ಬಂಧನ

1,204 ಕೆ.ಜಿ ರಕ್ತಚಂದನ ಜಪ್ತಿ

Published:
Updated:
Prajavani

ಬೆಂಗಳೂರು: ರಕ್ತಚಂದನ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು, 1,204 ಕೆ.ಜಿ ರಕ್ತಚಂದನ ಜಪ್ತಿ ಮಾಡಿದ್ದಾರೆ.

ಚನ್ನಪಟ್ಟಣದ ತಬ್ರೇಜ್ ಖಾನ್ ಅಲಿಯಾಸ್ ಬಬ್ಲು (24), ಬಶೀರ್‌ವುದ್ದೀನ್ (53) ಹಾಗೂ ಬೆಂಗಳೂರು ಆರ್‌.ಟಿ.ನಗರದ ಆದಿಲ್‌ ಪಾಷ (36) ಬಂಧಿತರು.

‘ರಕ್ತಚಂದನ ತುಂಡುಗಳ ಸಮೇತ ಇದೇ 2ರಂದು ನಗರಕ್ಕೆ ಬಂದಿದ್ದ ಆರೋಪಿಗಳು, ಠಾಣೆ ವ್ಯಾಪ್ತಿಯ ಎಚ್‌.ಎಂ.ಟಿ ಮೈದಾನ ಸಮೀಪದಲ್ಲಿ ನಿಂತುಕೊಂಡಿದ್ದರು. ರಕ್ತಚಂದನವನ್ನು ಮಾರಾಟ ಮಾಡಲು ಯಾರೋ ವ್ಯಾಪಾರಿಗಾಗಿ ಕಾಯುತ್ತಿದ್ದರು. ಅವರ ನಡೆ ಬಗ್ಗೆ ಅನುಮಾನಗೊಂಡ ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಬಶೀರ್‌ವುದ್ದೀನ್ ಎಂಬಾತ ನ್ಯಾಯಾಂಗ ಬಂಧನದಲ್ಲಿದ್ದಾನೆ. ತಬ್ರೇಜ್ ಖಾನ್ ಹಾಗೂ ಆದಿಲ್‌ ಪಾಷನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಜೆ.ಪಿ. ನಗರದ ನಿವಾಸಿಯೊಬ್ಬ, ರಕ್ತಚಂದನದ ತುಂಡುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಆತನಿಂದಲೇ ತುಂಡುಗಳನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆ ನಿವಾಸಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. 

Post Comments (+)