7

ಕಲ್ಪನಾ ಚಾವ್ಲಾ ನೆನಪಿನಲ್ಲಿ ನಾಳೆ ‘ಶಕ್ತಿ4ಬೇಟಿ’ ದಿನ

Published:
Updated:
ಕಲ್ಪನಾ ಚಾವ್ಲಾ

ಅಂತರರಾಷ್ಟ್ರೀಯ ಖ್ಯಾತಿಯ ಗಗನಯಾತ್ರಿ ದಿ.ಕಲ್ಪನಾ ಚಾವ್ಲಾ, ಹೆಣ್ಣುಮಕ್ಕಳಿಗೆ ಅಪೂರ್ವ ಮಾದರಿ ಎನಿಸಿದ್ದಾರೆ. ಹಿಡಿದಿಟ್ಟ ವ್ಯವಸ್ಥೆಯಿಂದ ಕನಸು, ನಿರೀಕ್ಷೆಯ ಆಗಸಕ್ಕೆ ಲಕ್ಷಾಂತರ ಭಾರತೀಯ ಹೆಣ್ಣುಮಕ್ಕಳು ಪುಟಿಯಲು ಚೈತನ್ಯದ ಚಿಲುಮೆ ಆಗಿದ್ದಾರೆ. ಆಕೆ ಹುಟ್ಟಿದ ದಿನವನ್ನು (ಜುಲೈ 1) ‘ಮಗಳ ದಿನ’ ಆಗಿ ಆಚರಿಸಲಾಗುತ್ತದೆ.

‘ಮಗಳಿಗೆ’ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಪಬ್ಲಿಕ್‌ ರಿಲೇಶನ್ಸ್‌ ಕೌನ್ಸಿಲ್‌ ಆಫ್ ಇಂಡಿಯಾದ (ಪಿಆರ್‌ಸಿಐ) ಬೆಂಗಳೂರು ಘಟಕ ಮತ್ತು ಯಂಗ್‌ ಕಮ್ಯೂನಿಕೇಟರ್ಸ್‌ ಕ್ಲಬ್‌ (ವೈಸಿಸಿ) ಜಂಟಿಯಾಗಿ ‘ಶಕ್ತಿ4ಬೇಟಿ’ ಕಾರ್ಯಕ್ರಮವನ್ನು ಭಾನುವಾರ (ಜುಲೈ 1) ಆಚರಿಸಲು ತೀರ್ಮಾನಿಸಿದೆ. ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ಗಂಟೆವರೆಗೆ ಈ ಕಾರ್ಯಕ್ರಮ ನಡೆಯಲಿದೆ. ವೃತ್ತಿ– ಸಾಮಾಜಿಕ ಬದುಕಿನಲ್ಲಿ ‘ಮಾದರಿ’ ಸಾಧನೆ ಮಾಡಿದ ಮ‌ಹಿಳೆಯರನ್ನು ಸನ್ಮಾನಿಸುವ ಮೂಲಕ ಇತರರಿಗೆ ಪರಿಚಯಿಸುವ ಕೆಲಸಕ್ಕೂ ಈ ಸಂಸ್ಥೆಗಳು ಮುಂದಾಗಿವೆ. ಜೊತೆಗೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿವೆ. 

ಕಲ್ಪನಾ ನೆನಪಿಗಾಗಿ ‘ಮಗಳ ದಿನ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಕರೆ ನೀಡಿದ್ದರು. ಹೆಣ್ಣು ಮಕ್ಕಳ ಭದ್ರತೆಗಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ಕೂಡಾ ಅದರ ಭಾಗವಾಗಿಯೇ ಅವರು ಆರಂಭಿಸಿದ್ದರು. ಆ ವರ್ಷ ಜುಲೈ ತಿಂಗಳಿಡೀ ಅನೇಕ ಸಂಘ ಸಂಸ್ಥೆಗಳು ಕಲ್ಪನಾ ಚಾವ್ಲಾ ಅವರ ಜನ್ಮ ದಿನೋತ್ಸವವನ್ನು ‘ಮಗಳ ದಿನ’ ಹೆಸರಿನಲ್ಲಿ ಆಚರಿಸಿವೆ. ಆದರೆ, ಆ ನಂತರದ ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಾಗಲಿ, ಸಂಘ-ಸಂಸ್ಥೆಗಳಾಗಲಿ ಈ ದಿನಕ್ಕೆ ಅಂಥ ಮಹತ್ವ ನೀಡಿಲ್ಲ ಎನ್ನುವುದು ವಾಸ್ತವ.

‘ಈ ಬಾರಿ, ಈ ದಿನವನ್ನು ನಮ್ಮ ಸಂಸ್ಥೆಯ ವತಿಯಿಂದ ವಿಭಿನ್ನವಾಗಿ ಆಚರಿಸಲು ಉದ್ದೇಶಿಸಿದ್ದೇವೆ. ವೈಸಿಸಿ ಸಂಸ್ಥೆಯ ಸಹಯೋಗದಲ್ಲಿ ಬಾಲಕಿಯರಿಗಾಗಿ ‘ಸ್ವಾಭಿಮಾನ’ ಎಂಬ ರಾಷ್ಟ್ರೀಯ ಅಭಿಯಾನ ಆರಂಭಿಸಲಾಗುತ್ತಿದೆ. ಹೆಣ್ಣು ಮಕ್ಕಳಲ್ಲಿ ಸ್ವಯಂ ಗೌರವ, ಸಶಕ್ತೀಕರಣದ ಅರಿವು ಮೂಡಿಸುವ ನಿಟ್ಟಿನಲ್ಲಿ ಇದು ಹೊಸ ಹೆಜ್ಜೆ’ ಎನ್ನುತ್ತಾರೆ ಪಿಆರ್‌ಸಿಐ (ಬೆಂಗಳೂರು ಘಟಕ) ಅಧ್ಯಕ್ಷೆ ಟಿ.ಎಸ್‌. ಲತಾ.

‘ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ಕೆಲವು ಸಂಕಲ್ಪಗಳನ್ನು ಮಾಡಬೇಕಿದೆ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಜಾಗೃತಿ ಮೂಡಿಸಬೇಕು. ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಕೀಳರಿಮೆ ಬಾರದಂತೆ ಬೆಳೆಸಲು ಸಾಮಾಜಿಕ ಭದ್ರತೆ ನೀಡಬೇಕು. ಅವರನ್ನು ವಿಚಾರವಂತರನ್ನಾಗಿ ಮಾಡಿ ಸಾಮಾಜಿಕ ಅನಿಷ್ಠಗಳು, ಮೂಡನಂಬಿಕೆಗಳ ವಿರುದ್ಧ ಹೋರಾಡುವಂತೆ ಪ್ರೇರೇಪಿಸಬೇಕಿದೆ. ಕುಟುಂಬ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳ ಅಭಿಪ್ರಾಯಕ್ಕೆ ಗೌರವ, ಮನ್ನಣೆ ಸಿಗಬೇಕು. ಕೌಟುಂಬಿಕ ನಿರ್ಧಾರಗಳಲ್ಲಿ ಅವರ ಪಾತ್ರ ಮತ್ತು ಮಹತ್ವವನ್ನು ಎತ್ತಿ ಹಿಡಿಯಬೇಕು. ಆ ನಿಟ್ಟಿನಲ್ಲಿ, ನಮ್ಮ ಕಾರ್ಯಕ್ರಮ ಪ್ರೇರಣೆ ಆಗಬೇಕೆಂಬುವುದು ನಮ್ಮ ಉದ್ದೇಶ’ ಎಂದೂ ಅವರು ಹೇಳುತ್ತಾರೆ.

ಏನಿದು ಪಿಆರ್‌ಸಿಐ?: ಸಾರ್ವಜನಿಕ ಸಂಪರ್ಕ ವೃತ್ತಿನಿರತರು, ಸಂವಹನಕಾರರು, ಜಾಹೀರಾತು, ಸಾರ್ವಜನಿಕ ಸಂಪರ್ಕ ಅಕಾಡೆಮಿಗಳು ಮತ್ತು ಅದಕ್ಕೆ ಸಂಬಂಧಿಸಿದ ಸೇವೆ ನೀಡುವವರು ಕಟ್ಟಿದ ಸಂಸ್ಥೆ– ಪಬ್ಲಿಕ್‌ ರಿಲೇಶನ್ಸ್‌ ಕೌನ್ಸಿಲ್‌ ಆಫ್ ಇಂಡಿಯಾ (ಪಿಆರ್‌ಸಿಐ). ದೇಶದ ಪ್ರಮುಖ ನಗರಗಳಲ್ಲಿ ಸೇರಿ ಒಟ್ಟು 29 ಘಟಕಗಳನ್ನು ಹೊಂದಿದೆ. ಸಾಮಾಜಿಕ ಉದ್ದೇಶ, ನ್ಯಾಯಕ್ಕಾಗಿ ದುಡಿಯುವರಿಗೆ ಪ್ರೋತ್ಸಾಹ ನೀಡುವ ಜೊತೆಗೆ ನಿರಂತರ ಚಟುವಟಿಕೆಯಿಂದಿರುವುದು ಸಂಸ್ಥೆಯ ಧ್ಯೇಯ ಎನ್ನುತ್ತಾರೆ ಲತಾ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !