ನಿವೃತ್ತಿವರೆಗೂ ಸೇವಾ ಭದ್ರತೆಗೆ ಹೊರಗುತ್ತಿಗೆ ನೌಕರರಿಂದ ಆಗ್ರಹ

7
ಹೊರಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ನಿವೃತ್ತಿವರೆಗೂ ಸೇವಾ ಭದ್ರತೆಗೆ ಹೊರಗುತ್ತಿಗೆ ನೌಕರರಿಂದ ಆಗ್ರಹ

Published:
Updated:
Prajavani

ಬೆಂಗಳೂರು: ಸರ್ಕಾರಿ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಡುಗೆ ತಯಾರಕರು ಮತ್ತು ಸಹಾಯಕರಿಗೆ ನಿವೃತ್ತಿವರೆಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ‘ಹೊರಗುತ್ತಿಗೆ ನೌಕರರು’ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.

‘ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ’ದ ನೇತೃತ್ವದಲ್ಲಿ ಹೊರಗುತ್ತಿಗೆ ಸಿಬ್ಬಂದಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಗಳಡಿ ಅಡುಗೆ ತಯಾರಕರು, ಸಹಾಯಕರು ಮತ್ತು ಕಾವಲುಗಾರರ ಹುದ್ದೆಗೆ 5 ಸಾವಿರ ನೌಕರರನ್ನು ಕಾಯಂ ಮಾಡಿಕೊಂಡು ಹೊರಗುತ್ತಿಗೆ ನೌಕರರನ್ನು ಕೈಬಿಡಲಾಗಿದೆ. ಇದೇ ಉದ್ಯೋಗ ನಂಬಿ ಜೀವನ ಸಾಗಿಸುತ್ತಿದ್ದ ನಮ್ಮನ್ನು ಬೀದಿಗೆ ತಳ್ಳಿದೆ‌’ ಎಂದು ಪ್ರತಿಭಟನಾಕಾರರು ದೂರಿದರು.

ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ‌, ‘ಆರು ತಿಂಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗಳ ಕುರಿತು ಚರ್ಚಿಸಿ ಇತ್ಯರ್ಥಪಡಿಸಲಾಗುವುದು ಎಂದು ಸರ್ಕಾರ ನೀಡಿದ್ದ ಭರವಸೆ ಸುಳ್ಳಾಗಿದೆ’ ಎಂದು ಕಿಡಿಕಾರಿದರು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊರಗುತ್ತಿಗೆ ನೌಕರರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಹೊರಡಿಸಿದ ಆದೇಶವನ್ನು ಪರಿಗಣಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮರು ಕೆಲಸಕ್ಕೆ ಸೇರಿಸಿಕೊಂಡು ನಿವೃತ್ತಿ ವಯಸ್ಸಿನ
ವರೆಗೂ ಸೇವೆಯಲ್ಲಿ ಮುಂದುವರಿಸಬೇಕು. ವೇತನದಲ್ಲಿ ಕಡಿತ ಮಾಡಿರುವ ಭವಿಷ್ಯ ನಿಧಿ, ಇಎಸ್‍ಐ ಖಾತೆಗಳಿಗೆ ಜಮಾ ಮಾಡದ ಹಣ ಹಿಂದಿರುಗಿಸಬೇಕು. ಬಾಕಿ ಉಳಿಸಿಕೊಂಡಿರುವ ವೇತನವನ್ನು ನೀಡಬೇಕು. ವಾರಕ್ಕೊಂದು ರಜೆ ಕೊಡುವುದನ್ನು ಕೂಡಲೇ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !