ವಿಜಯಪುರ: ವಿಡಿಯೊ ಮೂಲಕ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಮನವಿ

7
ವಿಜಯಪುರ ತಾಲ್ಲೂಕು ಹಂಚಿನಾಳ ಲಂಬಾಣಿ ತಾಂಡಾದಲ್ಲಿ ಬಹಿಷ್ಕಾರ; ಯುವತಿಯಿಂದ ಆತ್ಮಹತ್ಯೆ ಯತ್ನ

ವಿಜಯಪುರ: ವಿಡಿಯೊ ಮೂಲಕ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಮನವಿ

Published:
Updated:

ವಿಜಯಪುರ: ವಿಜಯಪುರ ತಾಲ್ಲೂಕು ಹಂಚಿನಾಳ ಲಂಬಾಣಿ ತಾಂಡಾದ ಸರಪಂಚರು ತನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರಿಂದ ಬೇಸತ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು, ಆತ್ಮಹತ್ಯೆಗೆ ಸೋಮವಾರ ರಾತ್ರಿ ಯತ್ನಿಸಿದ್ದು, ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಹಂಚಿನಾಳ ತಾಂಡಾದ ಲತಾ ಚಂದು ಚವ್ಹಾಣ (18) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಇದೀಗ ಈಕೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಚೇತರಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಕುಟುಂಬಕ್ಕೆ ಹಾಕಿದ್ದ ಬಹಿಷ್ಕಾರದಿಂದ ಬೇಸತ್ತಿದ್ದ ಯುವತಿ, ಸೋಮವಾರ ರಾತ್ರಿ ಮೊಬೈಲ್‌ನಲ್ಲಿ ವಿಡಿಯೊ ಹೇಳಿಕೆ ದಾಖಲಿಸಿದ್ದು, ಈ ಸಂದರ್ಭವೇ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 3.47 ನಿಮಿಷದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡಲಾರಂಭಿಸಿದೆ.

ವಿಡಿಯೊದಲ್ಲಿರುವುದು: ‘ತಾಂಡಾದಲ್ಲಿರುವ ನನ್ನ ಕುಟುಂಬಕ್ಕೆ ಸರಪಂಚರು ಬಹಿಷ್ಕಾರ ಹಾಕಿದ್ದಾರೆ. ಇದರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಜಿಲ್ಲಾಡಳಿತ, ಪೊಲೀಸರು ಸೇರಿದಂತೆ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಸಹ ಬಹಿಷ್ಕಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಪೊಲೀಸರಿಗೆ ಸಹಕರಿಸದಂತೆ ಸೂಚಿಸಿದ್ದಾರೆ.

ಇದೀಗ ನಾನು ಕಾಲೇಜಿಗೆ ಹೋಗಿ ಬರಲು ಅಡ್ಡಿಪಡಿಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಈ ಹಿಂದೆಯೇ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಮಂತ್ರಿ ಮೋದಿ ಅವರಿಗೆ ಪತ್ರ ಬರೆದಿದ್ದೆ.

ಇಡೀ ತಾಂಡಾವೇ ನಮ್ಮ ವಿರುದ್ಧ ಇದೆ. ಬಹಿಷ್ಕಾರ ಹಾಕಿರುವುದರಿಂದ ಯಾರೊಬ್ಬರು ನಮಗೆ ಸಹಕಾರ ನೀಡುತ್ತಿಲ್ಲ. ಮಾತನಾಡಿಸುತ್ತಿಲ್ಲ. ಎಲ್ಲರೂ ಎಂ.ಬಿ.ಪಾಟೀಲ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿಜೀ. ನಿಮಗೆ ನನ್ನ ಪ್ರಣಾಮಗಳು. ನಿಮ್ಮ ‘ಬೇಟಿ ಬಚಾವೋ–ಬೇಟಿ ಪಡಾವೋ’ ಯೋಜನೆ ಏನಾಯ್ತು ? ನಾ ಆತ್ಮಹತ್ಯೆ ಮಾಡಿಕೊಳ್ಳುವೆ. ನನ್ನ ಪರಿವಾರಕ್ಕಾದರೂ ನೀವು ನ್ಯಾಯ ಒದಗಿಸಿ’ ಎಂದು ಲತಾ ಕೈ ಮುಗಿದು ಮನವಿ ಸಲ್ಲಿಸುತ್ತಿರುವ ವಿಡಿಯೊ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಜಮೀನಿನ ವಿವಾದವಿದು; ಬಹಿಷ್ಕಾರವಲ್ಲ
‘ಸಾಮಾಜಿಕ ಬಹಿಷ್ಕಾರ ಹಂಚಿನಾಳ ತಾಂಡಾದಲ್ಲಿ ನಡೆದಿಲ್ಲ. ಇದೊಂದು ದಾಯಾದಿಗಳ ನಡುವಿನ ಜಮೀನಿನ ವಿವಾದದ ಹಳೆಯ ಪ್ರಕರಣ. ಇದೀಗ ಸಿವಿಲ್‌ ನ್ಯಾಯಾಲಯದಲ್ಲಿದೆ.

ವಿಡಿಯೊ ಹೇಳಿಕೆ ದಾಖಲಿಸಿರುವ ಯುವತಿ ಲತಾ ಚಂದು ಚವ್ಹಾಣಳ ತಂದೆ ಚಂದು ಚವ್ಹಾಣ ಹಾಗೂ ಈತನ ಸಹೋದರ ಪದ್ದು ಚವ್ಹಾಣರ ನಡುವಿನ ಜಮೀನಿನ ವಿವಾದವಿದು. ಈ ಹಿಂದೆ ಸಹ ಪಿಎಸ್‌ಐ, ಸಿಪಿಐ, ವಿಜಯಪುರ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಾಂಡಾಗೆ ಭೇಟಿ ನೀಡಿ, ಕುಟುಂಬದವರ ಜತೆ ಚರ್ಚಿಸಿದ್ದಾರೆ. ಎರಡೂ ಕಡೆ ಮಾತನಾಡಿದ್ದಾರೆ. ಇದಕ್ಕೆ ದಾಖಲೆಗಳು ಲಭ್ಯವಿವೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಮಂಗಳವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೊಬ್ಬ ರಾಜಕಾರಣಿಯಿಂದಲೂ ಒತ್ತಡ ಬಂದಿಲ್ಲ. ಯುವತಿ ಅಸ್ವಸ್ಥಗೊಂಡಿದ್ದಾಳೆ. ಚೇತರಿಸಿಕೊಂಡ ಬಳಿಕ, ವೈದ್ಯರ ಅನುಮತಿ ಮೇರೆಗೆ ಹೇಳಿಕೆ ಪಡೆದುಕೊಳ್ಳುತ್ತೇವೆ. ಯುವತಿ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ. ಕಾಲೇಜಿಗೆ ಹೋಗಿ ಬರಲು ಅಡ್ಡಿಪಡಿಸಿದ್ದರೆ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !