ಸಿಬಿಐ ಪ್ರಕರಣ ರದ್ದು ಕೋರಿ ಅರ್ಜಿ

7
190 ಕೋಟಿ ವಂಚನೆ: ನಾರಾಯಣ ರೆಡ್ಡಿ ವಿರುದ್ಧ ಆರೋಪ

ಸಿಬಿಐ ಪ್ರಕರಣ ರದ್ದು ಕೋರಿ ಅರ್ಜಿ

Published:
Updated:
Prajavani

ಬೆಂಗಳೂರು: ಆರ್ಥಿಕ ಅಪರಾಧಗಳಡಿ ಬಂಧನಕ್ಕೆ ಒಳಗಾಗಿರುವ ತೆಲುಗುದೇಶಂ ಪಕ್ಷದ (ಟಿಡಿಪಿ) ವಿಧಾನ ಪರಿಷತ್ ಸದಸ್ಯ ವಕಟಿ ನಾರಾಯಣ ರೆಡ್ಡಿ, ‘ನನ್ನ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು‘ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ’ಅರ್ಜಿದಾರರು ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿರುವ ಅಂಶಗಳ ಬಗ್ಗೆ ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡಿ’ ಎಂದು ಸಿಬಿಐ ಪರ ವಕೀಲರಿಗೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ‘ನಿಯಮದಂತೆ ಕೈಗಾರಿಕೆಗಳಿಗೆ ಸಾಲ ಪಡೆಯಬೇಕಾದರೆ ಸಾಲ ಪಡೆಯುವ ಮೊತ್ತಕ್ಕೆ ಎರಡು ಪಟ್ಟು ಹೆಚ್ಚಿನ ಆಸ್ತಿಯನ್ನು ಖಾತ್ರಿಯಾಗಿ ನೀಡಬೇಕು. ಆದರೆ, ರೆಡ್ಡಿ ಬೆಂಗಳೂರಿನ ಇಂಡಸ್ಟ್ರಿಯಲ್‌ ಫೈನಾನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಐಎಫ್‌ಸಿಐ) ಶಾಖೆಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ಗೆ ₹ 5.7 ಕೋಟಿ ಲಂಚ ನೀಡಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ದೂರಿದರು.

‘ರೆಡ್ಡಿ ತಮ್ಮ ವೈಯಕ್ತಿಕ ಖಾತೆ ಬಳಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ವಂಚನೆ ಎಸಗಿದ್ದಾರೆ. ಆದ್ದರಿಂದ ಅರ್ಜಿಯನ್ನು ವಜಾ ಮಾಡಬೇಕು‘ ಎಂದು ಕೋರಿದರು.‍

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದಾಖಲೆಗಳ ಹಾಜರಾತಿಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದೆ.

ಪ್ರಕರಣವೇನು ?: ‘ವಕಟಿ ನಾರಾಯಣ ರೆಡ್ಡಿ ಹೈದರಾಬಾದ್‌ನಲ್ಲಿರುವ ವಿಎನ್‌ಆರ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು. ಬೆಂಗಳೂರಿನ  ಐಎಫ್‌ಸಿಐ ಯಿಂದ 2014-15ರಲ್ಲಿ ₹ 190 ಕೋಟಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು. ಆದರೆ, ಇನ್ನೂ ಆ ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ₹ 205 ಕೋಟಿ ವಂಚನೆ ಆಗಿದೆ‘ ಎಂಬುದು ಸಿಬಿಐ ಆರೋಪ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಕಟಿ ನಾರಾಯಣ ರೆಡ್ಡಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಇವರ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಕೆಲವು ತಿಂಗಳ ಹಿಂದಷ್ಟೇ ವಜಾಗೊಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !