ಭಾನುವಾರ, ಡಿಸೆಂಬರ್ 8, 2019
21 °C

ಇದು ರಾಕ್ಷಸ ಸರ್ಕಾರ, ಸಿಎಂ ವಿಷಸರ್ಪ: ಎಚ್‌ಡಿಕೆ ವಿರುದ್ಧ ರೆಡ್ಡಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಾವಿನ ದ್ವೇಷ 12 ವರುಷ. ಅದೇ ರೀತಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ದ್ವೇಷವೂ 12 ವರುಷ. ಚಂಡವ್ಯಾಘ್ರನೇ, ಎಲ್ಲಿದ್ದರೂ ನೀನುಂಡು ಸುಖವಾಗಿರು. ನಿನ್ನದು ಒಂದು ರಾಕ್ಷಸ ಸರ್ಕಾರ...’

ಇದು, ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ ಪರಿ. ರಾತ್ರಿ 7.30ಕ್ಕೆ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದ ಅವರು, ಸುಮಾರು ಅರ್ಧ ತಾಸು ಮಾತಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಇದನ್ನೂ ಓದಿ: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣ: ಜನಾರ್ದನರೆಡ್ಡಿಗೆ ಜಾಮೀನು

‘ಸತ್ಯವೇ ನಮ್ಮ ತಾಯಿತಂದೆ. ಸತ್ಯವೇ ನಮ್ಮ ಬಂಧು ಬಳಗ’ ಎಂದು ಪುಣ್ಯಕೋಟಿ ಕತೆಯ ಸಾಲುಗಳನ್ನು ಹೇಳುತ್ತಲೇ ಮಾತು ಪ್ರಾರಂಭಿಸಿದ ರೆಡ್ಡಿ,‌ ಪ್ರತಿ ಮಾತಿನಲ್ಲೂ ಮುಖ್ಯಮಂತ್ರಿ ಹಾಗೂ ಸಿಸಿಬಿ ವಿರುದ್ಧ ಕಿಡಿಕಾರಿದರು.

ಆ ‘ಕಿಡಿ’ಯ ಪೂರ್ಣಪಾಠ: ‘2006ರಲ್ಲಿ ನಾನು ಕುಮಾರಸ್ವಾಮಿ ವಿರುದ್ಧ ₹ 150 ಕೋಟಿಯ ಲಂಚದ ಆರೋಪ ಮಾಡಿದ್ದೆ. ಅದು ಈಗಲೂ ಸುಪ್ರೀಂಕೋರ್ಟ್‌ನಲ್ಲಿದೆ. ಅದಕ್ಕೆ ಈಗ ಹಾವಿನ ರೀತಿಯಲ್ಲಿ ವಿಷ ಕಕ್ಕಿದ್ದಾರೆ.’

‘ಕುಮಾರಸ್ವಾಮಿ ಅವರೇ. 12 ವರ್ಷಗಳ ಹಿಂದೆ ನನ್ನ ವಿರುದ್ಧ ಬಳ್ಳಾರಿಯಲ್ಲಿ ಒಂದು ಸುಳ್ಳು ಕೇಸ್ ಹಾಕಿಸಿದ್ರಿ. ಆರು ಜಿಲ್ಲೆಗಳಿಂದ 1,500 ಪೊಲೀಸರನ್ನು ಕರೆಸಿ ಬಂಧಿಸುವುದಕ್ಕೂ ಮುಂದಾಗಿದ್ರಿ. ಆ ಆಸೆಯನ್ನು ಕೊನೆಗೂ ತೀರಿಸಿಕೊಂಡುಬಿಟ್ರಿ.’

‘ನಿಮ್ಮ ಅಧಿಕಾರ ಶಾಶ್ವತ ಅಲ್ಲ. ಕಡಿಮೆ ಸೀಟು ತಗೋಂಡಿದ್ದರೂ, ನಿಮಗೆ ಲಾಟರಿ ಹೊಡೆದಿದೆ ಅಷ್ಟೆ. ಈ ರೀತಿ ಪದೇ ಪದೇ ಆತಂಕ ಸೃಷ್ಟಿಸುವುದರಿಂದ ಏನೂ ಸಾಧಿಸೋಕೆ ಆಗಲ್ಲ. ನನ್ನನ್ನು ಪಲಾಯನ ಮಾಡಬಹುದು ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಅಷ್ಟೆ. ಆರು ತಿಂಗಳು ಅಧಿಕಾರ ಚಲಾಯಿಸ್ತೀರೋ, ಐದು ವರ್ಷ ಪೂರೈಸ್ತೀರೋ ಗೊತ್ತಿಲ್ಲ. ಆದರೆ, ಇವತ್ತು ನನ್ನ ತಂಟೆಗೆ ಬಂದಿದ್ದಕ್ಕೆ ಸೇಡು ತೀರಿಸಿಕೊಂಡೇ ತೀರುತ್ತೇನೆ’ ಎಂದು ಶಪಥ ಮಾಡಿದರು.

ಕಾಶ್ಮೀರಕ್ಕೆ ಕಳಿಸಿ: ‘ನಿಮ್ಮ ಕೈಕೆಳಗಿರುವ ಸನ್ಮಾನ್ಯ ಅಲೋಕ್‌ಕುಮಾರ್ ಹಾಗೂ ಡಿಸಿಪಿ ಗಿರೀಶ್ ತುಂಬಾ ಪ್ರಾಮಾಣಿಕ ಅಧಿಕಾರಿಗಳು. ಕರ್ನಾಟಕ ರಾಜ್ಯಕ್ಕೆ ಇಷ್ಟೊಂದು ನಿಷ್ಠೆಯ ಅಧಿಕಾರಿಗಳ ಅವಶ್ಯಕತೆ ಇಲ್ಲ. ಬಹಳ ಪ್ರಮಾದಕರ ಘಟನೆಗಳು ನಡೆಯುವ ಜಮ್ಮು–ಕಾಶ್ಮೀರಕ್ಕೆ ಇಂಥವರನ್ನು ಹಾಕಿದರೆ ಇಡೀ ದೇಶವೇ ನಿಮ್ಮನ್ನು ಕೊಂಡಾಡತ್ತೆ.’

‘ಯಾವುದೋ ಹುಡುಗ ಬಜಾರ್‌ನಲ್ಲಿ ಪಿಕ್‌ಪಾಕೆಟ್ ಮಾಡಿದರೂ ಪರ್ಸ್ ಅಥವಾ ಹಣ ಸಾಕ್ಷ್ಯವಾಗಿ ಸಿಗುತ್ತದೆ. ವಿಚಾರಣೆ ನೆಪದಲ್ಲಿ ಈ ರೆಡ್ಡಿಯನ್ನು 23 ಗಂಟೆ ಕಚೇರಿಯಲ್ಲೇ ಕೂರಿಸಿಕೊಂಡಿದ್ದ ನಿಮಗೆ ನನ್ನ ಬಳಿ ಏನು ಸಿಕ್ಕಿತು? ಈಗ ತಲೆ ತಗ್ಗಿಸುವಂಥ ಸ್ಥಿತಿ ತಂದುಕೊಂಡಿರಿ. ನಾನು ಮಂತ್ರಿಯಾಗಿದ್ದಾಗಲೇ ಸಿಸಿಬಿ ಅನುಭವ ಗೊತ್ತಾಗಿದ್ರೆ, ಆಗಲೇ ಅದನ್ನು ಬದಲಾಯಿಸಿಬಿಡುತ್ತಿದ್ದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನವೀಯತೆ ಮುಳುವಾಯ್ತು: ‘ಆ್ಯಂಬಿಡೆಂಟ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ಆಲಿಖಾನ್‌ನ ಸೋದರ ಮಾವ, ತಾವು ಮೋಸ ಹೋಗಿದ್ದನ್ನು ಅರಿತು ಹಾಸಿಗೆ ಹಿಡಿದಿದ್ದರು.  ಈ ವಿಷಯ ತಿಳಿದು ಕುಪಿತಗೊಂಡ ಆಲಿಖಾನ್, ಕಂಪನಿ ಕಚೇರಿಗೆ ಹೋಗಿ ಗಲಾಟೆ ಮಾಡಿ ಬಂದಿದ್ದ. ದೂರು ಕೊಡಲೂ ನಿರ್ಧರಿಸಿದ್ದ.’

‘ಈ ಸಂದರ್ಭದಲ್ಲಿ ಬ್ರಿಜೇಶ್ ರೆಡ್ಡಿ ಎಂಬಾತ ತಾಜ್‌ ವೆಸ್ಟೆಂಡ್ ಹೋಟೆಲ್‌ಗೆ ಬಂದು ನನ್ನನ್ನು ಭೇಟಿಯಾದ. ‘ಅಣ್ಣ.. ಆಲಿಖಾನ್ ದೂರು ಕೊಟ್ಟರೆ ಹೂಡಿಕೆದಾರರೆಲ್ಲ ಮುಗಿಬೀಳುತ್ತಾರೆ. ಸಂಸ್ಥೆಯೇ ಮುಚ್ಚುವಂಥ ಪರಿಸ್ಥಿತಿ ಬರುತ್ತದೆ. ನೀವೇ ಏನಾದರೂ ಮಾಡಿ. ನಮ್ಮಲ್ಲಿ ಹೂಡಿಕೆ ಮಾಡಿರುವ ಎಲ್ಲರಿಗೂ ಹಣ ಮರಳಿಸುತ್ತೇವೆ. ಈ ವಿಚಾರವನ್ನು ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೂ ತಂದಿದ್ದೇವೆ’ ಎಂದು ಕೇಳಿಕೊಂಡ. ಮಾನವೀಯತೆ ದೃಷ್ಟಿಯಿಂದ ಒಪ್ಪಿಕೊಂಡಿದ್ದೆ. ಆಗ ಶಾಲು ಹೊದಿಸಿ ಸನ್ಮಾನ ಮಾಡಿದ್ದರು. ಈಗ ಅದೇ ಫೋಟೊ ಇಟ್ಟುಕೊಂಡು ಆಟ ಆಡುತ್ತಿದ್ದಾರೆ.’

‘ಆ್ಯಂಬಿಡೆಂಟ್ ವಿರುದ್ಧ ಮೊದಲ ಪ್ರಕರಣ ದಾಖಲಾದಾಗ ಮುಖ್ಯಮಂತ್ರಿ ಯಾರಿದ್ದರು, ಗೃಹಸಚಿವರು ಯಾರಿದ್ದರು, ಸ್ಥಳೀಯ ಶಾಸಕರು ಯಾರಿದ್ದರು ಎಂಬುದನ್ನು ಗಮನಿಸಬೇಕು. ಇಷ್ಟು ದಿನವಾದರೂ ಏಕೆ ಬಂಧಿಸಲಿಲ್ಲ ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲವೂ ಅರ್ಥವಾಗಿಬಿಡುತ್ತದೆ’ ಎಂದರು.

ಸುದ್ದಿಗಳಿಗೂ ಅಸಮಾಧಾನ: ‘ಗಾಲಿ ದಿವಾಳಿ’, ‘ಜೈಲಲ್ಲಿ ಕೂತು ಡೀಲ್‌ಗೆ ಕೈ ಹಾಕಿದ್ರಾ ರೆಡ್ಡಿ’ ಎಂದು ಕೆಲ ಮಾಧ್ಯಮಗಳು ನನ್ನನ್ನು ಕೆಟ್ಟದಾಗಿ ಬಿಂಬಿಸಿವೆ.’

‌‘ನಾನು ನ.4ರವರೆಗೂ ಮೊಳಕಾಲ್ಮುರಿನಲ್ಲೇ ಇದ್ದೆ. ಮರುದಿನ ಬೆಂಗಳೂರಿಗೆ ಬಂದು ನನ್ನ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಉಳಿದುಕೊಂಡಿದ್ದೆ. ಆದರೂ ‘ರೆಡ್ಡಿ ನಾಪತ್ತೆ’ ಎಂದು ಮಾಧ್ಯಮಗಳು ವರದಿ ಮಾಡಿದವು. ನಾನು ಸಿಬಿಐ ಪ್ರಕರಣದಲ್ಲಿ ಬಂಧಿತನಾಗಿರುವವನು. ನನ್ನ ಬಳಿ ಪಾಸ್‌ಪೋರ್ಟ್ ಇಲ್ಲ. ಬಳ್ಳಾರಿಗೂ ಹೋಗುವಂತಿಲ್ಲ. ಇನ್ನೆಲ್ಲಿಗೆ ಹೋಗಿ ಸಾಯಲಿ ಹೇಳಿ?’

‘ಎಲ್ಲ ತಾಪತ್ರಯಗಳನ್ನೂ ಬಿಟ್ಟು ಸುಮ್ಮನಾಗಿದ್ದ ನಾನು, ಆತ್ಮೀಯ ಗೆಳೆಯನಿಗೋಸ್ಕರ ಚುನಾವಣೆ ಸಂದರ್ಭದಲ್ಲಿ ಮೊಳಕಾಲ್ಮುರಿಗೆ ಹೋದೆ. ಆಗಿನಿಂದಲೂ ನನ್ನ ಸುತ್ತ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದವು. ಹುಷಾರಾಗಿರುವಂತೆ ಆಪ್ತ ಪೊಲೀಸರೇ ನನಗೆ ಹೇಳಿದ್ದರು. ಸಿಸಿಬಿ ಪ್ರವೇಶವಾದ ಬಳಿಕ ಆ ಚಟುವಟಿಕೆಗಳು ಏನು ಎಂಬುದು ಅರಿವಾಯಿತು. ನನ್ನ ಬಂಧನದಿಂದ ಕುಮಾರಸ್ವಾಮಿಗೆ ರಾಕ್ಷಸ ಖುಷಿ ಸಿಗಬಹುದಷ್ಟೇ’ ಎಂದು ಹೇಳಿದರು.

‘ನನಗೆ ರಾಜಕೀಯ ಜನ್ಮ ನೀಡಿದ ಅಣ್ಣ ಅನಂತ್‌ಕುಮಾರ್. ಕೊನೆಯದಾಗಿ ಅವರ ಮುಖ ನೋಡುವ ಅವಕಾಶವನ್ನೂ ಈ ವ್ಯವಸ್ಥೆ ನೀಡಲಿಲ್ಲ’ ಎನ್ನುತ್ತ ದುಃಖತಪ್ತರಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು